ಬೆಂಗಳೂರು
ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಆಂಧ್ರಪ್ರದೇಶ ಮೂಲದ ದಂಪತಿ ಶಂಕಾಸ್ಪದವಾಗಿ ಸಾವನ್ನಪ್ಪಿರುವ ದುರ್ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.ಆಂಧ್ರದ ಚಿತ್ತೂರು ಮೂಲದ ದೇವರಚಿಕ್ಕನಹಳ್ಳಿಯಲ್ಲಿ ವಾಸಿಸುತ್ತಿದ್ದ ನಾಗಮುನಿ (36) ಹಾಗೂ ಅವರ ಪತ್ನಿ ಪದ್ಮಾವತಿ (33)ಎಂದು ಮೃತ ದಂಪತಿಯನ್ನು ಗುರುತಿಸಲಾಗಿದೆ.15 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಯು ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು
ನಾಗಮುನಿ ಪ್ಲೇವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪದ್ಮಾವತಿ ಗಾರ್ಮೆಂಟ್ಸ್ಗೆ ಹೋಗುತ್ತಿದ್ದು ದೇವರ ಚಿಕ್ಕನಹಳ್ಳಿ ಯಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.ದಂಪತಿಯ ಇಬ್ಬರು ಮಕ್ಕಳಾದ ಇಂದುಶ್ರೀ (13) ಹಾಗೂ ಪಾಂಡು (6) ಪದ್ಮಾವತಿಯ ತವರು ಚಿತ್ತೂರಿನಲ್ಲಿ ಓದುತ್ತಿದ್ದರು.
ನ. 10 ರಂದು ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಮುಂಜಾನೆ ಕಾಫಿ ಮಾಡಲು ಹಾಲನ್ನು ಒಲೆಯ ಮೇಲೆ ಇಟ್ಟಿದ್ದು, ಅನಿಲ ಸೋರಿಕೆಯಿಂದ ಇಬ್ಬರು ಮಲಗಿದ್ದ ಮಗ್ಗುಲಲ್ಲೆ ಮೃತಪಟ್ಟಿದ್ದಾರೆ.ಮನೆಯ ಬಾಗಿಲನ್ನು ಸಂಜೆ 6ರವರೆಗೂ ತೆಗೆಯದಿದ್ದರಿಂದ ಆತಂಕಗೊಂಡು ಪಕ್ಕದ ಮನೆಯಲ್ಲಿದ್ದ ನಾಗಮಣಿ ಅವರ ನಾದಿನಿ ಬಂದು ನೋಡಿದಾಗ ಇಬ್ಬರು ಮೃತಪಟ್ಟಿರುವುದು ಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪರಿಶೀಲನೆ ನಡೆಸಿದ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮನೆಯಲ್ಲಿ ಒಲೆಯ ಮೇಲೆ ಇಟ್ಟ ಹಾಲು, ಅನ್ನ ಇನ್ನಿತರ ಆಹಾರ ಪದಾರ್ಥಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಬಂದ ನಂತರ ದಂಪತಿಯ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








