ಅನರ್ಹರಿಗೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲಾ : ಈಶ್ವರಪ್ಪ

ತುರುವೇಕೆರೆ

      ಬಿ.ಎಸ್.ಯಡಿಯೂರಪ್ಪನವರಿಗೆ ರಾಜ್ಯದ ಎಲ್ಲಾ ಮಠ ಮಾನ್ಯಗಳ ಶ್ರೀಗಳ ಆಶೀರ್ವಾದವಿದ್ದು ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನಬೇಡ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

      ಪಟ್ಟಣದ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಡಾ:ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತ್ಯಾಗಮಯ ಜೀವನದ 25 ಸಾರ್ಥಕ ವರ್ಷಗಳನ್ನು ಪೂರೈಸಿರುವ ಸ್ವಾಮೀಜಿಗಳ ಸಾಧನೆ ವಿಶೇಷವಾದದ್ದು, ನಾವು ಒಂದು ದಿನ ನಮ್ಮ ಹೆಂಡತಿ ಮಕ್ಕಳನ್ನು ಬಿಟ್ಟಿರಲು ಸಾಧ್ಯವಿಲ್ಲ. ಆದರೆ ಮಠಾಧೀಶರು ಸರ್ವಸ್ವವನ್ನೂ ತ್ಯಜಿಸಿ ತ್ಯಾಗಜೀವನ ನಡೆಸುವುದರೊಂದಿಗೆ ಸನ್ಯಾಸಾಚರಣೆ ದೊಡ್ಡ ಸಾಧನೆಯೇ ಸರಿ ಎಂದರು.

     ಅನರ್ಹರು ಮೈತ್ರಿ ಸರ್ಕಾರದಿಂದ ಹೊರ ಬಂದಿದ್ದರಿಂದ ನಮ್ಮ ಸರ್ಕಾರ ಬಂದಿದೆ. ಅವರಿಗೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ಅವರು ಹೇಳಿದಂತೆ ಬೆಂಬಲ ಕೊಡುತ್ತೇವೆ. ನಾಳೆ ಸುಪ್ರಿಂಕೋರ್ಟ್‍ನಲ್ಲಿ ಏನು ತೀರ್ಪು ಹೊರಬೀಳುವುದೋ ಕಾದುನೋಡುತ್ತಿದ್ದು ಒಳ್ಳೆಯದೆ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

     ದಾರಿ ತಪ್ಪಿದ ಎಂಡಿಎಲ್: ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಡಿ.ಲಕ್ಷ್ಮೀನಾರಾಯಣ್ ಕಾಂಗ್ರೆಸ್‍ಗೆ ಹೋಗಿ ದಾರಿ ತಪ್ಪಿದ ಮಗನಾದರು. ಮುಂದಿನ ದಿನಗಳಲ್ಲಿ ಮರಳಿ ನಮ್ಮ ಪಕ್ಷಕ್ಕೆ ಬರುತ್ತೀರೆಂದು ಭಾವಿಸಿದ್ದೇನೆಂದು ಸಭೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂಡಿಎಲ್ ಗೆ ಮಾತಿನ ಛಾಟಿ ಬೀಸಿದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಸಾಲಜಯರಾಮ್ ಮಾತನಾಡಿ, ಶ್ರೀಗಳ ಆಶೀರ್ವಾದ ಹಾಗೂ ಕ್ಷೇತ್ರದ ಜನತೆ ಆಶೀರ್ವಾದದಿಂದ ನಾನಿಂದು ಶಾಸಕನಾಗಿದ್ದೇನೆ, ಮಠ ಮಾನ್ಯಗಳ ಶ್ರೋಯೋಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ, ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಮಠ ಮಾನ್ಯಗಳಿಗೆ ನನ್ನ ಅಳಿಲು ಸೇವೆಗೆ ಸದಾ ಸಿದ್ದ ಎಂದರು.

    ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ವೇದಿಕೆಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಆಂಧ್ರದ ಶ್ರೀಶೈಲಂ ಮಠದ ಗಿರಿರಾಜ ಸೂರ್ಯ ಸಿಂಹಾಸ ನಾಧೀಶ್ವರ ಡಾ:ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿ, ಸಂಸಾರದ ಸುಖವನ್ನು ತ್ಯಜಿಸಿ ಮಠದ ಕಾನೂನಿಗೆ ಒಳಪಟ್ಟು ಪಟ್ಟಾಧಿಕಾರ ವಹಿಸಿಕೊಂಡ ನಂತರ ಮಠವೇ ನನ್ನ ಮನೆ, ಸಮಾಜವೇ ನನ್ನ ಬಂಧುಗಳು ಸರ್ವಜನರ ಹಿತವೇ ಮುಖ್ಯ ಎಂಬುದಾಗಿ ಯಾವ ಮಠದ ಸ್ವಾಮೀಜಿ ಬದುಕುತ್ತಾರೋ ಅವರು ಮಾತ್ರ ಭಕ್ತರಿಂದ ಇಂತಹ ರಜತ ಮಹೋತ್ಸವಗಳನ್ನು ನಿರೀಕ್ಷಿಸಲು ಸಾಧ್ಯ.

     ನೊಣವಿನಕೆರೆ ಹಾಗೂ ವಿರಕ್ತ ಮಠದ ಜವಾಬ್ದಾರಿ ಹೊತ್ತ ಸ್ವಾಮೀಜಿಗಳು ಇಂದು ಎರಡೂ ಕಡೆಗಳಲ್ಲೂ ಭಕ್ತರ ಸಹಕಾರದೊಂದಿಗೆ ಮಠವನ್ನು ಸುಸ್ಥಿತಿಯತ್ತ ಕೊಂಡೊಯ್ದಿದ್ದಾರೆ, ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿ ಕೆಲಸ ಮಾಡುವ ಅವರು ಮಠವನ್ನು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಅಭಿವೃದ್ಧಿ ಮಾಡಲಿದ್ದಾರೆ ಎಂದರು.

     ಅಜ್ಜಯ್ಯ ಆಶೀರ್ವಾದದಿಂದ ಒಳಿತು: ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಸೇವೆಯ ಫಲದಿಂದ ಮಾತ್ರ ಹಲವು ಜನರು ಸಾರ್ಥಕ ಬದುಕನ್ನು ಕಂಡುಕೊಂಡಿದ್ದಾರೆ. ಸೇವೆಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಿದರೆ ಮಾತ್ರ ಸಾರ್ಥಕ ಜೀವನ ಕಂಡುಕೊಳ್ಳಲು ಸಾಧ್ಯ. ಇಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠ ಇಂದು ಹಲವು ರಾಜಕೀಯ ಮುತ್ಸದ್ದಿಗಳು ಗುರುತಿಸುವಷ್ಟರ ಮಟ್ಟಿಗೆ ಬೆಳೆದಿದ್ದು, ಅದರಲ್ಲಿ ಪ್ರಮುಖವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಠದ ಸದ್ಬಕ್ತರಲ್ಲಿ ಮೊದಲಿಗರು ಅವರಿಗೆ ಒಳ್ಳೆಯದಾಗಿದೆ. ಅದೇ ರೀತಿ ತಾಲ್ಲೂಕಿನ ಶಾಸಕ ಮಸಾಲೆಜಯರಾಮ್ ರಜತ ಮಹೋತ್ಸವದ ಸಂಪೂರ್ಣ ಜವಾಬ್ದಾರಿ ಹೊತ್ತು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರಿಗೆ ರಾಜಕೀಯ ಜೀವನದಲ್ಲಿ ಉತ್ತಮ ಸ್ಥಾನಮಾನಗಳು ಒದಗಿಬರಲಿ ಎಂದು ಆಶೀರ್ವದಿಸಿದರು.

      ಪಟ್ಟಣದಲ್ಲಿ ಭವ್ಯ ಮೆರವಣಿಗೆ: ಪಟ್ಟಣದ ಗಣಪತಿ ಪೆಂಡಾಲ್‍ನಿಂದ ಪ್ರಮುಖ ಬೀದಿಯಲ್ಲಿ ಜಾನಪದ ಕಲಾ ಪ್ರಕಾರದೊಂದಿಗೆ ಸಾವಿರಾರು ಭಕ್ತಾದಿಗಳ ಪಾಲ್ಗೊಂಡು ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಭವ್ಯ ಮೆರವಣಿಗೆ ಮೂಲಕ ಆಂಧ್ರದ ಶ್ರೀಶೈಲಂ ಮಠದ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಡಾ:ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳನ್ನು ವೇದಿಕೆಗೆ ಕರೆತರಲಾಯಿತು.
ರಜತ ಕಿರೀಟ ಧಾರಣೆ: ಡಾ:ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳಿಗೆ ಸಮಸ್ತ ಭಕ್ತಾದಿಗಳಿಂದ ರಜತ ಕಿರೀಟ ಧಾರಣೆ ಹಾಗೂ ಬೆಳ್ಳಿ ಕವಚ ಬೆತ್ತ ನೀಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮ ಯಶಸ್ವಿಗೆ ಕಾರಣೀಭೂತರಾದ ಸಮಸ್ತ ಭಕ್ತವೃಂದ, ಮಠದ ಭಕ್ತರ ಸಹಕಾರ ಹಾಗೂ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

     ಮಾಜಿ ಶಾಸಕರುಗಳಾದ ಎಂ.ಡಿ.ಲಕ್ಷ್ಮೀನಾರಾಯಣ್, ನಂಜಾಮರಿ, ಹಾಗೂ ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಮ.ಕವಟಗಿಮಠ, ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ.ಸೋಮಶೇಖರ್, ಮಾತನಾಡಿದರು.

     ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ಕರಜಗಿಮಠ ಮಹಾರಾಷ್ಟ್ರ, ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹಾಲಸ್ವಾಮಿ ಮಠ, ಹುಣಸೇಘಟ್ಟ, ಡಾ:ಮು.ನಿ.ಪ್ರ.ಮುಮ್ಮಡಿ ನಿರ್ವಾಣ ಸ್ವಾಮಿಗಳು ದೇಗಲುಮಠ ಕನಕಪುರ, ಡಾ.ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕುಪ್ಪೂರುಗದ್ದಿಗೆ ಮಠ ಸೇರಿದಂತೆ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಬಿ.ಪಿ.ವೀರಭದ್ರಪ್ಪ, ಎಸ್.ಜೆ.ಆರ್.ಕಾಲೇಜು ಚೇರ್ಮನ್ ಡಾ.ವೇದಮೂರ್ತಿ, ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಿದಾನಂದ್, ಕೆ.ಕೆ.ಛಾರಿಟಬಲ್ ಅವಿನಾಶ್ ಪಾಳೇಗಾರ್, ಶಿವಮೊಗ್ಗ ಎ.ಪಿ.ಎಂ.ಸಿ. ಅಧ್ಯಕ್ಷ ಜ್ಯೋತಿಪ್ರಕಾಶ್, ಮುಖಂಡರುಗಳಾದ ಎ.ಐ.ಸಿ.ಸಿ. ಸದಸ್ಯ ಸುಬ್ರಹ್ಮಣ್ಣಿ ಶ್ರೀಕಂಠೇಗೌಡ, ಹೆಚ್.ಮಹೇಶ್, ದುಂಡಾ ರೇಣುಕಪ್ಪ, ಕೊಂಡಜ್ಜಿ ವಿಶ್ವಣ್ಣ, ಗುರುಚನ್ನಬಸವಾರಾಧ್ಯ, ಎಸ್.ಎಂ.ಕುಮಾರಸ್ವಾಮಿ, ಇಂಡಿಯನ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ರುದ್ರಯ್ಯ ಹಿರೇಮಠ್, ದೀಪು ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯ ನಟೇಶ್ ಮತ್ತು ತಾ.ವೀರಶೈವ ಸಮಾಜ, ಬಸವೇಶ್ವರ ಯುವಕ ಸಂಘ, ಮಹಿಳಾ ಸಮಾಜ ಸೇರಿದಂತೆ ಅನೇಕ ಶ್ರೀಗಳ ಭಕ್ತರು ಪಾಲ್ಗೊಂಡಿದ್ದರು. ಸಂಜೆ ಸ್ನೇಹ ಕಪ್ಪಣ್ಣ ಮತ್ತು ತಂಡದವರಿಂದ “ಕಾವ್ಯಬಾಗಿನ” ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap