ಹುಳಿಯಾರು : ರಾತ್ರೋರಾತ್ರಿ ಅಧಿಕಾರಿಗಳಿಂದ ನಾಮಫಲಕಗಳ ತೆರವು..!

ಬೆಳಂಬೆಳಗ್ಗೆಯಿಂದಲೇ ನಿಷೇಧಾಕ್ಷೆ ಜಾರಿ

ಹುಳಿಯಾರು:

     ಹುಳಿಯಾರಿನ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಬಳಿಯ ವೃತ್ತದಲ್ಲಿ ಕನಕ ಯುವ ಸೇನೆ ಹಾಕಿದ್ದ ಕನಕ ನಾಮಫಲ ತೆರವು ವಿಚಾರವಾಗಿ ಕನಕಮಠದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಕ್ಕೆ ಬರುವುದಾಗಿ ಹೇಳಿ ಧರಣಿ ಹಿಂಪಡೆಯುವಂತೆ ಮಾಡಿದ್ದ ಅಧಿಕಾರಿಗಳು ರಾತ್ರೋರಾತ್ರಿ ನಾಮಫಲಕ ತೆರವು ಮಾಡಿ ಬೆಳ್ಳಂಬೆಳಗ್ಗೆಯಿಂದಲೇ 144 ಸೆಕ್ಷನ್ ಜಾರಿ ಮಾಡಿದ್ದು ಇಡೀ ದಿನ ಪಟ್ಟಣದಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತು.

     ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಪ್ರಯುಕ್ತ ಈ ಹಿಂದೆ ಅಲ್ಲಿ ನೆಡಲಾಗಿದ್ದ ಕನಕದಾಸ ವೃತ್ತ ಎಂಬ ನಾಮಫಲಕವನ್ನು ತೆಗೆದು ಹಾಕಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕನಕ ಜಯಂತಿ ಆಚರಿಸುವ ಸಲುವಾಗಿ ಅದೇ ವೃತ್ತದಲ್ಲಿ ಕನಕ ಯುವ ಸೇವೆಯ ಯುವಕರು ಪುನಃ ಮಂಗಳವಾರ ನಾಮಫಲಕ ಹಾಕಿದ್ದರು. ಇದನ್ನು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಏಕಾಏಕಿ ತೆರವಿಗೆ ಮುಂದಾದಾಗ ಕುರುಬ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.

     ಈ ಸಂದರ್ಭದಲ್ಲಿ ತಹಶೀಲ್ದಾರ್ ತೇಜಸ್ವಿನಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರಾದರೂ ವಿಫಲರಾದರು. ಅಂತಿಮವಾಗಿ ಕನಕಮಠದ ಶ್ರೀಗಳ ಸಮ್ಮುಖದಲ್ಲಿ ಸಭೆ ನಡೆಸಿ ನಂತರ ತಿರ್ಮಾನ ಮಾಡುವುದಾಗಿಯೂ, ಅಲ್ಲಿಯವರೆವಿಗೂ ಫಲಕ ತೆರವು ಮಾಡುವುದಿಲ್ಲ ಎಂದು ಭರವಸೆ ನೀಡಿ ಧರಣಿ ಹಿಂಪಡೆಯುವಂತೆ ಮಾಡಿದ್ದರು.

     ಆದರೆ ರಾತ್ರಿ ಇದಕ್ಕಿದ್ದಂತೆ ಕನಕ ನಾಮಫಲಕ ಹಾಕಿದ್ದ ಸರ್ಕಲ್‍ನಲ್ಲಿ ಯಾರೊಬ್ಬರೂ ಇಲ್ಲದನ್ನು ಕಂಡ ಕೆಲ ಯುವಕರ ಗುಂಪೊಂದು ಅದೇ ವೃತ್ತದಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿ ಸರ್ಕಲ್ ಎಂದು ನಾಮಫಲಕ ಹಾಕಿದರು. ಇದನ್ನು ಗಮನಿಸಿ ಕುರುಬ ಸಮುದಾಯದವರು ವೃತ್ತದ ಬಳಿ ಜಮಾವಣೆಗೊಂಡು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಒಂದು ನಾಮಫಲಕ ಇರುವಾಗ ಮತ್ತೊಂದು ನಾಮಫಲಕ ಹಾಕುವ ಅಗತ್ಯವೇನಿತ್ತು. ಜಾತಿಜಾತಿಗಳ ನಡುವೆ ಹುಳಿ ಹಿಂಡುವ ಪ್ರಯತ್ನ ಇದಾಗಿದ್ದು ತಕ್ಷಣ ತೆರವು ಮಾಡುವಂತೆ ಪಟ್ಟು ಹಿಡಿದರು.

      ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕ್ಷಣಾರ್ಧದಲ್ಲಿ ಪೊಲೀಸರ ದಂಡು ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳನ್ನು ಸಮಾಧಾನ ಪಡಿಸಿ ಸ್ಥಳದಿಂದ ತೆರಳುವಂತೆ ಮಾಡಿದರು. ಎರಡೂ ಗುಂಪಿನವರು ವೃತ್ತದ ಬಳಿ ಇಲ್ಲದಿದ್ದಾಗ ರಾತ್ರೋರಾತ್ರಿ ಅಧಿಕಾರಿಗಳೇ ಕನಕ ಹಾಗೂ ಶಿವಕುಮಾರಸ್ವಾಮಿ ನಾಮಫಲಕ ಎರಡನ್ನೂ ತೆರವು ಮಾಡಿ ಸ್ಥಳಕ್ಕೆ ಪೊಲೀಸರನ್ನು ನಿಯೋಜಿಸಿದರು.

     ಅಲ್ಲದೆ ಬೆಳಗ್ಗೆ 5 ಗಂಟೆಯಿಂದಲೇ ಹುಳಿಯಾರು ಪಟ್ಟಣದಲ್ಲಿ ಮುಂಜಾಗ್ರತೆ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ತಹಶೀಲ್ದಾರ್ ನಿಷೇಧಾಜ್ಞೆ ಜರಿ ಮಾಡಿದರು. ಪಟ್ಟಣಕ್ಕೆ ನಾಲ್ಕು ನೂರಕ್ಕೂ ಹೆಚ್ಚು ಪೊಲೀಸರನ್ನು ಕರೆಸಿ ಗಲ್ಲಿಗಲ್ಲಿಯಲ್ಲೂ ಪೊಲೀಸರನ್ನು ನಿಯೋಜಿಸಲಾಯಿತು. ಒಂದರ್ಥದಲ್ಲಿ ಪಟ್ಟಣದಲ್ಲಿ ಇಡೀ ದಿನ ಬಿಗಿಯಾದ ಪೊಲೀಸ್ ಪಹರೆಯಿತ್ತು. ಒಟ್ಟಾರೆ ಈ ಪ್ರಕರಣ ಈಗ ಬೂಧಿ ಮುಚ್ಚಿದ ಕೆಂಡದಂತ್ತಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯುವುದೋ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap