ಸ್ಮಾರ್ಟ್ ಸಿಟಿ : ನಾಮಫಲಕಗಳೇ ಇಲ್ಲ ಕಾಮಗಾರಿಗಳು

ತುಮಕೂರು
ವಿಶೇಷ ವರದಿ : ರಾಕೇಶ್.ವಿ
    ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದ ಮಾಹಿತಿಯ ನಾಮಫಲಕಗಳು ಎಲ್ಲ ಕಡೆಯು ಕಾಣುತ್ತಿಲ್ಲ. ಕೆಲ ಕಡೆಗಳಲ್ಲಿ ಬಿಟ್ಟರೆ ಉಳಿದ ಪ್ರಮುಖ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲೇ ನಾಮಫಲಕಗಳು ಕಾಣದಾಗಿವೆ.ಕಾಮಗಾರಿ ಆರಂಭವಾದಾಗ ಸುಮಾರು ಕಡೆಗಳಲ್ಲಿ ಕಾಮಗಾರಿಯ ನಾಮಫಲಕಗಳು ಇರಲಿಲ್ಲ. ಅದರ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದ ನಂತರ ಕೆಲಕಡೆಗಳಲ್ಲಿ ನಾಮಫಲಕಗಳನ್ನು ಹಾಕಲಾಗಿದೆ. ಆದರೂ ಇನ್ನೂ ಕೆಲ ಪ್ರಮುಖ ಕಾಮಗಾರಿಗಳಾದ ಎಂಜಿ ಕ್ರೀಡಾಂಗಣ, ಬಸ್ ನಿಲ್ದಾಣ, ಪುರಭವನ, ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ರೀತಿಯ ಮಾಹಿತಿ ಫಲಕಗಳು ಅಳವಡಿಕೆಯಾಗಿಲ್ಲ.
    ಸ್ಮಾರ್ಟ್ ಸಿಟಿಯ ಕಚೇರಿ ಮೂಲಗಳ ಪ್ರಕಾರ ಈಗ ಹಾಕಲಾಗಿರುವ ಮಾಹಿತಿ ಫಲಕಗಳನ್ನು ಆಯಾ ಕಾಮಗಾರಿಯ ಗುತ್ತಿಗೆದಾರರೇ ಹಾಕಬೇಕು. ಆ ಪ್ರಕಾರ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆ, ಎಂಜಿ ರಸ್ತೆ ಆರಂಭ, ವಿವೇಕಾನಂದ ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ ವೃತ್ತ, ವಿನಾಯಕ ನಗರ, ಎಸ್‍ಎಸ್‍ಪುರಂ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ. ಒಂದೊಂದು ನಾಮಫಲಕದ ಅಳತೆಯು ಅಗಲ 1.5 ಘಿ ಉದ್ದ 1 ಮೀಟರ್ ಇದ್ದು, ಇದರಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.
     ಒಂದು ಮಾಹಿತಿಯ ನಾಮಫಲಕ ಎಂದರೆ ಅದರಲ್ಲಿ ಕಾಮಗಾರಿಯ ಬಹುವರ್ಣ ಚಿತ್ರಣ, ಕಾಮಗಾರಿಯ ಹೆಸರು, ಗುತ್ತಿಗೆದಾರರ ಹೆಸರು
ಮತ್ತು ವಿಳಾಸ ಹಾಗೂ ಅವರ ದೂರವಾಣಿ ಸಂಖ್ಯೆ, ಯೋಜನೆಯ ವೆಚ್ಚ, ಕಾಮಗಾರಿ ಪ್ರಾರಂಭ ವಾಗುವ ದಿನಾಂಕ ಮತ್ತು ಮುಗಿಯುವ ದಿನಾಂಕ ಇರಬೇಕು. ಜೊತೆಗೆ ಇವುಗಳು ಸಾರ್ವಜನಿಕರಿಗೆ ಸುಲಭವಾಗಿ ಓದಲು ಕಾಣುವಂತೆ ಇರಬೇಕು. ಆದರೆ ಈಗ ಹಾಕಲಾದ ಫಲಕಗಳಲ್ಲಿ ಒಂದೊಂದು ಫಲಕದಲ್ಲಿ ಒಂದೊಂದು ರೀತಿಯಲ್ಲಿ  ಮಾಹಿತಿಯನ್ನು ನೀಡಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಮಾಹಿತಿ ಫಲಕಗಳೇ ಇಲ್ಲ.
ಇಲ್ಲಿ ಮಾಹಿತಿ ಫಲಕಗಳೇ ಇಲ್ಲ
     ಸ್ಮಾರ್ಟ್ ಸಿಟಿ ಹಾಗೂ ಆಯಾ ಇಲಾಖೆಗಳ ಸಹಯೋಗದಲ್ಲಿ ಕೆಲ ಕಾಮಗಾರಿಗಳು ನಡೆಯುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಬಸ್ ನಿಲ್ದಾಣ, ಮಹಾತ್ಮಗಾಂಧಿ ಕ್ರೀಡಾಂಗಣ, ಪುರಭವನದಲ್ಲಿನ ಕಮಾಂಡಿಂಗ್ ಸೆಂಟರ್, ಜಿಲ್ಲಾಸ್ಪತ್ರೆ ಇಲ್ಲಿ ಯಾವುದೇ ರೀತಿಯ ಮಾಹಿತಿ ಫಲಕಗಳು ಕಾಣುತ್ತಿಲ್ಲ.
     ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ: ಇಲ್ಲಿ ಜೂನ್ 7ರಂದು 100 ಕೋಟಿ ರೂಗಳ ವೆಚ್ಚದ ಕಾಮಗಾರಿಗೆ ಶಿರಾ ಶಾಸಕ ಬಿ.ಸತ್ಯನಾರಾಯಣರವರು ಶಂಕು ಸ್ಥಾಪನೆ ನೆರವೇರಿಸಿದಾಗ ಒಂದು ನಾಮಫಲಕವನ್ನು ಅಳವಡಿಸಲಾಗಿತ್ತು. ಮರುದಿನವೇ ಅದನ್ನು ತೆಗೆಯಲಾಯಿತು. ಇದೀಗ ಬಸ್ ನಿಲ್ದಾಣದಲ್ಲಿದ್ದ ಕಚೇರಿಯನ್ನು ಅಂತರಸನಹಳ್ಳಿ ಮಾರುಕಟ್ಟೆ ಪಕ್ಕದಲ್ಲಿರುವ ಡಿಪೋಗೆ ವರ್ಗಾಯಿಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಲಿದೆ. ಆದರೆ  ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲದಾಗಿದೆ.
     ಜಿಲ್ಲಾಸ್ಪತ್ರೆ ಆವರಣದಲ್ಲಿ ಟ್ರಾಮಾ ಕೇರ್ ಸೆಂಟರ್: ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಟ್ರಾಮಾ ಕೇರ್ ಸೆಂಟರ್ ಅನ್ನು ನಿರ್ಮಾಣ ಮಾಡಲು ಜೂನ್ 7ರಂದು ಅಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್‍ರು ಶಂಕು ಸ್ಥಾಪನೆ ನೆರವೇರಿಸಿದ್ದರು. ಅಂದು ಕೂಡ ಬ್ಯಾನರ್ ರೂಪದಲ್ಲಿ ಮಾಹಿತಿಯನ್ನು ಹಾಕಲಾಗಿತ್ತು. ನಂತರದಲ್ಲಿ ಅಲ್ಲಿ ಯಾವುದೇ ಮಾಹಿತಿಯ ಫಲಕವನ್ನು ಅಳವಡಿಸಿಲ್ಲ.
ಮಹಾತ್ಮಗಾಂಧಿ ಕ್ರೀಡಾಂಗಣ:
 
      ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರು, 52 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೀಗ ಕಟ್ಟಡದ ಮುಂಭಾಗದಲ್ಲಿ ಕೇವಲ ಪುನರಾಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಕ್ರೀಡಾಪಟುಗಳು ಸಹಕರಿಸಬೇಕು ಎಂಬುದಾಗಿ ಒಂದು ಬ್ಯಾನರ್‍ಅನ್ನು ಅಳವಡಿಸಿದ್ದಾರೆ ಹೊರತು, ಕಾಮಗಾರಿಯ ಮಾಹಿತಿ ಹಾಕಿಲ್ಲ.
ಪುರಭವನದ ಬಳಿ ಕಮ್ಯಾಂಡಿಂಗ್ ಸೆಂಟರ್
     ಮಹಾನಗರ ಪಾಲಿಕೆ ಆವರಣದಲ್ಲಿರುವ ಪುರಭವನದಲ್ಲಿ ಕೃತಕ ಇಂಟಿಗ್ರೇಟೆಡ್ ಕಮ್ಯಾಂಡಿಂಗ್ ಸೆಂಟರ್‍ಅನ್ನು ನಿರ್ಮಾಣ ಮಾಡಲಾಗಿದ್ದು, ಇನ್ನೂ ಪ್ರಾಯೋಗಿಕವಾಗಿ ಕಾರ್ಯ ಮಾಡಲಾಗುತ್ತಿದೆ ಹೊರತು ಇನ್ನೂ ಪೂರ್ಣ ಪ್ರಮಾಣದಲ್ಲಿ ಚಾಲನೆಗೆ ಬಂದಿಲ್ಲ. ಇಲ್ಲಿ ಕಮ್ಯಾಂಡಿಂಗ್ ಸೆಂಟರ್ ಇದೆಯೆಂದಾಗಲಿ, ಇಲ್ಲಿ ಸ್ಮಾರ್ಟ್ ಸಿಟಿಯಿಂದ ಕಾಮಗಾರಿ ಮಾಡಿದರೆಂದಾಗಲಿ ಯಾವುದೇ ಮಾಹಿತಿ ಇಲ್ಲ.
 ತುಮಕೂರು ವಿವಿಯಲ್ಲಿನ ಉದ್ಯಾನವನ:
     ತುಮಕೂರು ವಿವಿಯಲ್ಲಿ ಬರೊಬ್ಬರಿ 61 ಲಕ್ಷ ವೆಚ್ಚದಲ್ಲಿ ಹೆಲಿಪ್ಯಾಡ್ ಸ್ಥಳವನ್ನು ಅಭಿವೃದ್ಧಿ ಮಾಡಲಾಯಿತು. ಈಗಾಗಲೆ ಅದು ಹಾಳಾಗಿ ಸ್ಮಾರ್ಟ್ ಸಿಟಿಯ ಕಾಮಗಾರಿ ಎಂಬುದಕ್ಕೆ ಯಾವುದೇ ಅವಶೇಷಗಳು ಇಲ್ಲದಾಗಿದೆ. ಇಲ್ಲಿ ಮಾಡಲಾದ ಅಭಿವೃದ್ದಿ ಕಾಮಗಾರಿಯಾದರೂ ಏನು? ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲಿ ದೊರೆಯುವುದಿಲ್ಲ.
ವಿಜ್ಞಾನ ವಿಷಾಯಾಧಾರಿತ ಉದ್ಯಾನವನ:
     ಅಮಾನಿಕೆರೆ ಉದ್ಯಾನವನದ ಬಲಭಾಗದಲ್ಲಿ ವಿಜ್ಞಾನ ವಿಷಯಾಧಾರಿತ ಉದ್ಯಾನವನವನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಈಗಾಗಲೇ ಹಲವು ಉಪಕರಣಗಳನ್ನು ಅಳವಡಿಸಲಾಗಿದೆ. ಇಲ್ಲಿಯೂ ಕೂಡ ಯಾವುದೇ ರೀತಿಯ ಮಾಹಿತಿಯ ನಾಮಫಲಕಗಳು ಇಲ್ಲ. ಈ ಕಾಮಗಾರಿ ಪ್ರಾರಂಭವಾಗಿದ್ದು ಯಾವಾಗ, ಮುಕ್ತಾಯವಾಗುವುದು ಯಾವಾಗ, ಅದರ ಖರ್ಚು ವೆಚ್ಚ ಎಷ್ಟು ಎಂಬುದು ನಿಗೂಢವಾಗಿದೆ.
ಹಾಕಲಾದ ನಾಮಫಲಕಗಳಲ್ಲಿ ಲೋಪದೋಷಗಳು
      ನಗರದಲ್ಲಿ ಹಲವು ಕಡೆಗಳಲ್ಲಿ ಹಾಕಲಾದ ಮಾಹಿತಿಯ ನಾಮಫಲಕಗಳಲ್ಲಿ ಕೆಲವೊಂದು ಲೋಪದೋಷಗಳು ಇವೆ. ಒಂದೊಂದು ನಾಮಫಲಕಗಳಲ್ಲಿ ಒಂದೊಂದು ರೀತಿಯಲ್ಲಿ ಮಾಹಿತಿಯನ್ನು ಹಾಕಲಾಗಿದೆ. ಇದರಲ್ಲಿ ಸೂಕ್ತ ಮಾಹಿತಿ ದೊರೆಯದಾಗಿದೆ.ಸ್ಮಾರ್ಟ್ ಲಾಂಜ್‍ನ ಮಾಹಿತಿ ಫಲಕ: ಅಮಾನಿಕೆರೆ ಆವರಣದಲ್ಲಿರುವ ಸ್ಮಾರ್ಟ್ ಲಾಂಜ್ ಬಗೆಗಿನ ಮಾಹಿತಿ ಫಲಕವು ಚಿಕ್ಕ ಅಳತೆಯುಳ್ಳದ್ದಾಗಿದ್ದು, ಇದರಲ್ಲಿನ ಮಾಹಿತಿ ಯಾರಿಗೂ ಅರ್ಥವಾಗದಾಗಿದೆ. ಇದರಲ್ಲಿ ಕಾಮಗಾರಿಯ ಪ್ರಾರಂಭ ದಿನಾಂಕ, ಮುಕ್ತಾಯದ ದಿನಾಂಕ ಹಾಗೂ ಸಂಬಂಧಿಸಿದವರ ದೂರವಾಣಿ ಸಂಖ್ಯೆ ಇಲ್ಲ. ಜೊತೆಗೆ ಸ್ಮಾರ್ಟ್ ಲಾಂಜ್ ಬಗೆಗಿನ ನೀಲಿನಕ್ಷೆಯಾಗಲಿ, ಬಹುವರ್ಣ ಚಿತ್ರವಾಗಲಿ ಇಲ್ಲ.
     ಗಾಂಧೀನಗರದಲ್ಲಿ ಹಾಕಲಾದ ನಾಮಫಲಕ: ಗಾಂಧೀನಗರದಲ್ಲಿ ನಗರ ಶಾಸಕರ ಮನೆ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿಯ ಒಂದು ನಾಮಫಲಕವನ್ನು ಕಾಣಬಹುದು. ಇದು ಯುಟಿಲಿಟಿ ಚೇಂಬರ್‍ಗಳಲ್ಲಿ ಹಾಕಲಾಗುವ ವಿವಿಧ ಕೇಬಲ್‍ಗಳ ಅಳವಡಿಕೆ ಬಗ್ಗೆ ಹಾಕಿರುವ ಮಾಹಿತಿಯ ಫಲಕ. ಆದರೆ ಇದರಲ್ಲಿ ಎಷ್ಟು ದಿನಗಳ ಕಾಲ ಕಾಮಗಾರಿಗೆ ಗಡುವು ನೀಡಲಾಗಿದೆ ಎಂಬುದು ಇದೆ ಹೊರತು ಪ್ರಾರಂಭ ಹಾಗೂ ಮುಕ್ತಾಯದ ದಿನಾಂಕ ಇಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link