ಸರ್ಕಾರವೇ ನೇರವಾಗಿ ರೈತರ ಶೇಂಗಾವನ್ನು ಖರೀದಿಸಲಿ..!

ಚಳ್ಳಕೆರೆ

     ಸದಾಕಾಲ ನೀರಿನ ಸೌಲಭ್ಯವಿಲ್ಲದೆ ಬಳಲಿ ಬೆಂಡಾಗಿದ್ದ ತಾಲ್ಲೂಕಿನ ರೈತರು ಈ ವರ್ಷ ಮಾತ್ರ ಉತ್ತಮ ಮಳೆ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ಬೆಳೆಯನ್ನು ಕಾಣುವ ಕನಸು ಕಾಣುತ್ತಿದ್ದು, ರೈತರು ಬೆಳೆದ ಶೇಂಗಾ ಬೆಳೆಗೆ ಸರ್ಕಾರ ಹೆಚ್ಚಿನ ಬೆಲೆಯನ್ನು ನೀಡಿ ಖರೀದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಸರ್ಕಾರವನ್ನು ಆಗ್ರಹಿಸಿದ್ಧಾರೆ.

      ಅವರು, ಭಾನುವಾರ ನಗರದ ಪಾವಗಡ ರಸ್ತೆಯಲ್ಲಿರುವ ಕೆಲವು ಜಮೀನುಗಳಿಗೆ ಭೇಟಿ ನೀಡಿ ಪ್ರಸ್ತುತ ಈಗಿರುವ ಸ್ಥಿತಿಯಲ್ಲಿ ಒಂದು ಗಿಡಕ್ಕೆ 7 ರಿಂದ 8 ಕಾಯಿ ಮಾತ್ರ ಲಭ್ಯವಿದ್ದು, ಸಮದಾನಕರ ಬೆಳೆಯಾಗಲಿದೆ ಎಂಬ ಆಶಾಭಾವನೆ ರೈತರದ್ದಾಗಿದೆ. ಆದರೆ, ಕಳೆದ ಕೆಲವು ದಿನಗಳ ಹಿಂದೆ ಶೇಂಗಾ ಒಂದು ಕ್ವಿಂಟಾಲ್‍ಗೆ 6 ರಿಂದ 8 ಸಾವಿರವಿದ್ದು, ಈಗ ಮೂರು ಸಾವಿರಕ್ಕೆ ಕುಸಿದಿದೆ. ಪ್ರತಿಬಾರಿಯೂ ರೈತರು ಬೆಳೆ ಬೆಳೆದು ಮಾರಾಟ ಮಾಡುವ ಸಂದರ್ಭದಲ್ಲಿ ಕೆಲವು ವರ್ತಕರು ಮಾರುಕಟ್ಟೆಯಲ್ಲಿ ಶೇಂಗಾಗೆ ಬೆಲೆ ಇಲ್ಲವೆಂದು ಕೃತಕ ಅಭಾವ ಹುಟ್ಟಿಸಿ ಶೇಂಗಾವನ್ನು ಅತಿ ಕಡಿಮೆ ದರಕ್ಕೆ ಖರೀದಿಸುತ್ತಾರೆ.

     ಆದ್ದರಿಂದ ಸರ್ಕಾರ ಶೇಂಗಾ ಬೆಳೆಗೆ ಉತ್ತಮ ಬೆಲೆ ನಿಗದಿ ಪಡಿಸಬೇಕು. ಶೇಂಗಾ ಬಿತ್ತುವಾಗ ಇದ್ದ ಬೆಲೆಯನ್ನು ಈಗ ಅದೇ ಬೆಲೆ ನೀಡಿ ಸರ್ಕಾರ ಖರೀದಿಸಬೇಕು. ಯಾವುದೇ ಕಾರಣಕ್ಕೂ ಮದ್ಯವರ್ತಿಗಳು ವ್ಯಾಪಾರಕ್ಕೆ ಇಳಿಯದಂತೆ ಸರ್ಕಾರ ಗಮನಿಸಬೇಕೆಂದು ಅವರು ಒತ್ತಾಯಿಸಿದ್ಧಾರೆ.

    ಈ ಸಂದರ್ಭದಲ್ಲಿ ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ನರಸಿಂಹಪ್ಪ, ಗೋವಿಂದಪ್ಪ, ಜಯಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link