ದಾವಣಗೆರೆ:
ಬರುವ ಡಿ.5ರಂದು ನಡೆಯಲಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು ಸೇರಿದಂತೆ 13 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಬಿಜೆಪಿಗೆ ಭಾರೀ ಜನ ಬೆಂಬಲ ವ್ಯಕ್ತವಾಗಿದ್ದು, ಈ ಎರಡೂ ಕ್ಷೇತ್ರ ಸೇರಿದಂತೆ 13 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಯ ಗಳಿಸಲಿದೆ ಎಂದು ಹೇಳಿದರು.
ಚುನಾವಣೆಯ ಸಂದರ್ಭದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುವುದು ಸರ್ವೇ ಸಾಮಾನ್ಯ. ಅದರಲ್ಲೂ ವಿಶೇಷವಾಗಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೋ, ಯಾವ ಪಕ್ಷ ಗೆಲ್ಲುವ ಸಾಧ್ಯತೆ ಇರುತ್ತದೋ ಅಂತಹ ಕಡೆ ಟಿಕೆಟ್ ಆಕಾಂಕ್ಷಿಗಳ ದಂಡೆ ಇರುತ್ತದೆ. ಬಿಜೆಪಿಯಲ್ಲಿ ಯಾವುದೇ ಕ್ಷೇತ್ರದಲ್ಲೂ ಬಂಡಾಯ ಇಲ್ಲ. ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿದಾಗ ಬೇಸರ, ನಿರಾಸೆಯಾಗುವುದು ಸಹಜ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗಟ್ಟಿನಿಂದ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುತ್ತೇವೆ ಎಂದರು.
ಮೂರ್ನಾಲ್ಕು ತಿಂಗಳ ಹಿಂದೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು, ನೆರೆ ಪೀಡಿತ ಪ್ರದೇಶಕ್ಕೆ ಅಗತ್ಯ ನೆರವು ನೀಡಲಾಗಿದೆ. ಇನ್ನುಳಿದ ಮೂರುವರೆ ವರ್ಷ ಸುಭದ್ರ ಹಾಗೂ ಜನಪರ ಆಡಳಿತ ನೀಡುವ ಭರವಸೆಯೊಂದಿಗೆ ಜನರ ಬಳಿ ಚುನಾವಣೆಗೆ ಹೋಗುತ್ತಿದ್ದೇವೆ. ಪ್ರತಿ ಚುನಾವಣೆಗೆ ಅದರದ್ದೇ ಆದ ಮಹತ್ವವಿದ್ದು, ಸಂಖ್ಯಾಬಲ ಸೇರಿಸುವುದು ಅಥವಾ ತಪ್ಪಿಸುವುದು ಪ್ರತಿ ಚುನಾವಣೆಯ ಉದ್ದೇಶ ಆಗಿರುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ನಾರಾಯಣ ರಾಣೆ ಶಿವಸೇನೆ ಬಿಟ್ಟು ಬಿಜೆಪಿ ಸೇರಿದಾಗ 42 ಜನರು ಬಿಜೆಪಿ ಸೇರಿದ್ದರು. ಮೂರು ಕಂತಿನಲ್ಲಿ ರಾಜೀನಾಮೆ ನೀಡಿದ ಆ ಎಲ್ಲರೂ ಚುನಾವಣೆಯಲ್ಲಿ ಗೆದ್ದರು. ಒಂದೊಂದು ಸಲ ಒಂದೊಂದು ಫಲಿತಾಂಶ ಕಾಣುತ್ತೇವೆ. ಮಹಾರಾಷ್ಟ್ರಕ್ಕೆ ಅದರದ್ದೇ ಆದ ಇತಿಹಾಸವಿದ್ದು, ಅಲ್ಲಿ ಆಗಿದ್ದು ಇಲ್ಲಿ ಆಗಬೇಕು. ಇಲ್ಲಿ ಆಗಿದ್ದು ಅಲ್ಲಿ ಆಗಬೇಕೆಂದೇನೂ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳೆದ ರಾತ್ರಿ ಮೈಸೂರಿನಲ್ಲಿ ಮದುವೆ ಕಾರ್ಯಕ್ರಮದÀಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ತನ್ವೀರ್ ಸೇಟ್ ಕುತ್ತಿಗೆಯನ್ನು ಚಾಕುವಿನಿಂದ ಇರಿದು ಓಡಿ ಹೋಗಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದು, ಸೇಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.
ತನ್ವೀರ್ ಸೇಟ್ ಮೇಲೆ ದಾಳಿ ಕುರಿತಂತೆ ಎಲ್ಲಾ ಮಾಹಿತಿಯನ್ನೂ ತರಿಸಿಕೊಂಡಿದ್ದೇನೆ. ದಾಳಿಗೆ ಒಳಗಾಗಿರುವ ತನ್ವೀರ್ ಸೇಟ್ಗೆ ಆಗುತ್ತಿದ್ದ ರಕ್ತಸ್ರಾವ ನಿಂತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸೇಟ್ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಚೇತರಸಿಕೊಳ್ಳುತ್ತಿದ್ದಾರೆ. ಆರೋಪಿ ಯುವಕನು ಯಾಕೆ ದಾಳಿ ಮಾಡಿದ ಎಂಬ ಬಗ್ಗೆಯೂ ತನಿಖೆ ನಡೆದಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಸವರಾಜ್ ಬೊಮ್ಮಯಿ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಪೂರ್ವ ವಲಯ ಐಜಿಪಿ ಅಮ್ರಿತ್ಪಾಲ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಸಿಇಓ ಪದ್ಮ ಬಸವಂತಪ್ಪ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿ ಮಮತ, ತಹಶೀಲ್ದಾರ್ ಸಂತೋಷ್ ಕುಮಾರ್, ಪಾಲಿಕೆ ಸದಸ್ಯ ಅಜಯಕುಮಾರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ