ಗುಬ್ಬಿ
ಗುಬ್ಬಿ-ಚೇಳೂರು ಮಾರ್ಗ ಮಧ್ಯೆ ಮಣ್ಣು ಸುರಿದ ರೈಲ್ವೆ ಗುತ್ತಿಗೆದಾರರು ಸುಮಾರು ಎರಡು ತಾಸು ರಸ್ತೆ ಸಂಚಾರ ಅಸ್ತವ್ಯಸ್ತಗೊಳಿಸಿ ನೂರಾರು ವಾಹನಗಳು ಒಂದು ಕಿಮೀ ಬಳಸಿ ಸಾಗುವಂತೆ ಮಾಡಿದ ಘಟನೆ ಪಟ್ಟಣದ ಜ್ಯೋತಿನಗರ ಬಡಾವಣೆ ಬಳಿ ನಡೆಯಿತು.
ರೈಲ್ವೇ ನಿಲ್ದಾಣ ನಂತರದಲ್ಲಿ ಸಾಗುವ ಚೇಳೂರು ರಸ್ತೆ ಕಿರಿದಾಗಿ ಸಾಗಿ ಅಂಡರ್ಪಾಸ್ ಮೂಲಕ ತೆರಳಬೇಕಿದೆ. ಈ ಮಧ್ಯೆ ಕಿರಿದಾದ ರಸ್ತೆಯಲ್ಲೇ ಮಣ್ಣು ಸುರಿದುಕೊಂಡ ರೈಲ್ವೆ ಗುತ್ತಿಗೆದಾರರು ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಿಲ್ಲ. ದಿಢೀರ್ ಲಾರಿಗಳು ಬಂದು ರಸ್ತೆಯಲ್ಲೇ ಮಣ್ಣು ಸುರಿದು ಪ್ರಮುಖ ರಸ್ತೆಯನ್ನೇ ಬಂದ್ ಮಾಡಿದರು.
ಪ್ರತಿ ಸೆಕೆಂಡ್ಗೆ ವಾಹನವೊಂದು ಸಂಚರಿಸುವ ಈ ರಸ್ತೆ ಗುಬ್ಬಿ ಪಟ್ಟಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ದಿಢೀರ್ ರಸ್ತೆ ಸಂಚಾರ ಹೇಗೆ ಬಂದ್ ಮಾಡಿದ್ದೀರಿ ಎಂದು ಸಾರ್ವಜನಿಕರು ಕೆಲ ಕಾಲ ವಿರೋಧ ವ್ಯಕ್ತಪಡಿಸಿದರು. ಆದರೂ ರೈಲ್ವೆ ಗುತ್ತಿಗೆದಾರರು ನಿರ್ಲಕ್ಷ್ಯದ ಮಾತುಗಳಾಡಿದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಎರಡು ತಾಸು ರಸ್ತೆ ಬಂದ್ ಮಾಡಿದ್ದರ ಪರಿಣಾಮ ಎಲ್ಲಾ ವಾಹನಗಳು ಅಂಡರ್ಪಾಸ್ ಮೂಲಕ ಮಾರುತಿನಗರ, ಮಹಾಲಕ್ಷ್ಮೀನಗರ ಬಡಾವಣೆ ಮೂಲಕ ಪಟ್ಟಣದ ಮಧ್ಯಭಾಗದಲ್ಲೇ ಭಾರಿವಾಹನಗಳು, ಸರ್ಕಾರಿ ಬಸ್ಗಳು ಸೇರಿದಂತೆ ಎಲ್ಲಾ ವಾಹನಗಳು ಸಂಚರಿಸಿದವು. ಕಿರಿಕಿರಿ ಉಂಟು ಮಾಡಿದ ರೈಲ್ವೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ತೋರಿದ ಸ್ಥಳೀಯರು ಯಾವುದೇ ಮಾಹಿತಿ ನೀಡದೆ ಮಣ್ಣು ರಸ್ತೆ ಮಧ್ಯೆ ಸುರಿದ ಬಗ್ಗೆ ಕಿಡಿಕಾರಿದರು. ಎರಡು ರೈಲ್ವೇ ಹಳಿಗಳ ರಸ್ತೆ ನಡೆಯುತ್ತಿದ್ದು ಅಲ್ಲಿಗೆ ಮಣ್ಣಿನ ಅವಶ್ಯಕತೆ ಇದೆ. ಹಳಿಗಳ ಎರಡೂ ಬದಿಗೆ ಮಣ್ಣು ಸುರಿಯಲು ಈ ಮಣ್ಣು ತಂದಿರುವುದಾಗಿ ಹೇಳಿದ ಗುತ್ತಿಗೆದಾರರು ವಾಹನ ಸಂಚಾರಕ್ಕೆ ಅನುವು ಮಾಡುವುದಾಗಿ ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಹೇಳಿದರು.
ವಾಹನ ಸಂಚಾರಕ್ಕೆ ಅಡ್ಡಿಯಾದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗುಬ್ಬಿ ಪಿಎಸ್ಐ ಹರೀಶ್ ಮಣ್ಣು ರಸ್ತೆಯಿಂದ ಪಕ್ಕಕ್ಕೆ ಸ್ಥಳಾಂತರಿಸಿ ವಾಹನ ಸಂಚಾರ ಸುಗಮಗೊಳಿಸಿದರು. ನಂತರ ಪರಿಸ್ಥಿತಿ ತಿಳಿಯಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ