ಬೆಂಗಳೂರು
ಪ್ರದೇಶ ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗರ ನಡುವಿನ ಜಗಳ ತೀವ್ರಗೊಂಡಿದ್ದು, ಸಮಸ್ಯೆ ಬಗೆಹರಿಸುವ ಸಲುವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿದೆ.
ಒಂದು ಕಡೆ ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದರೆ ಮತ್ತೊಂದು ಕಡೆ ಕೆಪಿಸಿಸಿಯಲ್ಲಿ ಮೂಲ ಹಾಗೂ ವಲಸೆ ಕಾಂಗ್ರೆಸಿಗರ ಕಚ್ಚಾಟ ತಾರಕಕ್ಕೇರುತ್ತಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸಿಗರ ಧ್ವನಿ ಜೋರಾಗಿದೆ. ಇದು ಉಪಚುನಾವಣೆ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ಉಪಚುನಾವಣೆಯನ್ನು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲು ಈಶ್ವರ್ ಖಂಡ್ರೆ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ಮಾಡಿದೆ.
ಉಪಚುನಾವಣೆಯ ಜವಾಬ್ದಾರಿಯನ್ನು ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೆಗಲಿಗೇರಿಸಿಕೊಂಡರೂ ಅಷ್ಟಾಗಿ ಪಕ್ಷದ ಮೂಲ ನಾಯಕರಿಂದ ಸಹಕಾರ ಸಿಗುತ್ತಿಲ್ಲ. ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಶೀತಲ ಸಮರವೂ ಹೆಚ್ಚಾಗುತ್ತಿದ್ದು, ಇದೆಲ್ಲವೂ ಉಪಚುನಾವಣೆ ಮೇಲೆ ಕರಿನೆರಳಾಗಿ ಪರಿಣಮಿಸಿದೆ. ಈ ಎಲ್ಲಾ ವಿಚಾರದ ಬಗ್ಗೆ ಸಮಗ್ರವಾಗಿ ಚರ್ಚಿಸಲು ಹೈಕಮಾಂಡ್ ಈಶ್ವರ್ ಖಂಡ್ರೆ ಅವರನ್ನು ದೆಹಲಿಗೆ ಕರೆದಿದೆ.
ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಹಿರಿಯ ನಾಯಕರ ಜೊತೆ ಚರ್ಚಿಸಲು ಖಂಡ್ರೆ ಮಂಗಳವಾರ ರಾತ್ರಿ ದೆಹಲಿಗೆ ತೆರಳಿದ್ದಾರೆ. ಉಪಚುನಾವಣೆಯ ಬಹುತೇಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಬೆಂಬಲಿಗ ಅಭ್ಯರ್ಥಿಗಳೇ ಹೆಚ್ಚಾಗಿ ಕಣಕ್ಕಿಳಿದಿದ್ದಾರೆ. ಸಿದ್ದರಾಮಯ್ಯ ಚುನಾವಣೆ ಗೆಲ್ಲಲು ಹಿರಿಯ ನಾಯಕರನ್ನು ಸಂಪರ್ಕಿಸಿ ಸಾಮೂಹಿಕ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಅವರಿಗೆ ಹೇಳುವಷ್ಟರ ಮಟ್ಟಿಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹೀಗಾಗಿ ಸಿದ್ದರಾಮಯ್ಯ ಹಾಗೂ ಹಿರಿಯ ಕಾಂಗ್ರೆಸಿಗರ ನಡುವೆ ಒಗ್ಗಟ್ಟು ಮೂಡಿಸುವ ಅನಿವಾರ್ಯತೆ ಕಾಂಗ್ರೆಸ್ ವರಿಷ್ಠರಿಗೆ ಎದುರಾಗಿದೆ.
ಅಲ್ಲದೇ ಉಪಚುನಾವಣೆಯಲ್ಲಿ ಬಿಜೆಪಿಯಲ್ಲಿನ ಗೊಂದಲಗಳನ್ನು ಲಾಭವಾಗಿ ಪರಿವರ್ತಿಸಿಕೊಂಡು ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಬೇಕು. ಹೀಗಾಗಿಯೇ ಕೆಪಿಸಿಸಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬುಧವಾರ ದೆಹಲಿಯಲ್ಲಿ ಈಶ್ವರ್ ಖಂಡ್ರೆ ಹೈಕಮಾಂಡ್ ಜೊತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆ. ಚುನಾವಣೆ ಬಗ್ಗೆ ಪಕ್ಷದ ಸ್ಥಿತಿ ಗತಿ, ಗೆಲ್ಲುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಬಿ.ಕೆ ಹರಿಪ್ರಸಾದ್, ಜಿ ಸಿ ಚಂದ್ರಶೇಖರ್, ಎಲ್ ಹನುಮಂತಯ್ಯ ಸೇರಿ ಹಲವು ನಾಯಕರು ಬೀಡು ಬಿಟ್ಟಿದ್ದು, ಚುನಾವಣೆ ಕುರಿತು ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ