ದಾವಣಗೆರೆ
ಇದು ವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನೂರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣ ದೃಢಪಟ್ಟಿದ್ದು, ಈ ಪ್ರಮಾಣಪತ್ರ ನೀಡಿ ಸರ್ಕಾರಿ ನೌಕರಿ ಪಡೆದಿದ್ದ 83 ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ ಎಂದು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ಡಾ.ಕೆ.ರಾಮಚಂದ್ರರಾವ್ ತಿಳಿಸಿದರು.
ಬುಧವಾರ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ನೌಕರಿ ಪಡೆದಿದ್ದ 83 ಜನರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೆ, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ 144 ಜನ ತಹಶೀಲ್ದಾರರ ವಿರುದ್ಧ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ಕೆಲಸ ಮತ್ತು ಇತರೆ ಉಪಯೋಗಗಳನ್ನು ಪಡೆಯಲು ಇತ್ತೀಚೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಎಸ್‍ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ರಾಜ್ಯದ್ಯಾಂತ ಇದುವರೆಗೆ ಒಟ್ಟು 542 ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ಸಮಿತಿಯಲ್ಲಿರುವ ತಹಶೀಲ್ದಾರರು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವರದಿಯನ್ನು ಪರಿಶೀಲಿಸಿ ವರದಿ ಸರಿಯಾಗಿದ್ದರೆ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವಜಾಗೊಳಿಸುತ್ತಾರೆ. ತಪ್ಪಿತಸ್ಥ ಸಿಬ್ಬಂದಿ ಹಾಗೂ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಹಾಗೂ ತಹಶೀಲ್ದಾರ್, ಆರ್‍ಐ ಇವರು ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ದವೂ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ಪತ್ತೆ ಒಂದು ಸಂಕೀರ್ಣ ಕೆಲಸವಾಗಿದ್ದು, ಆಪಾದಿತರ ಸಂಪೂರ್ಣ ಇತಿಹಾಸ ಜಾಲಾಡ ಬೇಕಾಗುತ್ತದೆ. ಹಾಗೂ ಆಪಾದಿತರು ಮೇಲು ಹಂತದ ನ್ಯಾಯಾಯದಲ್ಲಿಯೂ ನಮ್ಮ ತೀರ್ಪಿನ್ನು ಪ್ರಶ್ನಿಸಿರುವ ಉದಹಾರಣೆಗಳಿದ್ದು, ಕೆಲವರು ಸುಪ್ರೀಂ ಕೋರ್ಟ್‍ನಲ್ಲೂ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಕಲ್ಪಿಸುವಲ್ಲಿ ತಾರತಮ್ಯ, ಅನ್ಯಾಯವಾಗಿದ್ದರೆ, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿ ದೂರು ನೀಡಿ ನ್ಯಾಯ ಪಡೆದುಕೊಳ್ಳಬಹುದು ಎಂದ ಅವರು, ಎಸ್‍ಸಿಪಿ, ಟಿಎಸ್‍ಪಿ ಯೋಜನೆ ಅನುಷ್ಟಾನದಲ್ಲಿ ತೊಡಕು, ವಿಳಂಬವಾಗುತ್ತಿದ್ದಲ್ಲಿ ಹಾಗೂ ದೌರ್ಜನ್ಯ ಪ್ರಕರಣಗಳಿದ್ದಲ್ಲಿ ನಾಗರೀಕ ಹಕ್ಕುಗಳ ಜಾರಿ ಕಚೇರಿಗೆ ದೂರು ಸಲ್ಲಿಸಬೇಕು. ಬಳಿಕ ನಾವು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ತಮ್ಮ ಸಮಸ್ಯೆಗಳ ಕುರಿತು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಕಚೇರಿಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಹೆಚ್ಚಿನ ಎಸ್‍ಸಿ, ಎಸ್‍ಟಿಗೆ ಸೇರಿದ ಜನರಿಗೆ ಅರಿವಿಲ್ಲ. ಆದ್ದರಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಜಿಪಿ ಅಮ್ರಿತ್ ಪೌಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಎಎಸ್‍ಪಿ ರಾಜೀವ್, ನಗರ ಉಪವಿಭಾಗದ ಡಿವೈಎಸ್‍ಪಿ ನಾಗೇಶ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ