ಬೆಂಗಳೂರು:
ಕ್ರಿಕೆಟ್ ಆಡುವ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನನ್ನು ಆತನ ಸ್ನೇಹಿತರೇ ಚೂರಿಯಿಂದ ಇರಿದು ಹತ್ಯೆಗೈದಿರುವ ದುರ್ಘಟನೆ ನಂದಿನಿ ಲೇಔಟ್ನ ಸರಸ್ವತಿಪುರದಲ್ಲಿ ನಡೆದಿದೆ.
ಗಣೇಶ ಬ್ಲಾಕ್ ನಿವಾಸಿ ಉಮಾಮಹೇಶ್ವರ್ (20) ಮೃತ ದುರ್ದೈವಿ. ಈತ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಈತನ ತಂದೆ ಗಾರೆ ಕೆಲಸಗಾರ. ತಾಯಿ ಗೃಹಿಣಿ.
ಕಳೆದೆರಡು ದಿನಗಳ ಹಿಂದೆ ಕ್ರಿಕೆಟ್ ಆಡುವ ವಿಚಾರದಲ್ಲಿ ಸ್ನೇಹಿತರೊಡನೆ ಉಮಾಮಹೇಶ್ವರ್ ಜಗಳವಾಡಿ ಓರ್ವನ ಕೆನ್ನೆಗೆ ಬಲವಾಗಿ ಹೊಡೆದಿದ್ದ. ಅದಾಗ ಅವನ ಸ್ನೇಹಿತರು ಜಗಳ ಬಿಡಿಸಿ ಬುದ್ದಿ ಹೇಳಿ ಹಿಂದೆ ಕಳಿಸಿದ್ದರು. ಆದರೆ ಕೆನ್ನೆಗೆ ಬಾರಿಸಿಕೊಂಡ ಸ್ನೇಹಿತ ಮಾತ್ರ ಉಮಾಮಹೇಶ್ವರ್ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಬುಧವಾರ ಸಂಜೆ 7.30 ರ ಸುಮಾರಿಗೆ ಮೂವರು ಸ್ನೇಹಿತರ ಗುಂಪಿನೊಡನೆ ಗಣೇಶ ಬ್ಲಾಕ್ ನಲ್ಲಿ ಉಮಾಮಹೇಶ್ವರನೊಂದಿಗೆ ಜಗಳ ತೆಗೆದಿದ್ದಾನೆ. ಆಗ ಜಗಳ ವಿಕೋಪಕ್ಕೆ ತಿರುಗಿ ಉಮಾಮಹೇಶ್ವರನ ಕಿಬ್ಬೊಟ್ಟೆಗೆ ಚಾಕುವಿನಿಂದ ಚುಚ್ಚಲಾಗಿದೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಯುವಕನನ್ನು ಕುಟುಂಬದ ಸದಸ್ಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲ ನೀಡದೆ ಗುರುವಾರ ಬೆಳಗ್ಗೆ 7 ಗಂಟೆಯಲ್ಲಿ ಸಾವನ್ನಪ್ಪಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ