ಅನೈತಿಕ ಸಂಬಂಧ ಶಂಕೆ : ಪತ್ನಿಯನ್ನು ಕೊಂದ ಪತಿ ಬಂಧನ..!

ಬೆಂಗಳೂರು

    ಅನೈತಿಕ ಸಂಬಂಧದ ಸಂಶಯದಿಂದ ಉಂಟಾದ ಜಗಳದಲ್ಲಿ ಆಕ್ರೋಶಗೊಂಡು ಲಟ್ಟಣಿಗೆ, ಕುಕ್ಕರ್ ಮುಚ್ಚಳದಿಂದ ಹಲ್ಲೆ ಮಾಡಿ ಗೋಡೆಗೆ ತಲೆ ಗುದ್ದಿ ಪತ್ನಿ ಕೊಲೆ ಮಾಡಿ ಮೆಟ್ಟಿಲುಗಳಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಕಥೆ ಕಟ್ಟಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪತಿಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

   ಮಹಾಲಕ್ಷ್ಮಿ ಲೇಔಟ್‌ನ ಜೆಸಿ ನಗರದ ರಾಕೇಶ್ ಕುಮಾರ್ ಗುಪ್ತಾ (29) ಬಂಧಿತ ಆರೋಪಿಯಾಗಿದ್ದಾನೆ. ಮೆಡಿಕಲ್ ರೆಪ್ರಜೆಂಟೆಟಿವ್ ಆಗಿದ್ದ ಆರೋಪಿಯು ಕಳೆದ ನ. 18 ರಂದು ಬೆಳಿಗ್ಗೆ ಪತ್ನಿ ರಾಧಾ(25)ಳನ್ನು ಕೊಲೆ ಮಾಡಿ ಮನೆಯ ಮೆಟ್ಟಿಲುಗಳಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಕಥೆ ಕಟ್ಟಿದ್ದ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

    ಆಂಧ್ರಪ್ರದೇಶದ ಗೊಂಡಾ ಜಿಲ್ಲೆಯ ರಾಕೇಶ್ ಕುಮಾರ್ ಗುಪ್ತಾ ಮೂರು ವರ್ಷಗಳ ಹಿಂದೆ ರಾಧಾಳನ್ನು ವಿವಾಹವಾಗಿದ್ದು, ದಂಪತಿಗೆ 2 ವರ್ಷದ ಮಗುವಿದೆ. ಮೆಡಿಕಲ್ ರೆಪ್ರಸೆಂಟಟಿವ್ ಆಗಿದ್ದ ರಾಕೇಶ್ ಕುಮಾರ್ ಗುಪ್ತಾ ಜೆಸಿನಗರದ 14ನೇ ಕ್ರಾಸ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು.

    ಇತ್ತೀಚೆಗೆ ಪತಿ ಗುಪ್ತಾ ಬೇರೆ ಮಹಿಳೆ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ ಎಂದು ಅನುಮಾನ ಪಟ್ಟ ಪತ್ನಿ ರಾಧಾ, ಆತನ ಮೊಬೈಲ್‌ನ್ನು ಚೆಕ್ ಮಾಡುತ್ತ ಜಗಳ ತೆಗೆಯುತ್ತಿದ್ದಳು. ಕಳೆದ ನ. 17 ರಂದು ರಾತ್ರಿ 11ರ ವೇಳೆ ಇದೇ ವಿಚಾರವಾಗಿ ಜಗಳವುಂಟಾಗಿದೆ.ಜಗಳವಿಕೋಪಕ್ಕೆ ತಿರುಗಿದ್ದಾಗ ಆಕ್ರೋಶಗೊಂಡ ಗುಪ್ತಾ, ರಾಧಾಳಿಗೆ ಲಟ್ಟಣಿಗೆ, ಕುಕ್ಕರ್ ಮುಚ್ಚಳದಿಂದ ಹಲ್ಲೆ ಮಾಡಿ ತಲೆಯನ್ನು ಗೋಡೆಗೆ ಗುದ್ದಿದ್ದ. ಬೆಳಗಾಗುವಷ್ಟರಲ್ಲಿ ಅಸ್ವಸ್ಥಗೊಂಡಿದ್ದ ಆಕೆ ಮೃತಪಟ್ಟಿದ್ದಳು.

    ರಾಧಾಳ ಪೋಷಕರಿಗೆ ದೂರವಾಣಿ ಕರೆ ಮಾಡಿದ ಗುಪ್ತಾ, ರಾಧಾ ಮನೆಯ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಸುಳ್ಳು ಹೇಳಿದ್ದ.ಅಳಿಯನ ಮಾತನ್ನು ನಂಬದ ರಾಧಾ ಪೋಷಕರು, ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ರಾಧಾ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಲ್ಲೆ ಮಾಡಿರುವುದು ಕಂಡು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿ ರಾಕೇಶ್ ಕುಮಾರ್ ಗುಪ್ತಾನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆಂದು ಶಶಿಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link