ಬೆಂಗಳೂರು
ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಕಾಂಗ್ರೆಸ್ ಮಹಿಳಾ ನಾಯಕಿಯರು ಗರಂ ಆಗಿದ್ದಾರೆ.ಹೆಣ್ಣು ಏನು ಮಾಡಬಲ್ಲಳು ಎಂಬ ಎಂಟಿಬಿ ಹೇಳಿಕೆ ವಿರುದ್ಧ ಮಾಜಿ ಸಚಿವೆಯರಾದ ರಾಣಿ ಸತೀಶ್, ಮೋಟಮ್ಮ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಣಿ ಸತೀಶ್, ಹೆಣ್ಣು ಏನು ಮಾಡಬಲ್ಲಳು ಎಂಬ ಎಂಟಿಬಿ ಹೇಳಿಕೆ ಮಹಿಳೆಯರಿಗೆ ಮಾಡಿದ ಅಪಮಾನ. ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ. ಧೀರನೂ ಅಲ್ಲ. ಇದ್ದ ಅಧಿಕಾರ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿರುವ ಅವರು ಏನು ಮಾಡಬಲ್ಲರು ಎಂದು ಲೇವಡಿ ಮಾಡಿದರು
ಬಿಜೆಪಿಯ ಸಷ್ಮಾ ಸ್ವರಾಜ್, ನಿರ್ಮಲ ಸೀತಾರಾಮನ್ ಉತ್ತಮ ಕೆಲಸ ಮಾಡಿದ್ದಾರೆ. ಕೆಳದಿ ಚೆನ್ನಮ್ಮ ಕಂದಾಯ ಸಚಿವೆಯಾಗಿ ಸಾಕಷ್ಟು ಸುಧಾರಣೆ ತಂದವರು. ದೇಶದ ಹೆಣ್ಣುಮಕ್ಕಳು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಹೀಗಿರುವಾಗ ಹೆಣ್ಣಿನ ಬಗ್ಗೆ ಎಂಟಿಬಿ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಮಹಿಳಾಮೀಸಲಾತಿ ನೀಡುವ ವಿಚಾರ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಪಿ ಎಂಟಿಬಿ ಹೇಳಿಕೆ ಶೋಭೆ ತರುವಂತಹದ್ದಲ್ಲ. ಎಂಟಿಬಿ ನಾಗಾರಾಜ್ ಅವರಿಗೆ ತಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆಯೂ ಗೌರವವಿಲ್ಲ. ಈ ಹೇಳಿಕೆಗೆ ಚುನವಾವಣೆಯಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸಂಚಿ ಹೊನ್ನಮ್ಮ ಬಗ್ಗೆ ಪ್ರಸ್ತಾಪಿಸಿದ ರಾಣಿ ಸತೀಶ್, ಮಹಿಳೆಯರಿಗೆ ಅವರು ಮಾಡಿರುವ ಅವಮಾನ ವಿಚಾರವನ್ನು ಉಪ ಚುನಾವಣೆಗೆ ಅಸ್ತ್ರವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುವುದು. ಈ ಬಗ್ಗೆ ಚುನಾವಣಾ ಆಯೋಗ ಕೂಡ ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಮೋಟಮ್ಮ ಮಾತನಾಡಿ, ದೇಶದ ಮಹಿಳಾ ನಾಯಕಿಯಾದ ಮಾಯಾವತಿ, ವಸುಂಧರ ರಾಜೆ ಅಂತಹವರನ್ನು ಎಂ.ಟಿ.ಬಿ ನಾಗರಾಜ್ ನೆನೆಯಬೇಕಿತ್ತು. ಕಿತ್ತೂರು ರಾಣಿ ಚೆನ್ನಮ್ಮನ ನಾಡು ನಮ್ಮದು. ಬಿಜೆಪಿ ನಾಯಕರು ಮತಿಭ್ರಮಣೆಯಿಂದ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್, ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಪಠ್ಯದಿಂದ ಅಂಬೇಡ್ಕರ್, ಟಿಪ್ಪು ಸುಲ್ತಾನ್ ಕುರಿತ ಪಠ್ಯ ತೆಗೆಯಲು ಯತ್ನಿಸಿದ್ದಾರೆ. ಇದೆಲ್ಲವನ್ನು ಬಿಟ್ಟು ಅವರು ಶಿಕ್ಷಣ ಸಚಿವರಾಗಿ ಅವರು ಎಷ್ಟು ಅಭಿವೃದ್ಧ ಕೆಲಸ ಮಾಡಿದ್ದೇನೆ ಎಂಬ ಬಗ್ಗೆ ಅವರೇ ಪರಾಮರ್ಶೆ ಮಾಡಿಕೊಳ್ಳಲಿ ಎಂದರು.
ಹೆಣ್ಣು ಮಕ್ಕಳನ್ನು ಹಗುರವಾಗಿ ಪರಿಗಣಿಸುವವರಿಗೆ ಮಾನ್ಯತೆ ನೀಡಬಾರದು. ಕಲ್ಪನಾ ಚಾವ್ಲಾ ಗಗನಯಾತ್ರೆ ಮಾಡಿದವರು. ಮಹಿಳೆ ಕುಟುಂಬ ಹಾಗೂ ಸಮಾಜದ ಕೆಲಸ ಎರಡೂ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಹೀಗಿದ್ದರೂ ಎಂಟಿಬಿ ನಾಗರಾಜ್ ಮಹಿಳೆಯರಿಗೆ ಅವಮಾನ ಮಾಡಬಾರದಿತ್ತು. ಹೀಗೆ ಹೇಳಿಕೆ ನೀಡುವ ಮುನ್ನ ನಾಗರಾಜ್ ತಮ್ಮ ಮಡದಿಯನ್ನು ನೆನೆಯ ಬೇಕಿತ್ತು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ