ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್

ದಾವಣಗೆರೆ :

    ಯಾರು ಸಹ ನ್ಯಾಯಾಲಯಕ್ಕೆ ಸಂತೋಷದಿಂದ ಬರುವುದಿಲ್ಲ. ನೊಂದು ಬಂದಿರುತ್ತಾರೆ. ಹೀಗಾಗಿ ನೊಂದು ಬಂದ ಕಕ್ಷಿದಾರ ನಲಿಯುತ್ತ ಮನೆಯತ್ತ ಹೋಗಬೇಕೆಂಬ ಸದುದ್ದೇಶದಿಂದ ಡಿಸೆಂಬರ್ 14ರಂದು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಜಿ. ಕುಲಕರ್ಣಿ ತಿಳಿಸಿದರು.

     ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2ನೇ ಶನಿವಾರ ನ್ಯಾಯಾಲಯಗಳ ಕಲಾಪಗಳಿಗೆ ರಜೆ ಇದ್ದರೂ, ಕಕ್ಷಿದಾರರ ಹಿತದೃಷ್ಟಿಯಿಂದ ಲೋಕ ಅದಾಲತ್ ಆಯೋಜಿಸಲಾಗುತ್ತಿದ್ದು, ಅಂದು ಎಲ್ಲಾ ನ್ಯಾಯಾಧೀಶರು, ವಕೀಲರು ಹಾಜರಿರಲಿದ್ದು, ಇದರಲ್ಲಿ ಕಕ್ಷಿದಾರರು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ರಾಜೀಯಾಗಬಲ್ಲ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

    ಪಾಲು ವಿಭಾಗ, ರಿಕವರಿ ಆಫ್ ಮನಿ, ತಡೆಯಾಜ್ಞೆ, ಚೆಕ್ ಬೌನ್ಸ್, ಬ್ಯಾಂಕ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಸಂಬಂಧವಾಗಿ ಪರಿಹಾರ ಕೋರಿದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಶುಲ್ಕ ಪ್ರಕರಣಗಳು, ವಿಚ್ಛೇದನ, ಜೀವನಾಂಶ, ಗಂಡ-ಹೆಂಡ್ತಿ ಜಗಳ ಸೇರಿದಂತೆ ಇತರೆ ರಾಜೀ ಆಗಬಹುದಾದ ಪ್ರಕರಣಗಳನ್ನು ಬಗೆ ಹರಿಸಿಕೊಳ್ಳಬಹುದು ಎಂದರು.

   ಲೋಕ ಅದಾಲತ್‍ನಲ್ಲಿ ಒಮ್ಮೆ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡ ಕಕ್ಷಿದಾರರು, ಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದ ಅವರು, ಲೋಕ ಅದಾಲತ್‍ನಿಂದಾಗಿ ಸಮಯ, ಹಣ ಉಳಿತಾಯವಾಗಲಿದೆ. ಅಲ್ಲದೇ, ಅಲೆದಾಟವೂ ತಪ್ಪಲಿದೆ. ಆದ್ದರಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

    ಲೋಕ ಅದಾಲತ್‍ನಲ್ಲಿ ಕೊಲೆ, ದರೋಡೆ, ಪೊಕ್ಸೊ, ಅಟ್ರಾಸಿಟಿ ಸೇರಿದಂತೆ ಘೋರ ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಜನಸಂಖ್ಯೆಯಲ್ಲಿ ಎರಡನೇ ಮತ್ತು ವಿಸ್ತೀರ್ಣದಲ್ಲಿ 7ನೇ ಸ್ಥಾನದಲ್ಲಿರುವ ಭಾರತದಲ್ಲಿ ಜನರ ಪರವಾಗಿ ಸಾಕಷ್ಟು ಕಾನೂನುಗಳಿವೆ. ಆದರೆ, ಸಾರ್ವಜನಿಕರಲ್ಲಿ ಕಾನೂನಿನ ಅರಿವು ಇಲ್ಲದ ಕಾರಣ ಲೋಕ ಅದಾಲತ್‍ನಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಆದ್ದರಿಂದ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ಸೇರಿದಂತೆ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

     ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ಎನ್.ಬಡಿಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link