ಶೇಂಗಾ ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯ..!

ಚಳ್ಳಕೆರೆ

    ಕಳೆದ ಹತ್ತು ವರ್ಷಗಳಿಂದ ಮಳೆ ವೈಪಲ್ಯದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಕಂಗಾಲಾಗಿ, ನಿರಂತರ ಬರಗಾಲದ ಬೇಗುದಿಯಲ್ಲಿ ಬಳಲಿದ್ದು, ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಪ್ರಸ್ತುತ ವರ್ಷ ಮಾತ್ರ ಕಡೇ ಹಂತದಲ್ಲಿ ಕೆಲವೆಡೆ ಉತ್ತಮ ಮಳೆಯಾಗಿ ಸ್ವಲ್ಪ ಭಾಗದ ಶೇಂಗಾ ರೈತರ ಕೈಸೇರುವ ನಿರೀಕ್ಷೆಯಲ್ಲಿದ್ದು, ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದರು.

     ಅವರು, ಶುಕ್ರವಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ರೈತರ ಶೇಂಗಾ ಬೆಳೆಗೆ ಬೆಂಬಲ ಬೆಲೆ ನಿಗಡಿ ಪಡಿಸುವ ನಿಟ್ಟಿನಲ್ಲಿ ಕೃಷಿ ಕೆಒಎಫ್ ಅಧಿಕಾರಿಗಳು, ದಲ್ಲಾಲರ ಸಂಘದ ಪ್ರತಿನಿಧಿಗಳು ಹಾಗೂ ರೈತ ಮುಖಂಡರೊಂಡನೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಇಲ್ಲಿನ ರೈತರ ದುಸ್ಥಿತಿಯ ಬಗ್ಗೆ ಈಗಾಗಲೇ ರೈತ ಸಂಘದ ಅನೇಕ ಮಹಾನೀಯರು ಮಾಹಿತಿ ನೀಡಿದ್ದಾರೆ.

   ನಿಮ್ಮೆಲ್ಲರ ಕಳಕಳಿ ಸತ್ಯಾಂಶದಿಂದ ಕೂಡಿದ್ದು, ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಖರೀದಿ ಕೇಂದ್ರದ ಜೊತೆಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆಯೂ ಸಹ ಒತ್ತಾಯ ಪಡಿಸಲಾಗುವುದು. ಮುಂದಿನ 15 ದಿನಗಳೊಳಗಾಗಿ ಕೃಷಿ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಸುತ್ತಮುತ್ತಲ ರಾಜ್ಯಗಳ ಖರೀದಿದಾರರು ಆಗಮಿಸಿ ಖರೀದಿಸುವಂತೆ ಪ್ರಚಾರ ಪಡಿಸಲಾಗುವುದು ಎಂದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಮಾರುಕಟ್ಟೆ ಸಮಿತಿಯ ಪ್ರಭಾರ ಕಾರ್ಯದರ್ಶಿ ಗೌತಮ್, ಪ್ರತಿನಿತ್ಯವೂ ಶೇಂಗಾ ಬೆಲೆಯನ್ನು ನಿಗದಿ ಪಡಿಸುವ ಮತ್ತು ಖರೀದಿಸುವ ವ್ಯವಸ್ಥೆ ಇದ್ದು, ಮಾರುಕಟ್ಟೆಗೆ ಆಗಮಿಸುವ ಗುಣಮಟ್ಟದ ಶೇಂಗಾವನ್ನು ನೋಡಿ ಖರೀದಿದಾರರು ಮಾರುಕಟ್ಟೆ ದರಕ್ಕೆ ಅನುಗುಣವಾಗುವಂತೆ ದರವನ್ನು ಲಿಖಿತ ಮೂಲಕ ಬರೆದುಕೊಡುತ್ತಾರೆ. ನವೆಂಬರ್ ಮಾಹೆಯಲ್ಲಿ ಪ್ರಾರಂಭದ ಹಂತದಲ್ಲಿದ್ದ ಬೆಲೆಗಿಂತ ಈ ಅಧಿಕವಾಗಿದ್ದು, ಪ್ರಸ್ತುತ ಇಂದಿನ ಮಾರುಕಟ್ಟೆಯಲ್ಲಿ ಶೇಂಗಾ 3543 ಕ್ವಿಂಟಾಲ್ ದಾಸ್ತಾನಿದ್ದು, ಕನಿಷ್ಠ ದರ 2400 ರಿಂದ ಗರಿಷ್ಠ ದರ 7319ರ ತನಕ ನಿಗದಿಗೊಳಿಸಲಾಗಿದೆ. ಶೇಂಗಾ ಬೀಜದ ಗುಣಮಟ್ಟವನ್ನು ಆಧರಿಸಿ ಖರೀದಿದಾರರು ದರವನ್ನು ನಿಗದಿಗೊಳಿಸುತ್ತಾರೆ. ಇಲ್ಲಿನ ತನಕ ಯಾವುದೇ ಸಮಸ್ಯೆ ಇಲ್ಲದೆ ವ್ಯವಹಾರಗಳು ನಡೆಯುತ್ತಿದ್ದು, ಶೇಂಗಾ ಬೆಳೆಗೆ ಹೆಚ್ಚಿನ ಮೌಲ್ಯ ನೀಡುವಂತೆ ಒತ್ತಾಯಿಸುವುದು ಒಳ್ಳೆಯ ಕಾರ್ಯವೆಂದರು.

    ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಇಲ್ಲಿನ ಮಾರುಕಟ್ಟೆಯಲ್ಲಿ ತಮ್ಮ ಶೇಂಗಾ ಬೆಳೆಯನ್ನು ಮಾರಾಟ ಮಾಡಲು ರೈತರು ಹಿಂದೇಟು ಹಾಕುತ್ತಿದ್ಧಾರೆ. ಕಾರಣ ರೈತರು ತಂದ ಶೇಂಗಾಕ್ಕೆ ಇಲ್ಲಿ ಅತಿ ಕಡಿಮೆ ದರವನ್ನು ನಿಗದಿ ಪಡಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಜಮೀನುಗಳಲ್ಲಿ ಬೆಳೆಯನ್ನು ನೋಡದ ರೈತರು ಕಂಗಾಲಾಗಿದ್ದು, ಈ ವರ್ಷ ಮಾತ್ರ ಸ್ವಲ್ಪ ಭಾಗದ ಮಳೆಯಾಗಿದ ಪರಿಣಾಮ ಸುಮಾರು 30ರಷ್ಟು ಬೆಳೆ ಆಗಲಿದೆ. ಸರ್ಕಾರ ಕೆಒಎಫ್ ಸೇರಿದಂತೆ ಹೊರ ರಾಜ್ಯದ ಕಂಪನಿಗಳಿಗೆ ಶೇಂಗಾ ಖರೀದಿಗೆ ಸೂಚನೆ ನೀಡಬೇಕೆಂದರು.

     ಆಂಧ್ರ, ತಮಿಳುನಾಡು, ಕೇರಳ ಪ್ರದೇಶಗಳಲ್ಲಿ ಅಲ್ಲಿನ ರೈತರು ಬೆಳೆದ ಬೆಳೆಗೆ ಇನ್ನೂ ಹೆಚ್ಚಿನ ದರವನ್ನು ನಿಗದಿಗೊಳಿಸಿದ್ದು, ಕರ್ನಾಟಕ ರೈತರಿಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದರು. ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಕ್ವಿಂಟಾಲ್‍ಗೆ 6 ರಿಂದ 7 ಸಾವಿರ ಸರ್ಕಾರ ನಿಗದಿ ಪಡಿಸಿದ್ದು, ಅದೇ ಬೆಲೆಗೆ ಎಲ್ಲಾ ತರಹದ(ಗುಣಮಟ್ಟದ) ಶೇಂಗಾವನ್ನು ಸರ್ಕಾರ ಖರೀದಿಸಬೇಕು. ಖರೀದಿ ಕೇಂದ್ರವನ್ನು ಬರುವ ಸೋಮವಾರದಿಂದಲೇ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

      ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ) ರಾಜ್ಯ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರ ಸಮಸ್ಯೆಗಳ ನಿವಾರಣೆಗೆ ಜಿಲ್ಲಾಡಳಿತ ಹೆಚ್ಚು ಗಮನ ನೀಡುತ್ತಿಲ್ಲ. ಕಳೆದ ಹಲವಾರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ರೈತರ ಸ್ಥಿತಿ ಡೋಲಾಯಮಯವಾಗಿದ್ದು, ಎಲ್ಲರಿಗೂ ಆಹಾರವನ್ನು ನೀಡುವ ರೈತನ ಸ್ಥಿತಿ ಹದಗೆಟ್ಟಿದ್ದು, ಈ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸುವಲ್ಲಿ ಸರ್ಕಾರ ವಿಫಲವಾಗಿದೆ. ರೈತ ತನ್ನ ಕೃಷಿ ಕಾರ್ಯದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯಲು ಪ್ರಯತ್ನಿಸುತ್ತಾನೆ.

     ಬೆಳೆ ಕೈಸೇರುವ ಮೊದಲೇ ಮಾರುಕಟ್ಟೆಯಲ್ಲಿ ಬೆಲೆ ಕಡಿತ ಉಂಟಾದಲ್ಲಿ ರೈತ ಕಂಗೆಟ್ಟು ಹೋಗುತ್ತಾನೆ. ಆದ್ದರಿಂದ ಸರ್ಕಾರ ರೈತ ಬೆಳೆದ ಯಾವುದೇ ಬೆಳೆ ಇರಲಿ ಅದಕ್ಕೆ ಸೂಕ್ತ ಬೆಲೆಯನ್ನು ನೀಡಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ.ಅರವಿಂದ, ಕಾರ್ಯದರ್ಶಿ ವಂದನರಾಜು, ವೃಷಬೇಂದ್ರಪ್ಪ, ತಿಪ್ಪೇಸ್ವಾಮಿ, ಕೆಒಎಫ್ ಅಧಿಕಾರಿಗಳು, ವೃತ್ತ ನಿರೀಕ್ಷಕ ಆನಂದ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap