ಸಂವಿಧಾನದ ತಂಟೆಗೆ ಬಂದರೆ ದೇಶದಲ್ಲಿ ಕ್ರಾಂತಿ : ಈಶ್ವರಾನಂದಪುರಿ ಸ್ವಾಮೀಜಿ

ಹೊಳಲ್ಕೆರೆ:

    ಭಾರತೀಯ ಸಂವಿಧಾನದ ಬಗ್ಗೆ ಇಡೀ ಜಗತ್ತೇ ಕೊಂಡಾಡುತ್ತಿರುವ ಈ ಹೊತ್ತಿನಲ್ಲಿ ಕೆಲವರು ಸಂವಿಧಾನ ಬದಲಾವಣೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಮಾತನಾಡುತ್ತಿರುವುದು ತರವಲ್ಲದ ನಡವಳಿಕೆ. ಸಂವಿಧಾನದ ತಂಟೆಗೆ ಬಂದರೆ ದೇಶದಲ್ಲಿ ದೊಡ್ಡ ಕ್ರಾಂತಿಯೇ ನಡೆಯುತ್ತದೆ ಎಂದು ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ

    ತಾಲ್ಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಸಂತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಭಾರತೀಯ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠವಾದದ್ದು. ಸಂವಿಧಾನದ ಅಡಿಯಲ್ಲಿಯೇ ಬೆಳೆದು ಬಂದವರು ಈಗ ಅದರ ಆಶಯಗಳ ವಿರುದ್ದವಾಗಿ ಮಾತನಾಡುತ್ತಿರುವುದು ನೋವಿನ ಸಂಗತಿ ಎಂದರು

   ಪ್ರಜ್ಞಾವಂತರೆನಿಕೊಂಡಿರುವ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಸಂವಿಧಾನವನ್ನು ಅಂಬೇಡ್ಕರ್ ಬರೆದಿಲ್ಲವೆನ್ನುವುದು ಖಂಡನೀಯ. ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರದಲ್ಲಿ ಜನರಲ್ಲಿ ತಪ್ಪು ಮಾಹಿತಿ ನೀಡುವ ಮತ್ತು ದಿಕ್ಕುತಪ್ಪಿಸುವ ಹುನ್ನಾರ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲಿಸಬೇಕು. ಭವಿಷ್ಯದ ದಿನಗಳಲ್ಲಿ ಈ ವಿಚಾರದ ತಂಟೆಗೆ ಬಂದರೆ ದೇಶದಲ್ಲಿ ದೊಡ್ಡ ಕ್ರಾಂತಿಯನ್ನೇ ಎದುರಿಸಬೇಕಾದೀತು ಎಂದು ಎಚ್ಚರಿಸಿದರು

    ಅಂಬೇಡ್ಕರ್ ಶೋಷಿತ ಸಮುದಾಯದ ಆಶಾಕಿರಣ. ಅವರು ಕೊಟ್ಟಿರುವ ಸಂವಿಧಾನದ ಅಡಿಯಲ್ಲಿಯೇ ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಲವಾಗಿದೆ. ಸಣ್ಣ ಸಣ್ಣ ಸಮುದಾಯಗಳು, ದಲಿತರು ಇನ್ನಿತರೆ ವರ್ಗಗಳಿಗೆ ಸಾಮಾಜಿಕ ನ್ಯಾಯಕೊಟ್ಟ ಇಂತಹ ಮಹಾಪುರಷರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು 

     ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ. ಇಡೀ ಮನುಕುಲದ ಶ್ರೇಯಸ್ಸು ಬಯಸಿದ ಕನಕದಾಸರ ಕೀರ್ತನೆಗಳು ಮತ್ತು ತತ್ವಗಳನ್ನು ಎಲ್ಲರೂ ಅನುಸರಿಸಬೇಕಾಗಿದೆ. ಜಾತಿಯತೆ, ಅಸಮಾನತೆ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ದ ಹೋರಾಡಿದ ಇಂತಹ ಅನೇಕ ಪುಣ್ಯಪುಷರನ್ನು ನಾವು ಸ್ಮರಿಸಿಕೊಳ್ಳಬೇಕು ಎಂದರು

    ಕುಂಚಟಿಗ ಮಹಾಸಂಸ್ಥಾನ ಮಠದ ಡಾ. ಶಾಂತವೀರಸ್ವಾಮೀಜಿ ಮಾತನಾಡಿ, ಕನಕದಾಸರು ಜಾತಿಯನ್ನು ವಿರೋಧಿಸಿ ಎಲ್ಲರೂ ಒಂದೇ ಎಂದು ಸಾರಿದರು. ಕೀರ್ತನೆಗಳ ಮೂಲಕ ಕನಕರು ಶ್ರೇಷ್ಠರಾದರು. ಕನಕ ಗುರುಪೀಠ ಉದಯವಾಗಿದ್ದು ಕೇವಲ ಕುರುಬರಿಗೆ ಮಾತ್ರವಲ್ಲ, ಶೋಷಿತರ ಪರವಾಗಿ ಇದೆ ಎಂಬುದನ್ನು ಅರಿಯಬೇಕು ಎಂದರು

    ಕಾಗಿನೆಲೆ ಮಠದ ಉನ್ನತಿಗೆ ಈಶ್ವರಾನಂದಪುರಿ ಸ್ವಾಮೀಜಿಯವರ ಶ್ರಮವಿದೆ. ಶ್ರೀಗಳು ಎಲ್ಲಾ ಶೋಷಿರ ಪರವಾಗಿ ನಿಂತಿದ್ದಾರೆ. ಕನಕದಾಸರ ತತ್ವಗಳನ್ನು ಪಾಲನೆ ಮಾಡಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆಂದು ಬಣ್ಣಿಸಿದರು ಭಗೀರಥ ಪೀಠದ ಶ್ರೀಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜಕ್ಕೆ ದೊಡ್ಡ ಪರಂಪರೆ ಇದೆ.ಇತಿಹಾಸವನ್ನು ಸೃಷ್ಠಿಸಿದ ಈ ಸಮುದಾಯಕ್ಕೂ ಉಪ್ಪರಾ ಸಮುದಾಯಕ್ಕೂ ಅವಿನಾಭಾವ ಸಂಬಂಧವಿದೆ ಎಂದರು

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಸ್ಥಾಯಿಸಮಿತಿ ಅಧ್ಯಕ್ಷ ಡಾ.ಅನಂತ್, ಸದಸ್ಯೆ ಶಶಿಕಲಾ ಸುರೇಶ್‍ಬಾಬು, ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ನಿಂಗರಾಜ್, ಕುರುಬರ ಸಂಘದ ಅಧ್ಯಕ್ಷ ಪ್ರಕಾಶ್, ಜಿ.ಪಂ.ಮಾಜಿ ಸದಸ್ಯ ಲೋಹಿತ್, ಮಾಲತೇಶ್ ಅರಸ್, ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಗೌಡ್ರು, ಪಿಎಸ್‍ಐ ಶಿವರುದ್ರಪ್ಪ ಮೇಟಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

  ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕ ದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಗ್ರಾಮದ ಮಹಿಳೆಯರು, ಯುವಕರು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link