ಬೆಳೆ ಕೈತಪ್ಪುವ ಆತಂಕದಲ್ಲಿ ರೈತರು.!

ತುರುವೇಕೆರೆ:

       ಕಳೆದರೆಡು ವರ್ಷಗಳಿಂದ ಸತತ ಬರಗಾಲದಿಂದ ಬಿತ್ತಿದ ಬೆಳೆಯೂ ಸಮಪ್ರಮಾಣದಲ್ಲಿ ಕೈಗೆ ಬಾರದೆ ಕಂಗಾಲಾಗಿರುವ ರೈತನಿಗೆ ವಾರದಿಂದೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಪ ಸ್ವಲ್ಪ ಕಟಾವಿಗೆ ಬಂದಿರುವ ರಾಗಿ ಬೆಳೆಗಳು ನೆಲ ಕಚ್ಚಿದ್ದು ಮುಂದೇಗೆ ಎಂಬುದು ತಾಲ್ಲೂಕಿನ ರೈತರಿಗೆ ಆತಂಕ ಎದುರಾಗಿದೆ.

      ನಿಧಾನವಾಗಿ ಪ್ರಾರಂಭವಾದ ಹಿಂಗಾರು ಈ ಬಾರಿ ಉತ್ತಮ ಮಳೆಯಾದ್ದರಿಂದ ತಾಲೂಕಿನಲ್ಲಿ ಸುಮಾರು ನೂರಾರು ಹೆಕ್ಟೇರ್ ರಾಗಿ ಬೆಳೆಯನ್ನು ಬಿತ್ತಲಾಗಿದ್ದು ಈಗಾಗಲೇ ತಾಲ್ಲೂಕಿನ ಕೆಲ ಬಾಗದಲ್ಲಿ ಬೆಳೆ ಚೆನ್ನಾಗಿ ಬಂದು ನಿಂತಿದೆ. ಬೇಗ ಬಿತ್ತನೆ ಮಾಡಿದ್ದ ಕೆಲವು ರೈತರು ಕೊಯ್ಲು ಮಾಡಿದ್ದಾರೆ. ಈ ಬಾರಿಯಾದರೂ ಬೆಳೆ ಕೈ ಸೇರುತ್ತಿದೆಯಲ್ಲಾ ಎಂಬ ಆಸೆ ಹೊತ್ತ ರೈತರಿಗೆ ಇದೀಗ ಎಂಟತ್ತು ದಿನಗಳಿಂದ ಸುರಿದ ಮಳೆಯಿಂದ ಹುಲುಸಾಗಿ ಬೆಳೆದಿದ್ದ ರಾಗಿ ಪೈರು ನೆಲ ಕಚ್ಚುತ್ತಿದ್ದು ರೈತರಲ್ಲಿ ನಿರಾಸೆ ಮೂಡಿಸಿದೆ.

        ರಾಗಿ ತೆನೆ ಮಳೆಯಿಂದ ನೆನೆದು ತೆನೆಯ ಹೆಚ್ಚು ಭಾರ ತಡೆಯಾಲಾಗದೆ ಹೊಲದಲ್ಲಿ ಬೀಳಲಿದ್ದು ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ರೈತರು ರಾಗಿ ಕೊಯ್ಲು ಮಾಡಿದ್ದು ಮಳೆಗೆ ಸಿಕ್ಕಿ ಮೊಳಕೆಯೊಡೆಯಲಾರಂಬಿಸಿದೆ. ಮಳೆಯಲ್ಲಿ ತೊಯ್ದ ರಾಗಿ ಹುಲ್ಲು ಹಾಳಾಗಿದ್ದು ದನಕರುಗಳಿಗೂ ಸಹಾ ಮೇವು ಸಿಗದಂತಾಗಲಿದೆ. ಮಳೆ ಇದೇ ರೀತಿ ಮಂದುವರೆದರೆ ರಾಗಿ

        ಮೊಳಕೆಯೊಡಲಾರಂಭಿಸಿ ಬೆಳೆ ಭೂಮಿ ತಾಯಿಯ ಪಾಲಾಗುವುದಂತು ಖಂಡಿತ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.ತೋಟಗಳಿಗೆ ಸಮೃದ್ದಿ ಮಳೆ: ಇತ್ತೀಚೆಗೆ ಮಳೆ ಹಾಗೂ ಹೇಮಾವತಿ ನೀರಿನಿಂದಾಗಿ ತಾಲ್ಲೂಕಿನ ಕೆರೆ ಕಟ್ಟೆಗಳು ತುಂಬಿದ್ದು ಅಡಿಕೆ ಹಾಗು ತೆಂಗಿನ ತೋಟಗಳಿಗೆ ಮಾತ್ರ ಅನುಕೂಲವಾಗಿದೆ. ಕುಡಿಯುವ ನೀರಿನ ಅಭಾವ ತಗ್ಗಿದೆ. ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಿ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಬಾಳೆಗಿಡಗಳಿಗೆ ಹೆಚ್ಚು ಅನುಕೂಲವಾಗಿದ್ದು ಸದ್ಯಕ್ಕೆ ರೈತನಿಗೆ ಸ್ವಲ್ಪ ಮಟ್ಟಿನ ದುಗುಡ ಕಡಿಮೆಯಾಗಿದ್ದರೂ ರಾಗಿ ಬೆಳೆ ಕೈಕೊಟ್ಟಿರುವುದು ಆತಂಕಕ್ಕೆಡೆಮಾಡಿದೆ.

        ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ ಮಾತನಾಡಿ ರಾಗಿಯಂತ್ರದಿಂದ ರಾಗಿ ಕೊಯ್ಲು ಮಾಡಿದ್ದು ರಾಗಿ ಬೇರ್ಪಡಿಸಿದ ಹುಲ್ಲು ಮಳೆಗೆ ಸಿಲುಕಿ ದನಕರುಗಳಿಗೆ ಮೇವಿಲ್ಲದಂತಾಗಿದೆ. ಹೀಗೆಯೇ ಮುಂದುವರಿದಲ್ಲಿ ಕೊಯ್ಲಿಗೆ ಬಂದಿರುವ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚಲಿದ್ದು ಈ ಬಾರಿ ಉತ್ತಮ ಬೆಳೆ ಬರಲಿದೆ ಎಂದು ನಾವುಗಳು ಕನಸು ಕಾಣುತ್ತಿರುವಾಗಲೆ ಇದೀಗ ಸುರಿದ ಮಳೆಯಿಂದಾಗಿ ಅಲ್ಪ ಸ್ವಲ್ಪ ಬಂದಿದ್ದ ರಾಗಿ ಬೆಳೆ ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಹತಾಶೆಯಿಂದ ನುಡಿದರು.

        ಹೀಗೆಯೇ ಮಳೆ ಮುಂದುವರಿದರೆ ಸುಮಾರು ಹಣ ಖರ್ಚು ಮಾಡಿ ಉತ್ತುಬಿತ್ತಿ ಬೆಳೆದ ಬೆಳೆ ಕೈಗೆ ಬಾರದೆ ದನಕರುಗಳಿಗೆ ಮೇವು ಸಹ ಸಿಗದಂತಾಗಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ಎಲ್ಲಿ ಸಿಲುಕಿಸುವುದೋ ಎಂಬ ಭಯ ರೈತರಲ್ಲಿ ಕಾಡಲಾರಂಬಿಸಿದೆ ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗಳು ಕೊನೆ ಕ್ಷಣದಲ್ಲಿ ಕೈಗೆ ಬಾರದಿದ್ದರೆ ಮುಂದೆ ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ? ಎಂಬ ಆಲೋಚನೆಯಲ್ಲಿ ತೊಡಗಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link