ಶ್ರಮ ಜೀವಿಗಳಾದರೆ ಕಾಯಕ ಸಂಸ್ಕೃತಿ ಜಾಗೃತ

ದಾವಣಗೆರೆ:

     12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದಂತೆ, ಕನ್ನಡಿಗರು ಶ್ರಮ ಜೀವಿಗಳಾದರೆ ಮಾತ್ರ ಕಾಯಕ ಸಂಸ್ಕೃತಿ ಜಾಗೃತವಾಗುತ್ತದೆ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು.ಸಮೀಪದ ಆವರಗೆರೆಯ ಆಂಜನೇಯ ದೇವಸ್ಥಾನದ ಎದುರು ಸ್ನೇಹಜೀವಿ ಯುವಕ ಸಂಘ ಹಾಗೂ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‍ವತಿಯಿಂದ ಏರ್ಪಡಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಭಾವೈಕ್ಯತಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕಾಯಕ ಸಂಸ್ಕೃತಿ ಶ್ರೇಷ್ಠವಾಗಿದ್ದು, ಇದನ್ನು ಪ್ರತಿಯೊಬ್ಬ ಕನ್ನಡಿಗರು ಮೈಗೂಡಿಸಿಕೊಳ್ಳುವುದರ ಜತೆಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

    ನಾಡಿನ ಕವಿಗಳು, ಜ್ಞಾನಪೀಠ ಪುರಸ್ಕೃತರು, ಶರಣರು, ದಾಸರು ಹಾಗೂ ಸಂತರು ಕನ್ನಡ ಸಾಹಿತ್ಯದ ತೇರು ಎಳೆಯುವ ಮೂಲಕ ಸದ್ಬುದ್ಧಿಯ ಹಣತೆ ಹೊತ್ತಿಸುವ ಕಾರ್ಯ ಮಾಡಿದ್ದಾರೆ. ಇದರಿಂದಾಗಿಯೇ ಕನ್ನಡ ತನ್ನತನ ಉಳಿಸಿಕೊಂಡು ಬರಲು ಸಾಧ್ಯವಾಗಿದೆ ಎಂದರು.

    ಒಂದು ಕಾಲದಲ್ಲಿ ದಾವಣಗೆರೆಗೆ ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಸರಿತ್ತು. ಆಗ ಇಲ್ಲಿ ಸಾಕಷ್ಟು ಮಿಲ್ಲುಗಳು, ಹತ್ತಿ ಗಿರಣಿಗಳಿದ್ದವು. ಇಲ್ಲಿಯ ಜನರು ಚೆನ್ನಾಗಿ ದುಡಿಯುತ್ತಿದ್ದರು. ಆದರೆ, ಈಗ ಅವೆಲ್ಲಾ ಮುಚ್ಚಿ ಹೋಗಿರುವ ಕಾರಣ ಹಲವರು ಕೆಲಸ ಕಳೆದುಕೊಂಡು ಬೀದಿ ಪಾಲಾದರು ಎಂದ ಅವರು, ಕನ್ನಡಿಗರು ಕೇವಲ ತಮ್ಮ ಭಾಷಾವೃತ್ತಿಯನ್ನು ಕಳೆದುಕೊಳ್ಳುತ್ತಿಲ್ಲ. ಬದುಕಿಗೆ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ರೈತರು ಮಾರ್ವಾಡಿಗಳಿಗೆ ತಮ್ಮ ಭೂಮಿಯನ್ನು ಮಾರಾಟ ಮಾಡಿ ಕಾಲೊನಿಗಳಲ್ಲಿ ಬದುಕು ನಡೆಸುತ್ತಿದ್ದಾರೆ. ಸರ್ಕಾರ ನೀಡುತ್ತಿರುವ ಅನ್ನಭಾಗ್ಯ, ಕ್ಷೀರಭಾಗ್ಯಕ್ಕೆ ಕೈ ಚಾಚುತ್ತಿರುವುದು ಸರಿಯಲ್ಲ ಎಂದು ನುಡಿದರು.

    ಆವರಗೆರೆಯಲ್ಲಿ ಹಲವಾರು ಜಾತಿ, ಧರ್ಮ, ಜನಾಂಗದ ಜನರಿದ್ದಾರೆ. ಅವರು ಸ್ನೇಹ, ಪ್ರೀತಿಯಿಂದ ಜೀವನ ನಡೆಸುತ್ತಿದ್ದಾರೆ. ಯುವಕರು ಕನ್ನಡ ಕಟ್ಟುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. ಜೀವನದಲ್ಲಿ ಸ್ನೇಹ ಮಾಡಬೇಕು, ಬಾಂಧವ್ಯ ಬೆಸೆಯಬೇಕು, ಜಾತಿ ಜಾತಿಗಳ ನಡುವೆ ಸಂಪರ್ಕ ಸೇತುವೆಯನ್ನು ಕಟ್ಟಬೇಕು. ಸ್ನೇಹಜೀವಿಗಳ ಜೊತೆ, ಬುದ್ಧಿಜೀವಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

     ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ವಿಶ್ವ ಕನ್ನಡ ಸಮ್ಮೇಳನ ಬೇರೊಂದು ಜಿಲ್ಲೆಗೆ ಸ್ಥಳಾಂತರಗೊಂಡಿದ್ದು, ಮಧ್ಯ ಕರ್ನಾಟಕವಾದ ದಾವಣಗೆರೆಯಲ್ಲಿ ನಡೆಸಲು ಮುರುಘಾ ಶರಣರು ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಸಲಹೆ ನೀಡಿದರು.ಸ್ನೇಹಜೀವಿ ಯುವಕ ಸಂಘದ ಅಧ್ಯಕ್ಷ ಭೂಪೇಶ್ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ, ಪಾಲಿಕೆ ಸದಸ್ಯರುಗಳಾದ ಜಯ್ಯಮ್ಮ ಗೋಪಿನಾಯ್ಕ್, ಬಿ.ಜಿ.ಅಜಯ್‍ಕುಮಾರ್, ನಾಗರಾಜ್, ಮಾಜಿ ಸದಸ್ಯ ಜಿ.ಸುರೇಶ್, ವಕೀಲರಾದ ಪರಮೇಶ್, ಜೆಡಿಎಸ್ ಮುಖಂಡ ಅರುಣ್‍ಕುಮಾರ್, ಕಾಂಗ್ರೆಸ್ ಮುಖಂಡ ಅಣ್ಣೇಶ್ ನಾಯ್ಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ಎನ್.ವೀರಾಚಾರಿ ಮತ್ತಿತರರು ಉಪಸ್ಥಿತರಿದ್ದರು.ಪಾಲಿಕೆ ಮಾಜಿ ಸದಸ್ಯ ಎಚ್.ಜಿ. ಉಮೇಶ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link