ಬೆಂಗಳೂರು
ವಯಸ್ಸಿಗೆ ಬಂದವರಿಗೆಲ್ಲ ಐಶ್ವರ್ಯ ರೈಯೇ ಆಗಬೇಕು,ಶಾಸಕರಾದರಿಗೆಲ್ಲ ಮಂತ್ರಿಗಳೇ ಆಗಬೇಕು.ಹಾಗಂತ ಸರ್ಕಾರ ರಚಿಸಲು ಕಾರಣರಾದ ಅನರ್ಹ ಶಾಸಕರಿಗೆ ಮೋಸ ಮಾಡಲು ಸಾಧ್ಯವಾಗುತ್ತದೆಯೇ?ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಕೊಲ್ಟಾ ಬ್ಯಾಟ್ಸ್‍ಮನ್ ತಜ್ಞ ಎಂದೇ ಖ್ಯಾತರಾದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬಾರಿಸಿದ ಸಿಕ್ಸರ್ ಇದು.
ಉಪಚುನಾವಣೆಗಳಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲುತ್ತದೆ.ಆ ಮೂಲಕ ರಾಜ್ಯ ಸರ್ಕಾರಕ್ಕೆ ಆವರಿಸಿರುವ ಅತಂತ್ರ ಪರಿಸ್ಥಿತಿ ನಿವಾರಣೆಯಾಗಲಿದೆ ಎಂದ ಅವರು,ಫಲಿತಾಂಶ ಬಂದ ನಂತರ ಮಂತ್ರಿಗಿರಿಗಾಗಿ ನಡೆಯುವ ಪೈಪೋಟಿ ಬಿಕಟ್ಟಿಗೆ ಕಾರಣವಾಗಲಿದೆಯಲ್ಲವೇ?ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ನೇರವಾಗಿ ಸಿಕ್ಸರ್ ಬಾರಿಸಿದರು.
ಅಲ್ರೀ, ವಯಸ್ಸಿಗೆ ಬಂದವರಿಗೆಲ್ಲ ಐಶ್ವರ್ಯ ರೈ ಯೇ ಆಗಬೇಕು. ಶಾಸಕರಾದವರಿಗೆಲ್ಲ ಮಂತ್ರಿಗಳಾಗಬೇಕು ,ಮಂತ್ರಿಗಳಾದವರಿಗೆ ಡಿಸಿಎಂ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ.ಆಸೆ ಯಾರಿಗಿರುವುದಿಲ್ಲ?ಎಂದು ಪ್ರಶ್ನಿಸಿದರು .ಮಂತ್ರಿಗಿರಿಗಾಗಿ ಹಲವರು ಆಸೆ ಪಡುತ್ತಾರೆ.ಅದು ಸಹಜ.ಆದರೆ ಈ ಸರ್ಕಾರ ರಚನೆಯಾಗಲು ಮುಖ್ಯ ಕಾರಣರಾದವರು ಅನರ್ಹ ಶಾಸಕರು.ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ಕಾರಣಕ್ಕಾಗಿ ನಾವು ಸರ್ಕಾರ ರಚಿಸಿದ್ದೇವೆ.
ಹೀಗಿರುವಾಗ ಉಪಚುನಾವಣೆಯಲ್ಲಿ ಗೆದ್ದ ಪ್ರತಿಯೊಬ್ಬ ಅನರ್ಹ ಶಾಸಕರೂ ಮಂತ್ರಿಗಳಾಗಲಿದ್ದಾರೆ.ಒಂದೇ ಜಿಲ್ಲೆಯಲ್ಲಿ ಮೂರು ಮಂದಿ ಇದ್ದರೂ ಅಷ್ಟೇ.ಐದು ಮಂದಿ ಇದ್ದರೂ ಅಷ್ಟೇ.
ಈ ಸಂದರ್ಭದಲ್ಲಿ ಜಿಲ್ಲೆ,ಜಾತಿವಾರು ಎಂಬ ಪ್ರಶ್ನೆಯೇ ಬರುವುದಿಲ್ಲ.ಈಗ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಗೆದ್ದರೆ ಸಹಜವಾಗಿ ಮಂತ್ರಿಯಾಗುತ್ತಾರೆ.ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಅವರಿಗೆ ಮಂತ್ರಿ ಸ್ಥಾನ ತಪ್ಪಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.
ಗೆಲ್ಲುವ ಅನರ್ಹ ಶಾಸಕರೆಲ್ಲ ನಿಶ್ಚಿತವಾಗಿ ಮಂತ್ರಿಗಳಾಗಲಿದ್ದಾರೆ.ಸೋತವರಿಗೆ ಮಾತ್ರ ಮಂತ್ರಿಗಿರಿ ಸಿಗುವುದಿಲ್ಲ.ಸ್ಪರ್ಧೆ ಮಾಡಿ ಗೆದ್ದರೆ ಮಂತ್ರಿಗಳಾಗುತ್ತೀರಿ.ಸ್ಪರ್ಧೆ ಮಾಡದಿದ್ದರೆ ಎಮ್ಮೆಲ್ಸಿಗಳಾಗುತ್ತೀರಿ ಎಂಬ ಮಾತಿಗಾಗಿ ಬಹುತೇಕರು ಸ್ಪರ್ಧೆ ಮಾಡಿದ್ದಾರೆ.ಗೆದ್ದರೆ ಮಂತ್ರಿಗಳಾಗುತ್ತಾರೆ.ಸೋತರೆ ಮಂತ್ರಿಗಳಾಗುವುದಿಲ್ಲ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿಗೆ ಮೂರು ಅಂಶಗಳು ಕಾರಣ.ಮೊದಲನೆಯದಾಗಿ ಒಗ್ಗಟ್ಟು.ಪಕ್ಷದಲ್ಲಿದ್ದ ಒಗ್ಗಟ್ಟು ವಿಪಕ್ಷಗಳಲ್ಲಿರಲಿಲ್ಲ.ಅದೇಕೋ ಗೊತ್ತಿಲ್ಲ.ಆದರೆ ಈ ಅಂಶ ನಮಗೆ ವರದಾಯಕವಾಗಿದೆ ಎಂದು ಹೇಳಿದರು.ಎರಡನೆಯದಾಗಿ ನಾವು ಮತದಾರರ ಮನೆ ಬಾಗಿಲು ತಲುಪಿದ್ದೇವೆ.ಮೂರನೆಯದಾಗಿ ನಾಡಿನ ಜನರಿಗೆ ಸ್ಥಿರ ಸರ್ಕಾರ ಬೇಕು.ಈ ಎಲ್ಲ ಅಂಶಗಳು ನಮಗೆ ನೆರವಾಗಿವೆ.ಹೀಗಾಗಿ ಡಿಸೆಂಬರ್ 9 ರಂದು ಬರಲಿರುವ ಫಲಿತಾಂಶ ರಾಜ್ಯದಲ್ಲಿರುವ ಅತಂತ್ರ ರಾಜಕೀಯ ಪರಿಸ್ಥಿತಿಯನ್ನು ನಿವಾರಿಸಲಿದೆ.ಮುಂದಿನ ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ.ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.
ಉಪಮುಖ್ಯಮಂತ್ರಿಯಾಗುವ ಆಸೆ ನಿಮಗಿದೆಯೇ?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ರಾಜಕೀಯದಲ್ಲಿರುವವರಿಗೆ ಅಧಿಕಾರಕ್ಕೇರುವ ಆಸೆ ಇದ್ದೇ ಇರುತ್ತದೆ.ಆಸೆಯೇ ಇಲ್ಲದವರು ರಾಜಕಾರಣ ಮಾಡುವುದು ಹೇಗೆ?ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
