ಬೆಂಗಳೂರು
ಬೆಂಗಳೂರು ನಗರದಲ್ಲಿ ಈರುಳ್ಳಿ ದರ ದಾಖಲೆ ಬರೆದಿದೆ. ಈಜಿಪ್ಟ್ ಈರುಳ್ಳಿ ನಗರದ ಮಾರುಕಟ್ಟೆಗೆ ಪ್ರವೇಶ ಮಾಡಿದೆ. ಸೋಮವಾರದಿಂದ ಜನರು ಈಜಿಪ್ಟ್ನಿಂದ ಆಮದಾಗಿರುವ ಈರುಳ್ಳಿ ರುಚಿಯನ್ನು ಸವಿಯಬಹುದು.
ನಗರದಲ್ಲಿ ಈರುಳ್ಳಿ ದರ ಕೆ. ಜಿ.ಗೆ 190 ರಿಂದ 200 ರೂ. ಆಗಿದೆ. ಈರುಳ್ಳಿ ಖರೀದಿ ಮಾಡಲು ಮಾರುಕಟ್ಟೆಗೆ ಹೋದವರು ಬರಿಗೈಯಲ್ಲಿ ವಾಪಸ್ ಬರುತ್ತಿದ್ದಾರೆ. ನಗರದ ಯಶವಂತಪುರ ಮಾರುಕಟ್ಟೆಗೆ ಈಗ ಈಜಿಪ್ಟ್ ಈರುಳ್ಳಿ ಬಂದಿದೆ.ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಈಜಿಪ್ಟ್ ಈರುಳ್ಳಿ ಗಾತ್ರದಲ್ಲಿ ದೊಡ್ಡದು. ಸುಮಾರು 750 ಗ್ರಾಂ ತೂಕವಿರುವ ಈರುಳ್ಳಿ ಒಂದು ಕೆ. ಜಿ.ಗೆ ಎರಡು ಮಾತ್ರ ಬರುತ್ತದೆ. ನಗರದ ಮಾರುಕಟ್ಟೆಯಲ್ಲಿ ಸೋಮವಾರದಿಂದ ಇದು ಲಭ್ಯವಿದ್ದು ಕೆ. ಜಿ. ಗೆ 150 ರೂ..
ಯಶವಂತಪುರಕ್ಕೆ ಗುಜರಾತ್, ಪುಣೆಯಿಂದ ಈರುಳ್ಳಿ ಬರುತ್ತದೆ. ಆದರೆ, ಈಗ ಪೂರೈಕೆ ಸ್ಥಗಿತಗೊಂಡಿರುವುದರಿಂದ ಈರುಳ್ಳಿ ವರ್ತಕರು ಖಾಲಿ ಕೂತಿದ್ದಾರೆ. ಹುಬ್ಬಳ್ಳಿ, ಗದಗ ಭಾಗದಿಂದಲೂ ಈರುಳ್ಳಿ ಬರುತ್ತಿಲ್ಲ.ಈಜಿಪ್ಟ್ ಈರುಳ್ಳಿ ಈಗಾಗಲೇ ಮಂಗಳೂರು, ಹುಬ್ಬಳ್ಳಿಯ ಮಾರುಕಟ್ಟೆಗೆ ಕಾಲಿಟ್ಟಿದೆ. ಕರಾವಳಿ ಭಾಗದಲ್ಲಿ ಜನರು ಈಜಿಪ್ಟ್ ಈರುಳ್ಳಿಗಿಂತ ಟರ್ಕಿಯ ಈರುಳ್ಳಿಯೇ ಹೆಚ್ಚು ರುಚಿ ಎಂದು ಹೇಳುತ್ತಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ದರದಲ್ಲಿ ವ್ಯತ್ಯಾಸವಿದೆ. ಕೋಲಾರದಲ್ಲಿ 140 ರಿಂದ 150, ದಾವಣಗೆರೆಯಲ್ಲಿ 150, ಮೈಸೂರಿನಲ್ಲಿ 165 ರಿಂದ 170, ಕಲಬುರಗಿಯಲ್ಲಿ 100, ಚಿಕ್ಕಮಗಳೂರಿನಲ್ಲಿ ಕೆ. ಜಿ. ಗೆ 140 ರೂ. ದರವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
