ತುಮಕೂರು
ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳ ಬಾಕಿಯಿರುವ ಪಿಎಫ್, ಇಎಸ್ಐ ಹಣವನ್ನು ಒಂದು ತಿಂಗಳೊಳಗಾಗಿ ಪೌರಕಾರ್ಮಿಕರ ಖಾತೆಗೆ ನೇರ ಜಮೆ ಮಾಡುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೆಮಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸಫಾಯಿ ಕರ್ಮಚಾರಿಗಳಿಗೆ ಮನೆಗಳ ಸಮಸ್ಯೆಯಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ನಿವೇಶನವನ್ನು ವಿತರಿಸಲು ಅಗತ್ಯ ಜಮೀನು ಗುರುತಿಸಲಾಗಿದೆ.
ಮನೆಗಳನ್ನು ನಿರ್ಮಿಸಿ ವಿತರಿಸಲಾಗುವುದು ಸಫಾಯಿ ಕರ್ಮಚಾರಿಗಳಿಗೆ ಉತ್ತಮ ಜೀವನ ಭದ್ರತೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳು ನಿರ್ವಹಿಸುವ ಕೆಲಸಕ್ಕೆ ಬೇಕಾಗುವ ಸುರಕ್ಷತಾ ಕಿಟ್, ಸಮವಸ್ತ್ರ, ಪಾದರಕ್ಷೆಗಳು ಸೇರಿದಂತೆ ವಿವಿಧ ರೀತಿಯ ಮೂಲಸೌಲಭ್ಯಗಳನ್ನು ಒದಗಿಸಬೇಕು. ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ಮಚಾರಿಗಳಿಗೆ ತಪ್ಪದೇ ಆರೋಗ್ಯ ತಪಾಸಣೆ ಮಾಡಬೇಕು ಹೊರಗುತ್ತಿಗೆ ಆಧಾರದ ಮೆಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಸರ್ಕಾರದ ಆದೇಶದಂತೆ ಕನಿಷ್ಠ ವೇತನವನ್ನು ನೀಡಬೇಕು. ಎಂದು ಅವರು ಹೇಳಿದರು.ಪೌರಕಾರ್ಮಿಕರು ಗುತ್ತಿಗೆದಾರರಡಿಯಲ್ಲಿ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂಬ ದಾಖಲೆಗಳನ್ನು ಪರಿಶೀಲಿಸಬೇಕು. ಗುತ್ತಿಗೆದಾರರು ಪೌರಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು.
ಗ್ರಾಮ ಪಂಚಾಯಿತಿಗಳಲ್ಲಿ ದಿನಗೂಲಿ ಆಧಾರದ ಮೇಲೆ ಹಲವಾರು ವರ್ಷಗಳಿಂದ ಸ್ವಚ್ಛತಾಗಾರರಾಗಿ ಕಾರ್ಯನಿರ್ವಹಿ ಸುತ್ತಿದ್ದವರಿಗೆ ಪಂಚಾಯತಿ ಸ್ವಚ್ಛಗಾರರ ನೇಮಕಾತಿಗಳಲ್ಲಿ ಶೇಕಡ 100ರಷ್ಟು ಆದ್ಯತೆ ನೀಡಬೇಕು. ಅವರಿಗೆ ಶೈಕ್ಷಣಿಕ ಮಾನದಂತ ನಿಗಧಿಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗ ಬಾರದು ಎಂದು ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್ 15 ದಿನಗಳಲ್ಲಿ ಪಿಡಿಓಗಳನ್ನು ಸಭೆ ಕರೆದು ಮಾಹಿತಿ ಪಡೆದು ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕುರಿತಂತೆ ಸಾರ್ವಜನಿಕರಿಗೆ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳಿಗೆ ವ್ಯಾಪಕ ಅರಿವು ಮೂಡಿಸಬೇಕು. ಅಲ್ಲದೆ ಸರ್ಕಾರದಿಂದ ಅವರ ಅಭಿವೃದ್ಧಿಗಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಸೌಲಭ್ಯ ಪಡೆಯುವಂತೆ ಮಾಡಬೇಕು ಎಂದು ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ರಾಕೇಶ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ಮತ್ತಿತರರ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ