ನಗರದಲ್ಲಿ ಬೆಂಬಲಿಗರಿಂದ ಹೋರಾಟ: ಸಿದ್ದರಾಮಯ್ಯ ರಾಜಿನಾಮೆ ವಾಪಸ್ಸಿಗೆ ಆಗ್ರಹ

ತುಮಕೂರು
   ರಾಜ್ಯದಲ್ಲಿ ನಡೆದ ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದಕ್ಕೆ ನೈತಿಕ ಹೊಣೆ ಹೊತ್ತು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಿರುವುದಕ್ಕೆ ತುಮಕೂರು ನಗರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು, ರಾಜಿನಾಮೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
    ಬುಧವಾರ ಬೆಳಗ್ಗೆ ತುಮಕೂರು ನಗರದ ಪುರಭವನ ಮುಂದಿನ ಬಿ.ಜಿ.ಎಸ್.ವೃತ್ತದಲ್ಲಿ ಈ ವಿಷಯವಾಗಿ ಪ್ರದರ್ಶನ ನಡೆಸಿ ಸಾರ್ವಜನಿಕರ ಗಮನ ಸೆಳೆದರು.ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಬಿ.ಲಕ್ಕಪ್ಪ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಕಾಂಗ್ರೆಸ್ ಮುಖಂಡರುಗಳಾದ ಮಾಜಿ ಎ.ಪಿ.ಎಂ.ಸಿ ಸದಸ್ಯ ಟಿ.ಆರ್.ಸುರೇಶ್ (ಗಡ್ಡೆ ಸೂರಿ), ಮಾಜಿ ನಗರಸಭಾಧ್ಯಕ್ಷ ಟಿ.ಪಿ.ಮಂಜುನಾಥ್, ಮೈದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಮೂರ್ತಿ, ಮಾಜಿ ಕಾರ್ಪೊರೇಟರ್ ಎನ್.ಮಹೇಶ್, ವಕೀಲ ನಾರಾಯಣಗೌಡ, ಮಾಜಿ ಕಾರ್ಪೊರೇಟರ್ ರಾಜೇಶ್ ದೊಡ್ಮನೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ, ಕಾಂಗ್ರೆಸ್ ಎಸ್.ಟಿ. ವಿಭಾಗದ ಮಲ್ಲೇಶ್, ಕುರುಬ ಸಮಾಜದ ಮುಖಂಡ ಮಹಲಿಂಗಯ್ಯ, ಮಾಜಿ ನಗರಸಭಾ ಸದಸ್ಯ ರಾಜಣ್ಣ, ಮುಖಂಡರಾದ ಸುರೇಶ್, ನರಸಿಂಹಯ್ಯ ಸೇರಿದಂತೆ ಅನೇಕ ಗಣ್ಯರು, ಕಾರ್ಯಕರ್ತರುಗಳು ಹಾಜರಿದ್ದರು. 
    ಎಲ್ಲರೂ ಸಿದ್ದರಾಮಯ್ಯ ಪರವಾಗಿ, ಕಾಂಗ್ರೆಸ್ ಪಕ್ಷದ ಪರವಾಗಿ ಘೋಷಣೆ ಕೂಗಿದರು. ಸಿದ್ದರಾಮಯ್ಯ ರಾಜಿನಾಮೆಯನ್ನು ಹಿಂಪಡೆಯಬೇಕು ಎಂದೂ ಘೋಷಣೆಯ ಮೂಲಕ ಆಗ್ರಹಿಸಿದರು. ಕೆಲಹೊತ್ತು ಬಿ.ಜಿ.ಎಸ್.ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಪ್ರದರ್ಶನ ನಡೆಸಿ, ಸಾರ್ವಜನಿಕರ ಗಮನ ಸೆಳೆದರು. 
    ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಲಕ್ಕಪ್ಪ, ಇಂದಿನ ಬದಲಾಗಿರುವ ರಾಜಕೀಯ ವಾತಾವರಣದಲ್ಲಿ ಸಿದ್ದರಾಮಯ್ಯ ಅವರಂತಹ ಜನನಾಯಕರ ಅವಶ್ಯಕತೆ ಅತ್ಯಂತ ಹೆಚ್ಚಾಗಿದೆ. ಆದ್ದರಿಂದ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಕೊಟ್ಟಿರುವ ರಾಜಿನಾಮೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link