ತುಮಕೂರು

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಟ್ಟಣ ವ್ಯಾಪಾರ ಸಮಿತಿಗೆ ಇದೇ ಡಿ.21 ರಂದು ಚುನಾವಣೆ ನಡೆಯಲಿದ್ದು, ಈ ಸಂಬಂಧದ ಪ್ರಕ್ರಿಯೆಗಳು ಪಾಲಿಕೆ ಕಚೇರಿಯಲ್ಲಿ ಪಾಲಿಕೆ ವತಿಯಿಂದ ಅಧಿಕೃತವಾಗಿ ಆರಂಭವಾಗಿದೆ.
ಚುನಾವಣಾ ಕಾರ್ಯಕ್ಕಾಗಿ ಪಾಲಿಕೆಯ ಪಶ್ಚಿಮದ್ವಾರದ ಮೊದಲನೇ ಕೊಠಡಿಯಲ್ಲಿ ಕಚೇರಿ ತೆರೆಯಲಾಗಿದೆ. ತುಮಕೂರು ತಾಲ್ಲೂಕು ತಹಸೀಲ್ದಾರ್ ಜಿ.ವಿ. ಮೋಹನ್‍ಕುಮಾರ್ ಚುನಾವಣಾಧಿಕಾರಿಗಳಾಗಿದ್ದು, ಚುನಾವಣೆ ಪ್ರಕ್ರಿಯೆಯ ಅವಧಿಯಲ್ಲಿ ಪ್ರತಿನಿತ್ಯ ಇಲ್ಲೇ ಹಾಜರಿರುತ್ತಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಡಿ.9 ರಿಂದ ಆರಂಭವಾಗಿದ್ದು, 13 ರವರೆಗೆ ಮುಂದುವರೆಯಲಿದೆ. ಈವರೆಗೆ ಜಗದೀಶ್ ಮತ್ತು ಬಾಬಾ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಡಿ.14 ರಂದು ನಾಮಪತ್ರ ಪರಿಶೀಲನೆ ನಡೆಯುವುದು. ಡಿ.15 ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯದಿನವಾಗಿರುತ್ತದೆ. ಅಗತ್ಯವಿದ್ದಲ್ಲಿ ಡಿ.21 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಪಾಲಿಕೆ ಕಚೇರಿಯಲ್ಲಿ ಚುನಾವಣೆ ನಡೆಯುವುದು. ಬಳಿಕ ಫಲಿತಾಂಶ ಪ್ರಕಟಿಸಲಾಗುವುದು.
ಪಟ್ಟಣ ವ್ಯಾಪಾರ ಸಮಿತಿಗೆ ಸರ್ಕಾರೇತರ ಸದಸ್ಯರನ್ನಾಗಿ ಬೀದಿಬದಿ ವ್ಯಾಪಾರದಲ್ಲಿ ತೊಡಗಿರುವ ಒಟ್ಟು 10 ಜನರನ್ನು ಆಯ್ಕೆ ಮಾಡಬೇಕಾಗಿದೆ. ಈ 10 ಜನರಲ್ಲಿ ಮೂವರು ಮಹಿಳೆಯರು ಇರಬೇಕು. ಮಿಕ್ಕಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ವಿಕಲಚೇತನ ವರ್ಗಕ್ಕೆ ಸೇರಿದ ತಲಾ ಒಬ್ಬರು ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಇಬ್ಬರು ಇರಬೇಕು.
ತುಮಕೂರು ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಒಟ್ಟು 2,224 ಬೀದಿಬದಿ ವ್ಯಾಪಾರಿಗಳಿಗೆ ಅಧಿಕೃತವಾಗಿ ಗುರುತುಪತ್ರ ನೀಡಿದೆ. ಅವರೆಲ್ಲರೂ ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ ಎಂದು ತಹಸೀಲ್ದಾರ್ ಜಿ.ವಿ. ಮೋಹನ್ ಕುಮಾರ್ ತಿಳಿಸಿದ್ದಾರೆ.ಈ ಮಧ್ಯೆ ಪಾಲಿಕೆ ಕಚೇರಿಯಲ್ಲಿರುವ ನಗರ ಜೀವನೋಪಾಯ ಕೇಂದ್ರÀದ ಅಧಿಕಾರಿ ರಾಮಾಂಜಿನಪ್ಪ ಮತ್ತು ಸಿಬ್ಬಂದಿ ವರ್ಗದವರು ತುಮಕೂರು ನಗರದ ಬೀದಿಬದಿ ವ್ಯಾಪಾರಸ್ಥರ ಬಳಿ ತೆರಳಿ, ಈ ಚುನಾವಣೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
