ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಮೂಲ ನಿವಾಸಿಗಳಿಗೆ ತೊಂದರೆ

ಕುಣಿಗಲ್

    ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ವಿವಾಧಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ದೇಶದಲ್ಲಿ ಜಾರಿಗೆ ತರಬಾರದು. ಆಗೊಂದು ವೇಳೆ ಜಾರಿಗೆ ಬಂದರೆ ಹೋರಾಟ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತ ಜಿ.ಕೆ. ನಾಗಣ್ಣ ತಿಳಿಸಿದರು.

    ಅವರು ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕುರಿತು ಮಾತನಾಡುತ್ತಾ, ಕೇಂದ್ರ ಗೃಹ ಸಚಿವ ಅಮಿತ್‍ಶಾ ಲೋಕಸಭೆಯಲ್ಲಿ ಮಂಡಿಸಿ ಅಂಗಿಕಾರ ಪಡೆದುಕೊಂಡಿರುವ ಈ ಮಸೂದೆಯು ಭವಿಷ್ಯದಲ್ಲಿ ದೇಶವನ್ನು ವಿಭಜಿಸಲಿದೆ. ಒಂದು ನಿರ್ದಿಷ್ಟ ಜನಾಂಗವನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿ ಅವರಲ್ಲಿ ಭೀತಿಯುಂಟು ಮಾಡಿ ಅವರನ್ನು ದೇಶದಿಂದ ಹೊರದಬ್ಬುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

      ಈ ಕ್ರಮ ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ನಾಶಮಾಡಿ ಸರ್ವಾಧಿಕಾರದ ಕಡೆಗೆ ತೆಗೆದುಕೊಂಡು ಹೋಗುವ ಅಘಾತಕಾರಿ ಬೆಳವಣಿಗೆಯಾಗಲಿದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಆದ್ಯತೆಕೊಟ್ಟಿದ್ದಾರೆ. ಮೋದಿಯವರ ಸರ್ಕಾರ ಹಂತ ಹಂತವಾಗಿ ಇದನ್ನು ನಾಶಮಾಡಲು ಹುನ್ನಾರ ಮಾಡುತ್ತಿದೆ. ಪ್ರಾಸ್ತಾವಿಕ ಮಸೂದೆಯಲ್ಲಿ ಡಿ.31 2014ಕ್ಕಿಂತ ಮುಂಚೆ ಪಾಕಿಸ್ತಾನ, ಆಪ್ಘಾನಿಸ್ತಾನ, ಬಾಂಗ್ಲಾದೇಶದಿಂದ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಸಿಕ್, ಬೌದ್ಧ, ಜೈನ, ಪಾರಸಿ, ಕ್ರಿಶ್ಚಿಯನ್ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡುವುದಾಗಿ ಹೇಳುತ್ತದೆ.

     ಇದೇ ಸಮಯದಲ್ಲಿ ಮುಸ್ಲಿಂ ಜನಾಂಗದವರಿಗೆ ಪೌರತ್ವ ನೀಡುವುದಿಲ್ಲ ಎನ್ನುವುದಾಗಿದೆ. ಭಾರತೀಯ ಸಂವಿಧಾನದ 14ನೇ ವಿಧಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಅವಕಾಶವನ್ನು ಕಲ್ಪಿಸಿದೆ. ಹುಟ್ಟು ಜಾತಿ ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದಿದೆ.

     ಸಂವಿಧಾನವನ್ನು ತಿದ್ದುಪಡಿ ಮಾಡಲು ಶಾಸಕಾಂಗಕ್ಕೆ ಅವಕಾಶ ಇದ್ದರೂ ಕೂಡ ಅದರ ಮೂಲ ಆಶಯಕ್ಕೆ ಧಕ್ಕೆ ತರುವಂತೆ ಮಾಡಬಾರದೆಂದು ಮಾನ್ಯ ಸರ್ವೋಚ್ಚನ್ಯಾಯಾಲಯ ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರದ ಪ್ರಕರಣದಲ್ಲಿ ತೀರ್ಪುನೀಡಿದ್ದರೂ ಅದನ್ನು ಲೆಕ್ಕಿಸದೆ ಸಮಾನತೆಯ ಆಶಯಕ್ಕೆ ವಿರುದ್ಧವಾಗಿ ಈ ಮಸೂದೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ನ್ಯಾಯಾಲಯದ ತೀರ್ಪಿಗೂ ಗೌರವಕೊಡುತ್ತಿಲ್ಲ ಎಂದು ಆರೋಪಿಸಿದ ಅವರು, ದೇಶದಲ್ಲಿ ಎನ್.ಆರ್.ಸಿ. ಮತ್ತು ಸಿಎಬಿಯನ್ನು ಜಾರಿಗೆ ತರುವುದರಿಂದ ಮೂಲನಿವಾಸಿಗಳಾದ ಅಲೆಮಾರಿಗಳು, ಆದಿವಾಸಿಗಳು, ಬುಡಕಟ್ಟು ಜನಾಂಗ ತಮ್ಮ ಪೌರತ್ವವನ್ನು ಸಾಬೀತು ಮಾಡಲು ದಾಖಲೆ ಒದಗಿಸಲು ವಿಫಲರಾಗಿ ಸರ್ಕಾರದ ಖೈದಿಗಳಾಗಿ ನಿರ್ಮಾಣವಾಗುತ್ತಾರೆ. ಆದ್ದರಿಂದ ಕೂಡಲೆ ಸರ್ಕಾರ ಈ ಮಸೂದೆಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link