ಬೆಂಗಳೂರು
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದ ನೂರಾ ನಾಲ್ಕು ಪ್ರವಾಹಪೀಡಿತ ತಾಲ್ಲೂಕುಗಳಿಗೆ 1000 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ.
ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಈ ವಿಷಯ ತಿಳಿಸಿದರಲ್ಲದೆ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ಪ್ರತಿ ವರ್ಷ ಐದು ಸಾವಿರ ಕೋಟಿ ರೂಪಾಯಿ ಬರುತ್ತಿದ್ದು,ಈಗಿನ ನಿರ್ಧಾರದಿಂದ ಅದು ಆರು ಸಾವಿರ ಕೋಟಿ ರೂಪಾಯಿಗಳಿಗೆ ಏರಲಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ಇದುವರೆಗೆ ಪ್ರತಿ ವರ್ಷ ನೂರು ಮಾನವ ಶ್ರಮದ ದಿನಗಳಿಗೆ ಕೂಲಿ ಕೊಡುವ ಕೆಲಸವಾಗುತ್ತಿತ್ತು .ಆದರೆ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ಅವರ ನೆರವಿಗೆ ಧಾವಿಸಲು ಮಾನವ ಶ್ರಮದ ದಿನಗಳನ್ನು ನೂರರಿಂದ ನೂರೈವತ್ತಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿದೆ.
ಅದೇ ರೀತಿ ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರ ಖಾತೆಗೆ ನೇರವಾಗಿ ಹಣ ಹಾಕುವ ಪದ್ಧತಿ ಇರಲಿಲ್ಲ.ಇದರಿಂದಾಗಿ ಬಹುತೇಕ ಪಿಡಿಓಗಳು ಹಣ ತಿಂದು ಹಾಕುತ್ತಿದ್ದರು.ಆದರೆ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದ್ದು ಇನ್ನು ಮುಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರ ಖಾತೆಗೆ ಕೇಂದ್ರ ಸರ್ಕಾರವೇ ನೇರವಾಗಿ ಹಣ ಹಾಕಲಿದೆ ಎಂದು ವಿವರಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ನೀಡಬೇಕಾದ ಕೂಲಿ ಹಣವನ್ನು ಕೇಂದ್ರ ಸರ್ಕಾರ ಸಕಾಲಕ್ಕೆ ನೀಡದಿರುವ ಕಾರಣ ಅಪಾರ ಪ್ರಮಾಣದ ಹಣ ಇನ್ನೂ ಬರಬೇಕಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ,ಹಿಂದೆಲ್ಲ ಅಂತಹ ದೂರುಗಳಿದ್ದವು.ಆದರೆ ಈಗಿಲ್ಲ ಎಂದರು.
ಈ ಹಿಂದೆ ಎರಡು,ಎರಡೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಬಾಕಿ ಉಳಿಯುತ್ತಿತ್ತು.ಆದರೆ ಈಗ ಪರಿಸ್ಥಿತಿ ಬದಲಾಗಿದೆ.ಎಂಟು ನೂರು ಕೋಟಿ ರೂಪಾಯಿಗಳಷ್ಟು ಹಣ ಬಾಕಿ ಬರಬೇಕಿದೆ.ಆದರೆ ಒಂದು ಕಡೆಯಿಂದ ಹಣ ಬರುತ್ತದೆ.ಮತ್ತೊಂದು ಕಡೆಯಿಂದ ಕೂಲಿಗಾಗಿ ಪೂರೈಕೆಯಾಗುತ್ತದೆ.ಹೀಗಾಗಿ ಈ ಹಿಂದಿನಂತೆ ಸಮಸ್ಯೆ ಏನಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಸ್ಪಷ್ಟ ಪಡಿಸಿದರು.
ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಹುತೇಕ ನಿಷ್ಕ್ರಿಯವಾಗಿದ್ದು ಈ ಹಿನ್ನೆಲೆಯಲ್ಲಿ ಆ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಕೇವಲ ಎರಡು,ಮೂರು ಕಂಪನಿಗಳಿಗೆ ಅವಕಾಶ ನೀಡಿದಾಗ ಇಂತಹ ಸಮಸ್ಯೆ ಉದ್ಭವವಾಗುತ್ತದೆ.ಹೀಗಾಗಿ ಮುಂದಿನ ದಿನಗಳಲ್ಲಿ ಆಯಾ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅವರೇ ಟೆಂಡರ್ ಕರೆದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗುವುದು.
ಅದೇ ಕಾಲಕ್ಕೆ ಈಗ ಶುದ್ಧ ಕುಡಿಯುವ ನೀರಿನ ಘಟಕಗಳು ನಿಷ್ಕ್ರಿಯಗೊಳ್ಳಲು ಏನು ಕಾರಣ?ಅನ್ನುವ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ.ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.ರಾಜ್ಯದ ಎಲ್ಲ ಗ್ರಾಮಪಂಚಾಯ್ತಿಗಳಲ್ಲಿ ಘನತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ತಲಾ ಇಪ್ಪತ್ತು ಲಕ್ಷ ರೂಪಾಯಿ ಒದಗಿಸಿದ್ದು ಈಗಾಗಲೇ ಹಲವು ಗ್ರಾಮಪಂಚಾಯ್ತಿಗಳು ಅದನ್ನು ಅಳವಡಿಸಿಕೊಳ್ಳತೊಡಗಿವೆ ಎಂದರು.
ಅದೇ ರೀತಿ ಗ್ರಾಮ ಪಂಚಾಯ್ತಿಗಳಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು ಮುಂದಿನ ಎರಡು,ಮೂರು ವರ್ಷಗಳಲ್ಲಿ ಈ ಕೆಲಸ ಪೂರ್ಣವಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








