ದಾವಣಗೆರೆ:
ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಚೇತರಿಸಿಕೊಂಡು ಬರಲಿ ಹಾಗೂ ಅವರಿಗೆ ಆಯುರ್ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ, ಕುರುಬರ ಸಮಾಜದ ಮುಖಂಡರು ನಗರ ದೇವತೆ ಶ್ರೀದುರ್ಗಾಂಭಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಗುರುವಾರ ಬೆಳಿಗ್ಗೆ ನಗರದ ಶ್ರೀದುರ್ಗಾಂಭಿಕಾ ದೇವಿ ದೇವಸ್ಥಾನದಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಿಸಿ, 101 ತೆಂಗಿನ ಕಾಯಿ ಹೊಡೆದು ಸಿದ್ದರಮಯ್ಯನವರು ಗುಣಮುಖರಾಗಿ ಬರಲಿ ಹಾಗೂ ಅವರಿಗೆ ಆಯುರ್ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ದೇವಿಯಲ್ಲಿ ಸಮಾದ ಮುಖಂಡರು ಮೊರೆ ಇಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಬೀರೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಿ.ಲಿಂಗರಾಜ್, ನಾಡುಕಂಡ ಅತ್ಯುತ್ತಮ ರಾಜಕೀಯ ನಾಯಕ, ಮಾಜಿ ಸಿಎಂ ಸಿದ್ದಾರಯಮಯ್ಯನವರ ಎದೆಯಲ್ಲಿ ನೋವು ಕಂಡು ಬಂದು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ಗುಣಮುಖರಾಗಿ ಬರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಐದು ವರ್ಷ ಸಮರ್ಥ ಆಡಳಿತ ನೀಡಿ, ನಾಡಿನ ಜನರಿಗೆ ಹಲವು ಭಾಗ್ಯಗಳನ್ನು ನೀಡಿ, ಭಾಗ್ಯಗಳ ಸರದಾರನೆಂದೇ ಖ್ಯಾತಿ ಪಡೆದಿದ್ದು, ಅವರಿಗೆ ಆಯುರ್, ಆರೋಗ್ಯ ಪ್ರಾಪ್ತಿಯಾಗಿ ಮತ್ತಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳಲು ದೇವಿ ದುರ್ಗಾಂಭಿಕೆಯು ಪ್ರೇರಣೆ ನೀಡಲಿ ಎಂದು ಪ್ರಾರ್ಥಿಸಿದರು.
ಶ್ರೀದುರ್ಗಾಂಭಿಕ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಬಡವರ ಬಂಧು, ಹಿಂದುಳಿದ ವರ್ಗಗಳ ನೇತಾರ ಸಿದ್ದರಾಮಯ್ಯನವರಲ್ಲಿ ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ಕುರುಬ ಸಮಾಜದ ಮುಖಂಡರು, ಅಭಿಮಾನಿಗಳು ದೇವಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ನಾವೆಲ್ಲರೂ ಸೇರಿ ದುರ್ಗಾಂಭಿಕೆಗೆ ಕುಂಕುಮಾರ್ಚನೆ ಮಾಡಿಸಿದ್ದು, ಅವರು ಕೂಡಲೇ ಗುಣಮುಖರಾಗಿ ಬಂದು ಇನ್ನೂ ಹೆಚ್ಚಿನ ಕೆಲಸ ಮಾಡುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ, ಸಮಾಜದ ಮುಖಂಡರುಗಳಾದ ಬಳ್ಳಾರಿ ಷಣ್ಮುಖಪ್ಪ, ಎಚ್.ಜಿ.ಸಂಗಪ್ಪ, ಇಟ್ಟಿಗುಡಿ ಮಂಜುನಾಥ್, ಬಾಡಾ ರವಿ, ಮನೋಜ್, ಎನ್.ಜೆ.ನಿಂಗಪ್ಪ, ಆರ್.ಬೀರೇಶ್, ಸುನೀಲ್.ಡಿ, ಅರಳಿಕಟ್ಟೆ, ಹನುಮಂತರಾವ್ ಸಾವಂತ್, ಎಚ್.ಬಿ.ಉಮೇಶ್, ಅಜಯ್, ಅಂಗಡಿ ಲೋಕಣ್ಣ, ಗುಡಾಳಿ ಪರಮೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ