ಚಿತ್ರದುರ್ಗ :

ಆರೋಗ್ಯಕ್ಕೆ ಪೂರಕವಾಗಿರುವ ಸಿರಿಧಾನ್ಯಗಳನ್ನು ರಾಜ್ಯದ ಅಕ್ಷರ ದಾಸೋಹ, ಹಾಸ್ಟೆಲ್ ಹಾಗೂ ಅಂಗನವಾಡಿಗಳಲ್ಲಿ ನೀಡುವ ಆಹಾರ ಕಾರ್ಯಕ್ರಮಗಳಿಗೆ ಬಳಕೆಯಾದರೆ ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ದೊರೆಯುತ್ತದೆ, ಉತ್ತಮ ಬೆಲೆಯೂ ದೊರೆಯುತ್ತದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಹೇಳಿದರು.
ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಸಂಸ್ಥೆ ಹಾಗೂ ಕೃಷಿ ಬೆಲೆ ಆಯೋಗದ ವತಿಯಿಂದ ಗುರುವಾರ ನಗರದ ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಪಡಿತರ ವ್ಯವಸ್ಥೆಗೆ ಅವಶ್ಯವಿರುವ ರಾಗಿ ಮತ್ತು ಸಿರಿಧಾನ್ಯಗಳ ಉತ್ಪಾದಿಸಿ, ಪಡಿತರ ವ್ಯವಸ್ಥೆಯನ್ನು ಸದೃಡಗೊಳಿಸುವುದು’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವವರ ಸಂಖ್ಯೆ ಕಡಿಮೆ ಇದೆ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಿರಿಧಾನ್ಯವನ್ನು ವ್ಯಾಪಕವಾಗಿ ಬೆಳೆಯುತ್ತಾರೆ. ನಮ್ಮಲ್ಲಿ ಬೆಳೆಯುವ ಸಿರಿಧಾನ್ಯವನ್ನು ನಮ್ಮ ರಾಜ್ಯದಲ್ಲಿಯೇ ಸರ್ಕಾರಿ ಕಾರ್ಯಕ್ರಮಗಳಿಗೆ ಬಳಕೆಯಾದರೆ, ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ದೊರೆತಂತಾಗಲಿದೆ ಅಲ್ಲದೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ದೊರೆಯಲಿದೆ ಎಂದರು
ಸಿರಿಧಾನ್ಯ ಉತ್ತಮ ಆರೋಗ್ಯಕ್ಕೆ ಉತ್ಕøಷ್ಟ ಆಹಾರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ‘ನಮ್ಮ ರಾಜ್ಯ, ನಮ್ಮ ಸ್ವಾಯತ್ತತೆ, ನಮ್ಮ ಉತ್ಪಾದನೆ, ನಮ್ಮ ಬೆಲೆ’ ಇದು ಸಿರಿಧಾನ್ಯ ಬೆಳೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಜಾರಿಯಾಗಬೇಕಿದೆ ಎಂದರು.
ಸ್ವಾಂತತ್ರ್ಯ ಬಂದಾಗ 33 ಕೋಟಿ ಜನತೆಗೆ ಆಹಾರ ಒದಗಿಸಬೇಕಿತ್ತು. ಆದರೆ ಅಂದು ದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ಆಹಾರ ಸಾಕಾಗುತ್ತಿರಲಿಲ್ಲ.
ಬೇರೆ ಬೇರೆ ದೇಶಗಳಿಗೆ ಕಾಡಿ ಬೇಡಿ ಆಹಾರ ಪಡೆಯುವ ಸ್ಥಿತಿ ಇತ್ತು. ಇದು ನಮ್ಮಲ್ಲಿ ಹೆಚ್ಚಿನ ಆಹಾರ ಉತ್ಪಾದನೆಗೆ ತಂತ್ರಜ್ಞಾನದ ಮೊರೆ ಹೋಗಲು ಕಾರಣವಾಯಿತು. ಇಂದು ಜನಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಬ್ಬರಿಗೂ ಉತ್ತಮ ಆಹಾರ ದೊರಯಲೇಬೇಕು. ಆಹಾರ ಸ್ವಾಂತತ್ರ್ಯವಿಲ್ಲದಿದ್ದರೆ, ನಿಜವಾದ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ ಎಂದರ್ಥ ಎಂದು ಅಭಿಪ್ರಾಯ ಪಟ್ಟರು
ಪ್ರಸ್ತುತ ದಿನಮಾನಗಳಲ್ಲಿ ದೇಶದಲ್ಲಿ 285 ದಶಲಕ್ಷ ಟನ್ ಆಹಾರ ಉತ್ಪಾದಿಸಲಾಗುತ್ತಿದೆ. 300 ದಶಲಕ್ಷ ಟನ್ ತರಕಾರಿ ಹಾಗೂ 300 ಕೋಟಿ ಟನ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ದೇಶ ಹಸಿವು ಮುಕ್ತವನ್ನಾಗಿಸಲು ಭಾರತ ಸರ್ಕಾರ ‘ಆಹಾರ ಭದ್ರತಾ ಕಾಯ್ದೆ 2013 ರಲ್ಲಿ ಜಾರಿಗೆ ತಂದಿತು. ಇದರನ್ವಯ ಗ್ರಾಮೀಣ ಪ್ರದೇಶದಲ್ಲಿ ಶೇ. 75 ಹಾಗೂ ನಗರ ಪ್ರದೇಶದಲ್ಲಿ ಶೇ. 50 ರಷ್ಟು ಆಹಾರ ಧಾನ್ಯ ನೀಡಬೇಕು’ ಎಂಬ ವರದಿಯಿದೆ.
ಆಹಾರ ಭದ್ರತೆ ಇಲ್ಲದ ದೇಶಕ್ಕೆ ಭವಿಷ್ಯವಿಲ್ಲ ಎಂದರು ನಮ್ಮ ದೇಶದಲ್ಲಿ ಹೆಚ್ಚಿನ ಆಹಾರ ಉತ್ಪಾದನೆಯ ಉದ್ದೇಶದಿಂದ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಯಿತು. ಕೃಷಿ ಯಾಂತ್ರೀಕರಣ ನಮ್ಮ ದೇಶಕ್ಕೆ ಅಗತ್ಯ ಇದು ಕೃಷಿ ಕ್ರಾಂತೀಕರಣ ಮಾಡಿದೆ. ಆದರೆ ರಾಸಾಯನೀಕರಣ ತುಂಬಾ ಅಪಾಯಕಾರಿಯಾಗಿದೆ. ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಾನ್ಸೂನ್ ಮಾರುತ ಹಾಗೂ ಮಾರುಕಟ್ಟೆಗಳು ರೈತನೊಂದಿಗೆ ಜೂಜಾಡುತ್ತಿವೆ. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೇ ರೈತ ಕಂಗಾಲಾಗಿದ್ದಾನೆ ಎಂದು ಹನುಮನಗೌಡ ಅವರು ಹೇಳಿದರು.
ಚಿತ್ರದುರ್ಗ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿರಿಧಾನ್ಯಗಳಲ್ಲಿ ಹೇರಳವಾದ ಪೌಷ್ಠಿಕಾಂಶಗಳಿದ್ದು, ಅವು ರಕ್ತದೊತ್ತಡ, ಮದುಮೇಹಗಳಿಂದ ಕಾಪಾಡಿ ಉತ್ತಮ ಆರೋಗ್ಯ ವೃದ್ಧಿಸುತ್ತವೆ. ಜಿಲ್ಲೆಯು ಹೆಚ್ಚು ರಾಗಿ ಹಾಗೂ ಸಿರಿಧಾನ್ಯ ಬೆಳೆಯುವ ಪ್ರದೇಶ ಹೊಂದಿದ್ದು, ಜಿಲ್ಲೆಯ ಪ್ರಮುಖ ಬೆಳೆ ರಾಗಿಯಾಗಿದೆ. ಜಿಲ್ಲೆಯ ಒಟ್ಟು 60 ಸಾವಿರ ಹೆ. ನಲ್ಲಿ 6-7 ಲಕ್ಷ ಟನ್ ಸಿರಿಧಾನ್ಯ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು
ಸಿರಿಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ ನೀಡಲು ಸರ್ಕಾರ ‘ರೈತಸಿರಿ’ ಯೋಜನೆ ಜಾರಿಗೆ ತಂದಿದ್ದು, ಇದರಡಿ 10,000 ಸಹಾಯಧನ ನೀಡಲಾಗುತ್ತಿದೆ. ರೈತರು ಬೆಳೆದ ಸಿರಿಧಾನ್ಯಗಳನ್ನು ಸರ್ಕಾರ ನೇರವಾಗಿ ಖರೀದಿ ಮಾಡಿ, ವಿದ್ಯಾರ್ಥಿ ವಸತಿನಿಲಯಗಳಿಗೆ, ಅಂಗನವಾಡಿ, ಉದ್ಯೋಗಸ್ಥ ಮಹಿಳೆಯರ ವಸತಿ ಗೃಹಗಳಿಗೆ ನೀಡಬೇಕು. ಮದ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಆದಾಯ ದೊರೆಯುವಂತೆ ಮಾಡಬೇಕು ಎಂದರು.
ಐಎಟಿ ಕಾರ್ಯದರ್ಶಿ ಜೆ. ತಿಪ್ಪೇಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ಮಹೇಶ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಓಂಕಾರಪ್ಪ, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂದನ್, ಕೃಷಿ ಇಲಾಖೆ ಉಪನಿರ್ದೇಶಕ ಎ.ಸಿ ಮಂಜು, ಐಎಟಿ ಉಪಾಧ್ಯಕ್ಷ ಹನುಮಂತರಾಯರೆಡ್ಡಿ, ರೈತ ಮುಖಂಡರುಗಳಾದ ರಂಗಸ್ವಾಮಿ, ತಿಮ್ಮಣ್ಣ, ಬಸವರಾಜಪ್ಪ, ಶರಣಪ್ಪ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








