ಬೆಂಗಳೂರು, 
ನೆದರ್ಲ್ಯಾಂಡ್ನಿಂದ ಹೈಡ್ರೊ ಗಾಂಜಾ ಬೀಜಗಳನ್ನು ಅಂಚೆಯಲ್ಲಿ ತರಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮನೆಯೊಳಗೆ ಹೂ ಕುಂಡಗಳಲ್ಲಿ ಬಿತ್ತಿ ಬೆಳೆಸಿ ಮಾರಾಟದ ಜೊತೆಗೆ ಶ್ವಾನದಳಕ್ಕೂ ಪತ್ತೆ ಹಚ್ಚಲು ಸಾಧ್ಯವಾಗದ ಸ್ಟಾಂಪ್ ಪೇಪರ್ನ ರೀತಿಯ ಎಲ್ಎಸ್ಟಿ ಸ್ಲಿಪ್ಸ್ಗಳನ್ನು ತರಿಸಿಕೊಂಡು ಮಾರುತ್ತಿದ್ದ ವ್ಯವಸ್ಥಿತ ಜಾಲವನ್ನು ಪತ್ತೆಹಚ್ಚುವಲ್ಲಿ ಕೇಂದ್ರ ಅಪರಾಧ (ಸಿಸಿಬಿ) ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಾಲದ ಬಿಹಾರದ ಪಾಟ್ನಾ ನಗರದ ಎಸ್ಕೆ ಪುರಿಯ ಹಮಾತ್ಯರಿಶಿ ಬಿನ್ (23), ದರ್ಬಾಂಗ್ ಜಿಲ್ಲೆಯ ಮಂಗಲ್ಮುಕ್ಯ (30) ಹಾಗೂ ಹೊಸಕೆರೆ ಹಳ್ಳಿಯ ದ್ವಾರಕಾನಗರದ ಆದಿತ್ಯಕುಮಾರ್ (21) ಸೇರಿ ಮೂವರನನ್ನು ಬಂಧಿಸಿ 225 ಎಸ್ಎಲ್ಡಿ ಸ್ಲಿಪ್ಸ್ಗಳು, 2 ಕೆಜಿ ಗಾಂಜಾ, 10,200 ನಗದು, ಗಾಂಜಾ ಗಿಡಗಳಿದ್ದ ಕುಂಡಗಳು, 3 ಮೊಬೈಲ್ಗಳು, ಎಲ್ಇಡಿ ಲೈಟ್ಗಳು, ಕಂಪ್ಯೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಅಮಾತ್ಯರಿಶಿ ಜೈನ್ ವಿಶ್ವವಿದ್ಯಾನಿಲಯದಲ್ಲಿ ಬಿಬಿಎಂ ವಿದ್ಯಾಭ್ಯಾಸಕ್ಕೆ ಬಂದಿದ್ದ. ತನ್ನದೆ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ಮತ್ತೊಬ್ಬ ಆರೋಪಿ ಮಂಗಲ್ಮುಕ್ಯನನ್ನು ಪರಿಚಯ ಮಾಡಿಕೊಂಡಿದ್ದು, ಇವರಿಬ್ಬರಿಗೆ ವಿದ್ಯಾಭ್ಯಾಸದ ವೇಳೆ ಆದಿತ್ಯಕುಮಾರ್ ಸ್ನೇಹಿತನಾಗಿದ್ದ. 3 ವರ್ಷಗಳ ಹಿಂದೆ ಅಪಾರ್ಟ್ಮೆಂಟ್ವೊಂದರಲ್ಲಿ ಫ್ಲಾಟ್ ಖರೀದಿಸಿದ್ದ ಅಮಾನ್ಯ ನಗರದಲ್ಲಿಯೆ ನೆಲೆಯೂರಿದ್ದ.
ಸುಲಭವಾಗಿ ಹಣಗಳಿಸಿ ಶ್ರೀಮಂತರಾಗಲು ಈ ಮೂವರು ಟಾರ್ಬ್ರೌವ್ಸರ್ನಲ್ಲಿ ಶೋಧ ನಡೆಸಿ ಪತ್ತೆ ಹಚ್ಚಿದ ಡಾರ್ಕ್ ವೆಬ್ಸೈಟ್ನಲ್ಲಿ ಹುಡುಕಾಟ ನಡೆಸಿದಾಗ ಮನೆಯಲ್ಲಿಯೆ ಸೂರ್ಯನ ಪ್ರಖರವಾದ ಬೆಳಕಿನ ಎಲ್ಇಡಿ ಲೈಟ್ಗಳ ವ್ಯವಸ್ಥೆ ಮಾಡಿ ಹೈಡ್ರೊ ಗಾಂಜಾ ಗಿಡಗಳನ್ನು ಬೆಳೆಸುವುದು ಕಂಡು ಬಂತು.
ಮೊಬೈಲ್ನಲ್ಲಿ ಸಂಪರ್ಕ
ಹೈಡ್ರೊ ಗಾಂಜಾ ಬೀಜಗಳು ನೆದರ್ಲ್ಯಾಂಡ್ನಲ್ಲಿ ದೊರೆಯುವ ಮಾಹಿತಿ ಲಭ್ಯವಾಗಿದೆ. ಕೂಡಲೆ ಅಲ್ಲಿಂದ ಕೊರಿಯರ್ ಮೂಲಕ ಬೀಜಗಳನ್ನು ತರಿಸಿ 3 ವರ್ಷಗಳ ಹಿಂದೆ ಅಮಾತ್ಯರಿಶಿ ಖರೀದಿಸಿದ್ದ ಕೆಂಗೇರಿಯ ಎಂಬಿಆರ್ ಶಾಂಘ್ರಿಲಾ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ವೊಂದರಲ್ಲಿ ಅತ್ಯಾಧುನಿಕ ಎಲ್ಇಡಿ ಲೈಟ್ಗಳನ್ನು ಬಳಸಿ ಹೂ ಕುಂಡಗಳಲ್ಲಿ ಅವುಗಳನ್ನು ಬಿತ್ತಿ ರಾಸಾಯನಿಕಗಳನ್ನು ಸಿಂಪಡಿಸಿ 3 ತಿಂಗಳೊಳಗೆ ಹುಲುಸಾಗಿ ಬೆಳೆಯುವಂತೆ ಮಾಡಿದ್ದರು.
ಮೊಬೈಲ್,ಆನ್ಲೈನ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಇದಲ್ಲದೆ ಸ್ಟಾಂಪ್ ಮಾದರಿಯಲ್ಲಿದ್ದ ಎಲ್ಎಸ್ಟಿ ಸ್ಲಿಪ್ಸ್ಗಳನ್ನು ತರಿಸಿ ಮಾರಾಟ ಮಾಡುತ್ತಿದ್ದು, ಒಂದು ಸ್ಟಾಂಪ್ನಲ್ಲಿ ಸುಮಾರು 100 ರವರಗೆ ಸ್ಲಿಪ್ಸ್ಗಳನ್ನು ಮಾಡುತ್ತಿರುವುದು ಕಂಡು ಬಂದಿದೆ. ಗೊತ್ತಾಗದಂತೆ ಕೃತ್ಯ ಬೇಡಿಕೆಗನುಗುಣವಾಗಿ ಸ್ಲಿಪ್ಸ್ಗಳು ಸಾವಿರದಿಂದ ಲಕ್ಷದವರೆಗೆ ಮಾರಾಟವಾಗುತ್ತಿದ್ದವು.
ಅಕ್ಕ-ಪಕ್ಕದ ಫ್ಲಾಟ್ಗಳ ಮಾಲೀಕರಿಗೆ ಆರೋಪಿಗಳು ಗಾಂಜಾ ಬೆಳೆಸುತ್ತಿರುವುದಾಗಲಿ, ಎಲ್ಎಸ್ಟಿ ಸ್ಲಿಪ್ಸ್ಗಳನ್ನು ಕಳಿಸುತ್ತಿರುವುದು ಗೊತ್ತಾಗಿರಲಿಲ್ಲ. ಈ ಬಗ್ಗೆ ಯಾರಿಗೂ ಯಾವುದೆ ರೀತಿಯಲ್ಲಿ ಅನುಮಾನ ಬರದಂತೆ ಆರೋಪಿಗಳು ಕೃತ್ಯ ನಡೆಸುತ್ತಿದ್ದರು.ಗಿರಾಕಿಯೊಬ್ಬರು ನೀಡಿದ ಮಾಹಿತಿಯಾನ್ನಾಧರಿಸಿ ಡಾರ್ಕ್ವೆಬ್ಸೈಟ್ ಸೇರಿ ಇನ್ನಿತರ ಅಂತರ್ಜಾಲ ತಾಣದಲ್ಲಿ ಹುಡುಕಾಟ ನಡೆಸಿ ವಾರಗಳ ಕಾಲ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಿದ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ಫ್ಲಾಟ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ದೇಶದಲ್ಲಿಯೆ ಮೊದಲು ಮನೆಯಲ್ಲಿ ಎಲ್ಇಡಿ ಲೈಟ್ಗಳನ್ನು ಬಳಸಿ ಗಾಂಜಾ ಬೆಳೆಸುತ್ತಿರುವುದು ದೇಶದಲ್ಲೆ ವಿನೂತನ ಪ್ರಯೋಗವಾಗಿದೆ. ಐಪಿಎಸ್ ಅಧಿಕಾರಿಯಾದ ನನಗೆ ಈ ಬಗ್ಗೆ ತಿಳಿದಿರಲಿಲ್ಲ. ಮೊದಲೆಲ್ಲ ವಿದ್ಯೆ ಇಲ್ಲದ ದುಷ್ಟ ಬುದ್ಧಿಯವರು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರೆ, ಈಗ ಉನ್ನತ ವಿದ್ಯಾಭ್ಯಾಸ ಮಾಡಿದವರೆ ದಿಢೀರ್ ಶ್ರೀಮಂತರಾಗಲು ಇಂತಹ ವ್ಯವಸ್ಥಿತ ಕೃತ್ಯ ನಡೆಸಿ ಮುಂದಿನ ಪೀಳಿಗೆಯನ್ನು ಮಾದಕವಸ್ತು ಜಾಲಕ್ಕೆ ತಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.
ಆರೋಪಿಗಳ ಬಳಿ ವಶಪಡಿಸಿಕೊಂಡಿರುವ ಮೊಬೈಲ್ನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಅವುಗಳಲ್ಲಿ ದಾಖಲಾಗಿರುವ ಮೊಬೈಲ್ ಸಂಖ್ಯೆ ಆಧರಿಸಿ ಜಾಲದಲ್ಲಿರುವ ಇನ್ನಿತರರು ಹಾಗೂ ಗಿರಾಕಿಗಳನ್ನು ಪತ್ತೆ ಮಾಡಲಾಗುವುದು ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕುಲ್ದೀಪ್ ಕುಮಾರ್ ಜೈನ್ ಅವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








