ರಾಷ್ಟ್ರೀಯ ಲೋಕ ಅದಾಲತ್ : ಸಂಧಾನ ಮೂಲಕ 3577 ಪ್ರಕರಣಗಳು ಇತ್ಯರ್ಥ

ಚಿತ್ರದುರ್ಗ

     ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ನಡೆದಿದ್ದು ಹಲವಾರು ಪ್ರಕರಣಗಳನ್ನು ರಾಜಿ ಮಾಡುವುದರ ಮೂಲಕ ಕಕ್ಷಿದಾರರಿಗೆ ನ್ಯಾಯವನ್ನು ಕೂಡಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಮತ್ತು ನ್ಯಾಯಾಲಯ ಮುಂದಾಗಿವೆ.

     ಚಿತ್ರದುರ್ಗ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ.ವಟವಟಿ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ನ್ಯಾಯಾಲಯದಲ್ಲಿ ಒಟ್ಟು 28,982 ಪ್ರಕರಣಗಳು ಬಾಕಿ ಉಳಿದಿವೆ. ಅದರಲ್ಲಿ 4,935 ಪ್ರಕರಣಗಳನ್ನು ಕೈಗೆತ್ತಿಕೊಂಡು 3,577 ಪ್ರಕರಣಗಳನ್ನು ರಾಜಿ ಮಾಡಿಸಲಾಯಿತು. 865 ವ್ಯಾಜ್ಯ ಪೂರ್ವ ಪ್ರಕರಣಗಳಾಗಿವೆ. ಮೋಟಾರ್ ವಾಹನ, ಎಲೆಕ್ಟ್ರಿಸಿಟಿ ಹಾಗೂ ಅಮಲ್ ಜಾರಿ ಪ್ರಕರಣಗಳು ಹೆಚ್ಚಾಗಿ ಇತ್ಯರ್ಥವಾದವು.

     2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬನ್ನಿಕಟ್ಟಿ ಹನುಮಂತಪ್ಪ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಶಿವಣ್ಣ ಉಪಸ್ಥಿತರಿದ್ದರು.

     ಹೊಳಲ್ಕೆರೆ ಪಟ್ಟಣದಲ್ಲಿ ಆಯೋಜಿಸಿದ್ದ ಲೋಕಾ ಅದಾಲತ್‍ನಲ್ಲಿ 528 ವಿವಿಧ ಪ್ರಕರಣಗಳಲ್ಲಿ 392 ಇತ್ಯರ್ಥಗೊಂಡಿವೆ. ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್, ಪ್ರಧಾನ ಸಿವಿಲ್ ನ್ಯಾಯಾಧೀಶ ವಿ.ರವಿಕುಮಾರ್, ಅಪರ ಸಿವಿಲ್ ನ್ಯಾಯಾಧೀಶ ಜೆ.ಎನ್.ನಾಗೇಶ್ ಉಪಸ್ಥಿತಿಯಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥವಾದವು.ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

    ಮೊಳಕಾಲ್ಮೂರಿನಲ್ಲಿ ಹಲವು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿದ್ದ 410 ಸಿವಿಲ್ ಪ್ರಕರಣಗಳನ್ನು ಉಭಯ ಪಕ್ಷಗಾರರ ಸಮನ್ವಯದಲ್ಲಿ ಬಗೆಹರಿಸುವ ಮೂಲಕ ಜನತಾ ನ್ಯಾಯಾಲಯ ದಾಖಲೆ ಬರೆದಿದೆ.ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ಸಿವಿಲ್ ನ್ಯಾಯಾಧೀಶೆ ಎಸ್. ನಿರ್ಮಲಾ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮದಲ್ಲಿ, ಕೈಗೆತ್ತಿಕೊಂಡ 450 ಪ್ರಕರಣಗಳ ಪೈಕಿ ಮನೆ, ಹಣದ ವ್ಯವಹಾರ 4, ಅಮೂಲ್ ಜಾರಿ 5, ಪಾಲು ವಿಭಾಗ 2, ಶಾಶ್ವತ ನಿರ್ಬಂಧಿತ ಪ್ರಕರಣ 3, ಲಘು ಪ್ರಕರಣ 369, ಜೀವನಾಂಶ ಪ್ರಕರಣ 3, ಜನನ ಪ್ರಕರಣ 17, ವ್ಯಾಜ್ಯ ಪೂರ್ವ ಪ್ರಕರಣ 2, ನಿರ್ದಿಷ್ಟ ಪರಿಹಾರ ಪ್ರಕರಣ 4, ಕ್ರಿಮಿನಲ್ 392 ಹಾಗೂ ಸಿವಿಲ್ ಪ್ರಕರಣ 18 ಇತ್ಯರ್ಥವಾಗಿ, ಒಟ್ಟು 17,7000 ಲಕ್ಷ ರೂ. ವಸೂಲಾಗಿದೆ.

    ಅದಾಲತ್ ಬಳಿಕ ನಡೆದ ಸಭೆಯಲ್ಲಿ ನ್ಯಾಯಾಧೀಶೆ ಎಸ್.ನಿರ್ಮಲಾ ಮಾತನಾಡಿ, ಉಭಯ ಕಕ್ಷಿದಾರರು ಹಣ, ಸಮಯ ಉಳಿಸುವುದಲ್ಲದೆ ದ್ವೇಷ, ಅಸೂಯೆ, ವೈಷಮ್ಯಕ್ಕೆ ಆಸ್ಪದ ಕೊಡದೆ ಪರಸ್ಪರ ಸಹಬಾಳ್ವೆ ನಡೆಸಬೇಕು. ಈ ನಿಟ್ಟಿನಲ್ಲಿ ಸಮಾನ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಜನತಾ ನ್ಯಾಯಾಲಯ ತುಂಬಾ ಮಹತ್ವ ಪಡೆದುಕೊಂಡಿದೆ ಎಂದರು.

    ಈ ಕಾನೂನಾತ್ಮಕ ಜನತಾ ನ್ಯಾಯಾಲಯದಲ್ಲಿ ತಮಗೆ ನ್ಯಾಯ ದೊರಕಲಿದೆ ಎಂದು ನಂಬಿಕೆ ಇಟ್ಟು ಕಕ್ಷಿದಾರರು ಸಹಕರಿಸಿದ್ದರಿಂದ ನೂರಾರು ಪ್ರಕರಣ ಇತ್ಯರ್ಥಗೊಳಿಸಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.ವಕೀಲರ ಸಂಘದ ಕಾರ್ಯದರ್ಶಿ ಜಿ.ಮಂಜುನಾಥ್, ಸಹಾಯಕ ಅಧಿಕಾರಿ ವೃಷಭೇಂದ್ರ, ವಕೀಲರಾದ ಅನಂತಮೂರ್ತಿ, ಚಂದ್ರಶೇಖರ್, ರಾಜಶೇಖರನಾಯಕ, ಓಬಣ್ಣ, ಕುಮಾರಪ್ಪ, ಪಾಪಯ್ಯ, ಆನಂದ್, ಸುರೇಶ್, ಎ.ಕೆ. ತಿಮ್ಮಪ್ಪ, ಎಂ.ಎನ್. ವಿಜಯಲಕ್ಷ್ಮಿ, ಕೆ. ವಿನೋದಾ, ವಿ.ಡಿ. ರಾಘವೇಂದ್ರ, ಮಹಾಂತೇಶ್ ಹಾಗೂ ಉಭಯ ಕಕ್ಷಿದಾರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap