ದಾವಣಗೆರೆ:
ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗÀರದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಗ್ರಾ.ಪಂ. ನೌಕರರು ಸೋಮವಾರ ಜಿಲ್ಲಾ ಪಂಚಾಯತ್ ಚಲೋ ನಡೆಸಿದರು.
ನಗರದ ಹದಡಿ ರಸ್ತೆಯಲ್ಲಿರುವ ವಿಮಾನ ಮಟ್ಟಿ ಬಳಿಯ ಗಣಪತಿ ದೇವಸ್ಥಾನದಿಂದ ಕರವಸೂಲಿಗಾರರು, ಗುಮಾಸರ್ತು, ಡಾಟಾ ಎಂಟ್ರಿ ಆಪರೇಟರ್‍ಗಳು, ನೀರಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರು ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾ ಪಂಚಾಯತ್ ಕಚೇರಿಗೆ ತೆರಳಿ, ತಮ್ಮ ಬೇಡಿಕೆಗಳನ್ನು ಈಡೇರಿಸದ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿ.ಪಂ. ಸಿಇಒ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಉಮೇಶ್, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇಎಫ್‍ಎಂಎಸ್ ಮೂಲಕ ವೇತನ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದ್ದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೆಲ ನೌಕರರ ದಾಖಲೆಗಳು ಗ್ರಾಮ ಪಂಚಾಯಿತಿಗಳಲ್ಲಿ ದೊರೆಯುತ್ತಿಲ್ಲ ಎಂಬ ನೆಪವೊಡ್ಡಿ ಸಿಬ್ಬಂದಿಗಳ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶಕ್ಕೆ ಅಳವಡಿಸದೇ ಸತಾಯಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ. ನೌಕರರಿಗೆ ಸಂಬಳ ನೀಡುವ ವೇತನ ಖಾತೆಗೆ ಹಣ ಜಮೆಯಾಗಿ ಎರಡು ತಿಂಗಳಾದರೂ ವೇತನ ಪಾವತಿಸದೇ ಪಿಡಿಒಗಳು ತಳ ಮಟ್ಟದ ನೌಕರರ ಶೋಷಣೆ ಮಾಡುತ್ತಿದ್ದಾರೆ. ಅಲ್ಲದೇ, 14ನೇ ಹಣಕಾಸು ಯೋಜನೆ ಅನುದಾನದಲ್ಲಿ ಶೇ.10ರಷ್ಟು ಅನುದಾನವನ್ನು ಸಿಬ್ಬಂದಿ ವೇತನ ಪಾವತಿಸಲು ಬಳಸಬೇಕೆಂಬ ನಿಯಮವಿದ್ದರೂ ಪಿಡಿಒಗಳು ವೇತನ ಪಾವತಿ ಮಾಡಿಲ್ಲ. ಹೀಗಾಗಿ ಗ್ರಾ.ಪಂ. ನೌಕರರಿಗೆ ಕಳೆದ 15-20 ತಿಂಗಳ ವೇತನವೇ ಆಗಿಲ್ಲ. ಮಾಡಿದ ಕೆಲಸಕ್ಕೆ ವೇತನ ನೀಡದಿದ್ದರೇ ಜೀವನ ನಡೆಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಇಎಫ್‍ಎಂಎಸ್‍ನಿಂದ ಹೊರಗುಳಿದಿರುವ ಸಿಬ್ಬಂದಿಗಳ ಮಾಹಿತಿ ಅಳವಡಿಸಲು ಪಿಡಿಓಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅನುಮೋದನೆ ಆಗದೆ ಉಳಿದಿರುವ ನೌಕರರಿಗೂ ಸಹ 2019ರ ಜುಲೈ 23ರ ಆದೇಶದ ಪ್ರಕಾರ ಅನುಮೋದನೆ ನೀಡಬೇಕು. ಪಂಪ್ ಆಪರೇಟರ್, ಜವಾನ ಸಿಪಾಯಿಗಳನ್ನು ಖಾಲಿ ಇರುವ ಕರವಸೂಲಿಗಾರರ ಹುದ್ದೆಗೆ ಮುಂಬಡ್ತಿ ನೀಡಬೇಕು. ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರವಸೂಲಿಗಾರ, ಗುಮಾಸ್ತ, ಡಾಟಾ ಎಂಟ್ರೆ ಆಪರೇಟರ್‍ಗಳನ್ನು ಸಿ ಗ್ರೂಪ್ ಹಾಗೂ ವಾಟರ್ ಮ್ಯಾನ್, ಜವಾನ, ಸ್ವಚ್ಛತಗಾರರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ನೇಮಕಾತಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ. ನೌಕರರ ಸಂಬಳಕ್ಕಾಗಿ 890 ಕೋಟಿ ರೂ. ಅವಶ್ಯಕತೆ ಇದ್ದು, ಹಿಂದಿನ ಸರ್ಕಾರ 518 ಕೋಟಿ ರೂ. ಮಂಜೂರು ಮಾಡಿದ್ದು, ಉಳಿದ 372 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಚಾರ್, ಗುಡಾಳ್ ತಿಪ್ಪೇಸ್ವಾಮಿ, ಬೇತೂರು ಬಸವರಾಜ್, ಗೋವಿಂದರಾಜು, ಓಂಕಾರಪ್ಪ ಮತ್ತಿತರರು ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ