ಬೆಂಗಳೂರು
ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಕೃತ್ಯದ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದ ಪತಿಯ ಕೊಲೆಗೆ ಸುಫಾರಿ ನೀಡಿದ ಪತ್ನಿ ಆಕೆಯ ಪ್ರಿಯಕರ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಡೊಂಕಣಿ ಕೋಟೆಯ ಮಂಜುಳಾ ಆಲಿಯಾಸ್ ಕಳ್ಳ ಮಂಜಿ (44) ಆಕೆಯ ಪ್ರಿಯಕರ ಮೈಸೂರಿನ ಕೊಡಗಹಳ್ಳಿಯ ಚೆಲುವರಾಯಿ ಆಲಿಯಾಸ್ ಚೆಲುವ (42) ಅಲ್ಲದೇ ಮೆಡಹಳ್ಳಿಯ ಗಣೇಶ್ ಆಲಿಯಾಸ್ ಗಣಿ (25) ಮಂಜುನಾಥ್ (27) ನನ್ನು ಬಂಧಿಸಲಾಗಿದೆ
ಆರೋಪಿಗಳಿಂದ 7 ಲಕ್ಷ ಮೌಲ್ಯದ 223 ಗ್ರಾಂ ಚಿನ್ನ, 5,630 ನಗದು, ಮಚ್ಚು, ಲಾಂಗ್, ಮೊಬೈಲ್ ವಶಪಡಿಸಿಕೊಂಡು ಪ್ರಮುಖ ಆರೋಪಿ ಕಳ್ಳ ಮಂಜಿ, ಪತಿ ಶಂಕರನ ಕೊಲೆಗೆ ಸುಫಾರಿ ಕೊಟ್ಟಿದ್ದ ಪ್ರಕರಣವನ್ನು ಭೇದಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಜ್ ತಿಳಿಸಿದ್ದಾರೆ.
ವಯಸ್ಸಾದ ಮಹಿಳೆಯರನ್ನು ಗುರುತಿಸಿ ತಮಗೆ ಹಣ ಸಿಕ್ಕಿದ್ದು ಅದನ್ನು ಹಂಚಿಕೊಳ್ಳೋಣವೆಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಣೆ ಪ್ರಮಾಣ ಮಾಡುವಂತೆ ಹೇಳಿ ಅವರು ಧರಿಸಿದ ಚಿನ್ನಾಭರಣವನ್ನು ಬಿಚ್ಚಿಸಿ ಗಮನ ಬೇರೆಡೆ ಸೆಳೆದು ದೋಚಿ ಕಳ್ಳ ಮಂಜಿ ಪರಾರಿಯಾಗುತ್ತಿದ್ದಳು.
ಕಳ್ಳ ಮಂಜಿಗೆ ಇತರ ಮೂವರು ನೆರವು ನೀಡುತ್ತಿದ್ದು ತನ್ನ ಕಳವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂದು ಪತಿ ಶಂಕರನನ್ನು ಬಂಧಿತ ಆನೇಕಲ್‌ನ ಗಣೇಶ್ ಆಲಿಯಾಸ್, ಮಂಜುನಾಥ್ ಆಲಿಯಾಸ್ ಮಂಜುಗೆ ಒಂದು ಲಕ್ಷ ರೂ.ಗಳ ಸುಫಾರಿ ಕೊಟ್ಟು ಕೊಲೆಗೆ ಸಂಚು ರೂಪಿಸಿದ್ದಳು.
ಸುಫಾರಿ ಪಡೆದ ಆರೋಪಿಗಳು ಕಳೆದ ನ. 25 ರಂದು ಮುಂಜಾನೆ 5ರ ವೇಳೆ ಗೊಟ್ಟಿಗೆರೆಯ ಪಿಳ್ಳಗಾನಹಳ್ಳಿಯ ಮಾರುತಿ ಬಡಾವಣೆ ಬಳಿ ಮಾರುತಿ ಆಟೋ ಕಾರ್ ನಲ್ಲಿ ಶಂಕರನ ಬೈಕ್ ಗೆ ಡಿಕ್ಕಿ ಹೊಡೆದು ಬೀಳಿಸಿ ಲಾಂಗ್ ನಿಂದ ತಲೆಗೆ ಹೊಡೆದು ಪರಾರಿಯಾಗಿದ್ದರು.
ಪಾರಾದ ಪತಿ
ಗಂಭೀರವಾಗಿ ಗಾಯಗೊಂಡಿದ್ದ ಶಂಕರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕೋಣನಕುಂಟೆ ಪೊಲೀಸ್ ಇನ್ಸ್ ಪೆಕ್ಟರ್ ಧರ್ಮೇಂದ್ರ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿ ಕಳ್ಳ ಮಂಜಿ ಪ್ರಿಯಕರ ಚೆಲುವರಾಯನ ಜೊತೆ ಯಳ್ಳಂದೂರು, ಅರಕಲಗೂಡು, ಶ್ರವಣಬೆಳಗೊಳ, ಹುಣಸೂರು, ಚನ್ನರಾಯಪಟ್ಟಣ, ಮಾಗಡಿ ರಸ್ತೆ ಇನ್ನಿತರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಗಮನ ಬೇರೆಡೆ ಸೆಳೆದು ಕಳವು ಮಾಡಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.