ತುಮಕೂರು
ತುಮಕೂರು ನಗರದಲ್ಲಿ ಮೆದುಳುಜ್ವರ(ಜಾಪನೀಸ್ ಎನ್‍ಸಫಲೈಟಿಸ್)ದ ಒಂದು ಪ್ರಕರಣ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.
ನಗರದ 32 ನೇ ವಾರ್ಡ್ ವ್ಯಾಪ್ತಿಯ ಬಡ್ಡಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ 2 ನೇ ತರಗತಿ ವ್ಯಾಸಂಗ ಮಾಡುತ್ತಿರುವ 9 ವರ್ಷ ವಯಸ್ಸಿನ ಬಾಲಕನಲ್ಲಿ ಮೆದುಳು ಜ್ವರ ಇರುವುದು ದೃಢಪಟ್ಟಿದೆ. ವಿಪರೀತ ಜ್ವರದಿಂದ ಬಳಲುತ್ತಿದ್ದ ಈ ಬಾಲಕನಿಗೆ ಮೊದಲಿಗೆ ತುಮಕೂರಿನಲ್ಲಿ ಚಿಕಿತ್ಸೆ ನೀಡಿದ್ದು, ನಂತರದಲ್ಲಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಅಲ್ಲಿ ರಕ್ತಪರೀಕ್ಷೆ ಮಾಡಿದಾಗ ಮೆದುಳುಜ್ವರ ಇರುವುದು ದೃಢಪಟ್ಟಿದೆ.
ಈ ಪ್ರಕರಣ ಬೆಳಕಿಗೆ ಬಂದೊಡನೆ ಗುರುವಾರ ಸಂಜೆ ಬಡ್ಡಿಹಳ್ಳಿಯಲ್ಲಿರುವ ಸದರಿ ಬಾಲಕನ ಮನೆಗೆ ಮತ್ತು ಶಾಲೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಕೀಟಶಾಸ್ತ್ರಜ್ಞೆ ಡಾ. ಉಷಾ, ಕ್ಯಾತಸಂದ್ರ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳು, ಕ್ಯಾತಸಂದ್ರ ಪಶುವೈದ್ಯಾಧಿಕಾರಿಗಳು ಹಾಗೂ ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದರು. ಹಂದಿಗಳಿಂದ ಸೊಳ್ಳೆಗಳ ಮೂಲಕ ಈ ರೋಗ ಹರಡುವುದರಿಂದ ಈ ಭಾಗದ ಒಂದೆರಡು ಹಂದಿಗಳನ್ನು ಹಿಡಿದು ಅವುಗಳ ರಕ್ತವನ್ನು ಸಂಗ್ರಹಿಸಿರುವ ಅಧಿಕಾರಿಗಳು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಲಕ್ಷಕ್ಕೊಬ್ಬರಿಗೆ ಬರುತ್ತದೆ ಈ ರೋಗ
ಹಂದಿಗಳಿಂದ ಮೆದುಳು ಜ್ವರ ಬರುತ್ತದೆ. ರೋಗಪೀಡಿತ ಹಂದಿಗೆ ಕಚ್ಚುವ ಸೊಳ್ಳೆಗಳು ಮನುಷ್ಯರಿಗೆ ಕಚ್ಚಿದರೆ ಅಂಥವರಲ್ಲಿ ಮೆದುಳು ಜ್ವರ ಕಾಣಿಸುತ್ತದೆ. ಹೀಗೆ ಸೊಳ್ಳೆಗಳಿಂದ ಈ ರೋಗ ಹರಡುತ್ತದೆ. ವಿಪರೀತ ಜ್ವರ, ಪ್ರಜ್ಞಾಹೀನತೆ, ದೃಷ್ಟಿದೋಷ ಉಂಟಾಗುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ವಿಶೇಷವಾಗಿ ಮಕ್ಕಳಲ್ಲಿ, ಬಾಲಕರಲ್ಲಿ ಈ ರೋಗ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ. ಲಕ್ಷಕ್ಕೊಬ್ಬರಿಗೆ ಈ ರೋಗ ತಗಲುವ ಸಾಧ್ಯತೆ ಇದೆ ಎಂದು ಮಹಾನಗರ ಪಾಲಿಕೆಯ ಮೂಲಗಳು ಹೇಳಿವೆ.
ಹಂದಿ ವಿರುದ್ಧ ಕಾರ್ಯಾಚರಣೆ
ತುಮಕೂರು ನಗರದ ಬಡ್ಡಿಹಳ್ಳಿ ಪ್ರದೇಶದಲ್ಲಿ ಮೆದುಳುಜ್ವರ ಪ್ರಕರಣ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಹಂದಿಗಳ ಹಾವಳಿ ನಿವಾರಿಸಲು ಆಯುಕ್ತ ಟಿ.ಭೂಪಾಲನ್ ಅವರು ಸೂಚಿಸಿದ್ದು, ಅದರಂತೆ ತಕ್ಷಣದಿಂದಲೇ ನಗರಾದ್ಯಂತ ಹಂದಿಗಳ ಹಾವಳಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್‍ಕುಮಾರ್ ತಮ್ಮನ್ನು ಸಂಪರ್ಕಿಸಿದ ಪತ್ರಕರ್ತರೊಡನೆ ಮಾತನಾಡುತ್ತ ಹೇಳಿದರು.
ಹಂದಿಗಳ ಹಾವಳಿ ಬಗ್ಗೆ ಜನಪ್ರತಿನಿಧಿಗಳಿಂದ ಹಾಗೂ ಜನರಿಂದ ದೂರುಗಳು ಬರುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ನಿರ್ದಿಷ್ಟ ಪ್ರದೇಶಗಳಲ್ಲಿ ಹಂದಿಗಳನ್ನು ಹಿಡಿದು ಹೊರಕ್ಕೆ ಸಾಗಿಸಲಾಗಿತ್ತು. ಅದೇ ಕಾರ್ಯಾಚರಣೆಯನ್ನು ಈಗ ಪುನರಾರಂಭಿಸಲಾಗುತ್ತದೆ ಎಂದರು.
ನಗರದಲ್ಲಿ ಹಂದಿ ಸಾಕಾಣಿಕೆ ಮಾಡುವ 68 ಕುಟುಂಬಗಳಿವೆ. ನಗರಾದ್ಯಂತ ಸುಮಾರು 25 ಸಾವಿರಕ್ಕೂ ಅಧಿಕ ಹಂದಿಗಳಿರಬಹುದೆಂಬ ಅಂದಾಜಿದೆ. ಈಗಾಗಲೇ ಇವರಿಗೆಂದು ಜಿಲ್ಲಾಡಳಿತ ಅಣ್ಣೇನಹಳ್ಳಿಯಲ್ಲಿ 4 ಎಕರೆ 21 ಗುಂಟೆ ಜಾಗ ಮಂಜೂರು ಮಾಡಿದೆ. ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಂದಿಗಳನ್ನು ಮೇಯಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಲಾಗಿದೆ.
ಅಲ್ಲದೆ ಇವರಿಗೆ ವೈಜ್ಞಾನಿಕ ಹಂದಿ ಸಾಕಾಣಿಕೆ ಬಗ್ಗೆ ಪಶುವೈದ್ಯ ಇಲಾಖೆ ಮೂಲಕ ತರಬೇತಿ ಕೊಡಿಸಲಾಗಿದೆ. ಇಷ್ಟಾಗಿಯೂ ಇನ್ನೂ ನಗರದಲ್ಲಿ ಹಂದಿ ಹಾವಳಿ ಇದೆ ಎಂದು ಅವರು ಮಾಹಿತಿ ನೀಡಿದರು. ಇದರೊಂದಿಗೆ ನಗರದಲ್ಲಿ ಸ್ವಚ್ಛತೆ ಕಾಪಾಡಲು ಸಹ ವಿಶೇಷ ಗಮನವನ್ನು ಪಾಲಿಕೆ ನೀಡಲಿದೆ ಎಂದು ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ.