ಚಹಾ ಸೇವನೆಯಿಂದ ಮಾದಕ ವ್ಯಸನಗಳ ಕಡೆಗೆ…

ವಿದ್ಯಾರ್ಥಿಗಳ ಕೈಗೆ ಮೊಬೈಲ್ ಏಕೆ…?

ತುಮಕೂರು:

ಜಾಗೃತಿ ಲೇಖನ:ಪ್ರಜಾ ಪ್ರಗತಿ 

    ಧೂಮ ಹಾಗೂ ತಂಬಾಕು ಉತ್ಪನ್ನಗಳ ರುಚಿ ಹತ್ತಿಸಿಕೊಂಡ ವಿದ್ಯಾರ್ಥಿ ಸಮೂಹ ಕ್ರಮೇಣ ತಮ್ಮದೇ ಗುಂಪು ಸೃಷ್ಟಿಸಿ ಕೊಳ್ಳುತ್ತಾರೆ. ಬೇಸರವಾಯಿತು ಅಥವಾ ಕ್ಲಾಸ್‍ನಲ್ಲಿ ಬೋರ್ ಎನ್ನಿಸಿತು ಎಂದಾಕ್ಷಣ ಒಂದು ಧಮ್ ಎಳೆಯಲು ಹೊರಡುತ್ತಾರೆ. ಚಹಾ ಸೇವನೆ, ಸಿಗರೇಟ್ ಇತ್ಯಾದಿಗಳು ಕೆಲವರಿಗೆ ನಿತ್ಯ ಸೇವನೆಯ ಚಟಗಳಾಗಿ ಪರಿವರ್ತಿತವಾಗಿವೆ. ಇದು ಇಷ್ಟಕ್ಕೆ ಸೀಮಿತಗೊಳ್ಳುವುದಿಲ್ಲ.

   ಇದನ್ನು ಮೀರಿದ ಚಟಗಳತ್ತ ಮನಸ್ಸು ಹರಿಯುವುದೆ ಬಹುದೊಡ್ಡ ಅಪಾಯ ಮತ್ತು ಗಂಡಾಂತರ. ಈ ಮನಸ್ಸು ಮರ್ಕಟ ಎಂಬಂತೆ ಎತ್ತಲೆತ್ತಲೋ ಹರಿಯುತ್ತದೆ. ಇದಕ್ಕೆ ತಕ್ಕಂತೆ ಮೊಬೈಲ್‍ಗಳು ಆಟವಾಡಿಸುತ್ತವೆ. ಮೊಬೈಲ್‍ಗಳ ಬಳಕೆ ವಿದ್ಯಾರ್ಥಿ ಸಮೂಹವನ್ನು ಎಷ್ಟರ ಮಟ್ಟಿಗೆ ಆಕ್ರಮಿಸಿಕೊಂಡಿವೆ ಎಂದರೆ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿಯೇ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ ಎಂದು ಹೇಳುತ್ತಿರುವುದು.

   ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದಿರುವ ಒಂದು ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವಂತಿದೆ. ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಸಮೂಹವೊಂದು ಮೊಬೈಲ್‍ನಲ್ಲಿ ಚಿಟ್‍ಚಾಟ್ ಮಾಡುತ್ತಾ ತಮ್ಮದೆ ತರಗತಿಯ ಗೆಳತಿಯರೊಂದಿಗೆ ಸ್ನೇಹ ಸಂಪಾದಿಸುತ್ತಾರೆ. ಈ ಮೊಬೈಲ್ ಸ್ನೇಹ ಕೊನೆಗೆ ಲೈಂಗಿಕ ಸಂಪರ್ಕದ ಹಂತಕ್ಕೂ ತಲುಪುತ್ತದೆ. ಇದನ್ನು ಒಬ್ಬಾತ ತನ್ನ ಇತರೆ ಸ್ನೇಹಿತರೊಂದಿಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಇದರ ವಿಡಿಯೋವನ್ನು ಸಹ ತಮ್ಮದೆ ಗುಂಪುಗಳ ವಾಟ್ಸ್‍ಪ್‍ಗಳಿಗೆ ಹರಿಯಬಿಡುತ್ತಾರೆ. ಲೈಂಗಿಕ ಕೃತ್ಯಕ್ಕೆ ಒಳಗಾದ ಹುಡುಗಿಯ ತಾಯಿಯೊಬ್ಬರು ಗಮನಿಸುತ್ತಾರೆ. ಶಾಲೆಯ ಮುಖ್ಯಸ್ಥರಿಗೆ ಆಕೆ ದೂರು ನೀಡುತ್ತಾಳೆ. ಶಾಲೆಯ ಆಡಳಿತ ಮಂಡಳಿಯು 8 ಹುಡುಗರನ್ನು ಕಾಲೇಜಿನಿಂದ ಹೊರ ಹಾಕುತ್ತಾರೆ.

     ಕಳೆದ ಐದಾರು ತಿಂಗಳ ಅವಧಿಯಲ್ಲಿ ನಮ್ಮ ಕರ್ನಾಟಕದಲ್ಲೇ ಇಂತಹ ಒಂದು ಘಟನೆ ವರದಿಯಾಗಿದೆ. ಉಡುಪಿ ಭಾಗದಲ್ಲಿ ಮೂವರು ಕಾಲೇಜು ಹುಡುಗರು ತಮ್ಮ ತರಗತಿಯ ಗೆಳತಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ. ಅದರಲ್ಲಿ ಒಬ್ಬ ಈ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡುತ್ತಾನೆ. ಇಂತಹ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಲೇ ಇವೆ. ವಿದ್ಯಾರ್ಥಿಗಳು ಇಂತಹ ಕೃತ್ಯಕ್ಕೆ ಇಳಿಯುತ್ತಿರುವ ವರದಿಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ನಾಗರಿಕ ಸಮಾಜ ಇದನ್ನು ನೋಡಿ ಬೆಚ್ಚಿಬೀಳುತ್ತಿದೆ. ಪೋಷಕರಾದವರು ಆಕ್ರೋಶಗೊಂಡು ಮೌನವಾಗುತ್ತಾರೆ. ತಮ್ಮ ಮಕ್ಕಳಿಗೆ ಈ ಪರಿಸ್ಥಿತಿ ಬಾರದಿರಲಿ ಎಂದುಕೊಳ್ಳುತ್ತಾರೆ.

     ಶಾಲಾ ಕಾಲೇಜುಗಳಿಗೆ ಹೋಗಿ ಪಾಠ ಕಲಿಯಬೇಕಾದ ವಿದ್ಯಾರ್ಥಿಗಳು ಎತ್ತ ಸಾಗುತ್ತಿದ್ದಾರೆ ಎಂಬುದನ್ನು ನೋಡಿದರೆ ಆತಂಕ ಉಂಟಾಗುತ್ತದೆ. ಇದೆಲ್ಲದಕ್ಕೂ ಮೂಲಕಾರಣ ಮೊಬೈಲ್‍ಗಳು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಶಾಲಾ ಮಕ್ಕಳಿಗೆ ಥರಾವರಿ ಮೊಬೈಲ್‍ಗಳನ್ನು ಕೊಡಿಸುವ ಪೋಷಕರು ಒಮ್ಮೆ ಯೋಚಿಸಬೇಕು ಮಕ್ಕಳಿಗೆ ಈ ಮೊಬೈಲ್‍ಗಳ ಅವಶ್ಯಕತೆ ಇದೆಯೇ ಎಂದು.

     ಮೊಬೈಲ್‍ಗಳನ್ನು ಹೊಂದುವುದು ಇಂದಿನ ದಿನಗಳಲ್ಲಿ ತೀರಾ ಸಾಮಾನ್ಯ ಸಂಗತಿ. ವಿಶೇಷವೆಂದರೆ, ಇತರೆ ವಿದ್ಯಾರ್ಥಿಗಳಿಗಿಂತ ನಮ್ಮ ಮಕ್ಕಳು ಅತ್ಯಾಧುನಿಕ ಮೊಬೈಲ್ ಸೆಟ್ ಹೊಂದಿರಲಿ ಎಂಬ ಹಂಬಲದ ಪೋಷಕರೂ ಇದ್ದಾರೆ. ತಮ್ಮ ಮಕ್ಕಳು ಕೇಳಿದೊಡನೆಯೇ ಅಂತಹ ಮೊಬೈಲ್‍ಗಳನ್ನು ಕೊಡಿಸುವ ಪೋಷಕರೇ ಹೆಚ್ಚು.

      ಇವರಿಗೆಲ್ಲ ಮೊಬೈಲ್‍ಗಳ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲವೇಕೆ? ಕೆಲವು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧವಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಷ್ಟೇ. ಆದರೂ ಆ ಸಂಸ್ಥೆಗಳ ವಿರುದ್ಧವೇ ಪೋಷಕರು ಮುಗಿ ಬೀಳುತ್ತಾರೆ. ಕೆಲವೊಮ್ಮೆ ಮೊಬೈಲ್ ಅವಶ್ಯಕತೆ ಬೇಕಾಗಬಹುದು. ಆದರೆ ಅದರ ಇತಿಮಿತಿ ಅರಿತು ಬಳಕೆ ಮಾಡುವ ಬಗ್ಗೆ ಎಚ್ಚರ ವಹಿಸಬೇಕು. ದುಬಾರಿ ಬೆಲೆಯ ಮೊಬೈಲ್ ಬದಲಿಗೆ ಕರೆ ಮಾಡುವ ಹಾಗೂ ಸ್ವೀಕರಿಸುವ ಮೊಬೈಲ್‍ಗಳನ್ನಷ್ಟೇ ಕೊಡಿಸಿದರೆ ಸಾಕಲ್ಲವೆ? ಮೊಬೈಲ್ ಸೆಟ್‍ಗಳನ್ನು ಹೊಂದಿದ ಮಾತ್ರಕ್ಕೆ ತಮ್ಮ ಅಂತಸ್ತು ಹೆಚ್ಚುತ್ತದೆಯೇ? ಇದರಿಂದ ಮುಂದೆ ಎದುರಾಗಬಹುದಾದ ಅನಾಹುತಗಳ ಬಗ್ಗೆಯೂ ಯೋಚಿಸಬೇಕಲ್ಲವೆ?

     ಮೊಬೈಲ್ ಬಳಕೆಯಿಂದಾಗಿಯೇ ಅದೆಷ್ಟೋ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂದೇಶಗಳು ರವಾನೆಯಾಗಿ ಅದರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿರುವ ಉದಾಹರಣೆಗಳಿವೆ. ಸಾವು ನೋವುಗಳು ಸಂಭವಿಸಿರುವ ಘಟನೆಗಳೂ ಸಾಕಷ್ಟಿವೆ. ಶಾಲಾ ಕಾಲೇಜುಗಳನ್ನೇ ತೊರೆದಿರುವ ಸಂಗತಿಗಳಿವೆ. ವಿದ್ಯಾರ್ಥಿ ದಿಸೆಯಲ್ಲಿ ವಿದ್ಯೆ ಕಲಿಯಬೇಕಾದ ಮನಸ್ಸುಗಳು ಮೊಬೈಲ್‍ಗಳ ಹಾವಳಿಯಿಂದಾಗಿ ತಮ್ಮ ಭವಿಷ್ಯವನ್ನೇ ನರಕ ಮಾಡಿಕೊಳ್ಳುತ್ತಿರುವ ಸಂದರ್ಭಗಳೇ ಹೆಚ್ಚುತ್ತಿವೆ. ಇವೆಲ್ಲವನ್ನು ನೋಡಿ ಕೊಂಡಾದರೂ ಮೊಬೈಲ್ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕಲ್ಲವೆ?

     2012 ನೇ ಇಸವಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆಯಡಿಯಲ್ಲಿ ಅಶ್ಲೀಲ ಸಂಭಾಷಣೆ, ಅಶ್ಲೀಲ ಚಿತ್ರಗಳ ರವಾನೆ ಎಲ್ಲವೂ ಕಾನೂನು ರೀತಿಯ ಅಪರಾಧಗಳು. ಮಕ್ಕಳ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು, ಸಂದೇಶ ರವಾನಿಸುವುದು ಇವೆಲ್ಲ ವಿವಿಧ ಕಲಂಗಳ ಅಡಿಯಲ್ಲಿ ಅಪರಾಧಿಕ ಕೃತ್ಯಗಳಾಗುತ್ತವೆ. ಈ ಕಾಯ್ದೆಯಡಿಯಲ್ಲಿ ಪ್ರಕರಣಗಳು ದಾಖಲಾದರೆ ಅತ್ಯಂತ ಗಂಭೀರ ಸ್ವರೂಪದ ಪರಿಣಾಮ ಎದುರಿಸಬೇಕಾಗುತ್ತದೆ. ಜಾಮೀನಿಗೆ ಅನರ್ಹವಾಗಿರುವ ಇಂತಹ ಕಾನೂನುಗಳ ಬಗ್ಗೆ ಎಚ್ಚರ ವಹಿಸುವುದು ಒಳಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap