ತುಮಕೂರು:
ಹಿಂದೂ ಮಹಿಳೆಯರ ಆಸ್ತಿಯ ಹಕ್ಕಿಗೆ ಸಂಬಂಧಿಸಿದಂತೆ ಇನ್ನೂ ಚರ್ಚೆಯಲ್ಲೇ ಉಳಿದಿದ್ದ ಹಲವು ಗೊಂದಲಗಳಿಗೆ ಶನಿವಾರದ ಸುಪ್ರಿಂಕೋರ್ಟ್ ತೀರ್ಪು ಸ್ಪಷ್ಟತೆಯನ್ನು ನೀಡಿದೆ. ಹಿಂದೂ ಉತ್ತರಾಧಿಕಾರ ಕಾಯಿದೆ 2005ರ ತಿದ್ದುಪಡಿಯಂತೆ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯುತ್ತಾರೆ ಎಂಬುದಕ್ಕೆ ಕೆಲವು ಗೊಂದಲಗಳು ಸೃಷ್ಟಿಯಾಗುತ್ತಾ ಹೋಗಿದ್ದವು. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವ್ಯಾಖ್ಯಾನಗಳು ನಡೆದಿದ್ದವು.
ಆಯಾ ಹೈಕೋರ್ಟ್ಗಳಲ್ಲಿ ತೀರ್ಪುಗಳು ಪ್ರಕಟವಾಗಿದ್ದವು. 2015 ರಲ್ಲಿ ಸುಪ್ರೀಂಕೋರ್ಟ್ ಈ ಸಂಬಂಧ ಒಂದು ತೀರ್ಪು ನೀಡಿ ಮಹಿಳೆಯರ ಆಸ್ತಿಗೆ ಸಂಬಂಧಿಸಿದಂತೆ ಎರಡು ಸ್ಪಷ್ಟತೆಗಳನ್ನು ನೀಡಿ ಅವುಗಳನ್ನು ಷರತ್ತು ರೀತಿಯಲ್ಲಿಯೂ ಹೇಳುತ್ತ ವಿವಾದಗಳಿಗೆ ತೆರೆ ಎಳೆದಿತ್ತು. ಆದರೂ ಸಮಾಜದಲ್ಲಿ ಗೊಂದಲಗಳಿಗೆ ಮುಕ್ತಿ ಸಿಕ್ಕಿರಲಿಲ್ಲ.
2018ರ ಫೆಬ್ರವರಿ 3 ರಂದು ಸುಪ್ರಿಂಕೋರ್ಟ್ನ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ ಭೂಷಣ್ ಅವರ ಪೀಠ ಗೊಂದಲಗಳಿಗೆ ಅವಕಾಶ ಇರದಂತೆ ಕೆಳಕಂಡಂತೆ ಕಾನೂನಿನ ಅಂಶಗಳನ್ನು ಸ್ಪಷ್ಟಪಡಿಸಿದೆ.1956ರ ಹಿಂದೂ ಉತ್ತರಾಧಿಕಾರಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಕೆಲವು ಬದಲಾವಣೆಗಳಾಗಿವೆ. ಗಂಡುಮಕ್ಕಳಷ್ಟೇ ಹಕ್ಕನ್ನು ಹೆಣ್ಣು ಮಕ್ಕಳಿಗೂ ನೀಡುವುದಕ್ಕಾಗಿಯೇ ಈ ಬದಲಾವಣೆ ತರಲಾಗಿದೆ. ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರೂ ಸಮಾನರು ಎಂಬ ಅಂಶವು 2005ಕ್ಕಿಂತ ಹಿಂದೆ ದಾಖಲಾದ ಆಸ್ತಿಯ ಪಾಲು ವಿವಾದದ ಪ್ರಕರಣಗಳಿಗೂ ಅನ್ವಯಿಸುತ್ತದೆ. ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮಾನರಲ್ಲ ಎಂಬ ಪೂರ್ವಾಗ್ರಹವನ್ನು ಹೋಗಲಾಡಿಸುವುದೇ ತಿದ್ದುಪಡಿ ಕಾನೂನಿನ ಪ್ರಮುಖ ಉದ್ದೇಶ.
ಸುಪ್ರೀಂಕೋರ್ಟ್ನಲ್ಲಿ ಈ ತೀರ್ಪಿನ ಅಂಶ ಹೊರಬರಲು ಮತ್ತು ಸ್ಪಷ್ಟತೆ ನೀಡಲು ಕಾರಣವಾದದ್ದು ಕರ್ನಾಟಕದ ಒಂದು ಪ್ರಕರಣ ಎಂಬುದು ಗಮನಾರ್ಹ. ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕಿಲ್ಲ ಎಂದು ಸವದಿ ಅವರ ಗಂಡು ಮಕ್ಕಳು ವಾದಿಸಿದ್ದರು. ಸವದಿಯ ಹೆಣ್ಣು ಮಕ್ಕಳು ಹಿಂದೂ ಉತ್ತರಾಧಿಕಾರಿ ಕಾಯ್ದೆ ಜಾರಿಗೆ ಬರುವ ಮೊದಲೇ ಹುಟ್ಟಿದವರು. ಹಾಗಾಗಿ ಅವರಿಗೆ ಆಸ್ತಿಯಲ್ಲಿ ಹಕ್ಕಿಲ್ಲ ಎಂಬುದು ವಾದವಾಗಿತ್ತು.
ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಹೆಣ್ಣು ಮಕ್ಕಳು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತಂದೆ ತೀರಿಕೊಂಡ ಮೇಲೆ ಆಸ್ತಿ ಹಂಚಿಕೆ ಸಂದರ್ಭದಲ್ಲಿ ಸಹೋದರರು ತಮ್ಮ ಸಹೋದರಿಯರಿಗೆ ಪಿತ್ರಾರ್ಜಿತ ಆಸ್ತಿ ನೀಡಲು ನಿರಾಕರಿಸಿದ್ದರು. 2002 ರಿಂದ ಈ ವಿವಾದ ಕಾನೂನು ಕಟಕಟೆಯಲ್ಲಿಯೇ ಇತ್ತು.
ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಕ್ಕು ಪಡೆಯಲು ಯಾವುದೇ ನಿರ್ಬಂಧ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಅಂದರೆ, 2005ಕ್ಕಿಂತ ಮೊದಲು ಹುಟ್ಟಿದವರಿಗೆ ಹಕ್ಕು ಅನ್ವಯವಾಗುವುದಿಲ್ಲ ಎಂಬ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ತಿದ್ದುಪತಿ 2005 ರಲ್ಲಿ ಆಗಿದ್ದರೂ ಸಹ ಹಿಂದೂ ವಾರಸುದಾರಿಕೆ ಕಾಯ್ದೆ 1956 ರಲ್ಲಿಯೇ ರಚನೆಯಾಗಿರುವ ಕಾರಣ 2005ಕ್ಕಿಂತ ಹಿಂದೆ ಹುಟ್ಟಿದವರಿಗೂ ತಿದ್ದುಪಡಿ ಕಾನೂನು ಅನ್ವಯವಾಗುತ್ತದೆ.
ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ತೀರಾ ಇತ್ತೀಚಿನವರೆಗೆ ಆಸ್ತಿಯಲ್ಲಿ ವಿಶಾಲವಾದ ರೀತಿಯಲ್ಲಿ ಹಕ್ಕು ಪ್ರಾಪ್ತಿ ಇರಲಿಲ್ಲ. ಇದಕ್ಕೆ ನಮ್ಮ ಪಿತೃಪ್ರಧಾನ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆಯೇ ಕಾರಣವಾಗಿತ್ತು. ಆದರೆ ಕಾಲ ಬದಲಾವಣೆಯಾದಂತೆ ತಿದ್ದುಪಡಿಗೆ ಒತ್ತಾಯಗಳು ಕೇಳಿಬಂದಿದ್ದವು. ಕರ್ನಾಟಕದಲ್ಲಿ 1994 ರಲ್ಲಿಯೇ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯುವ ದಾಯಾದಿತ್ವ ಹಕ್ಕನ್ನು ಹೆಣ್ಣು ಮಕ್ಕಳಿಗೆ ಕಲ್ಪಿಸಲಾಯಿತು. 2005 ರಲ್ಲಿ ಜಾರಿಗೆ ಬಂದ ಹಿಂದೂ ವಾರಸ ಅಧಿನಿಯಮಕ್ಕೆ ಕಲಂ 6ರ ಬದಲಿಗೆ 6(1)ನ್ನು ಸೇರಿಸಿ ಒಂದಷ್ಟು ಬದಲಾವಣೆಗಳನ್ನು ತರಲಾಗಿದೆ. ಇಲ್ಲಿ ಎರಡು ಅಂಶಗಳನ್ನು ಪ್ರಸ್ತಾಪಿಸಲಾಗಿದೆ.
2005 ಕ್ಕಿಂತ ಮುಂಚೆ ಪಾಲು, ವಿಲ್ನ ಪ್ರಕಾರ ಆಸ್ತಿಯ ವಿಲೇವಾರಿ ಅಥವಾ ಪರಭಾರೆಯಾಗಿದ್ದರೆ ಅಂತಹ ಪರಭಾರೆಯ ಮೇಲೆ ತಿದ್ದುಪಡಿಯ ಕಾನೂನು ಯಾವುದೇ ಪರಿಣಾಮ ಬೀರುವುದಿಲ್ಲ. ಅಥವಾ ಅನೂರ್ಜಿಗೊಳ್ಳುವುದಿಲ್ಲ. ಅಂದರೆ, ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನವಾಗಿ ಪಾಲು ನೀಡದಿದ್ದರೂ ಅದನ್ನು ಪ್ರಶ್ನಿಸಲು ಅವಕಾಶವಿಲ್ಲ. 2005ರ ನಂತರ ಆಸ್ತಿ ಹಂಚಿಕೆ ನಡೆದರೆ ಮಾತ್ರ ಅದನ್ನು ಪ್ರಶ್ನಿಸಲು ಅವಕಾಶವಿದೆ. 2005ಕ್ಕಿಂತ ಮುನ್ನ ತಂದೆ ತೀರಿಕೊಂಡಿದ್ದರೆ, ಅಂತಹ ಪ್ರಕರಣಗಳಲ್ಲಿಯೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅವಕಾಶವಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ 2015 ರಲ್ಲಿಯೇ ಸ್ಪಷ್ಟಪಡಿಸಿತ್ತು.
ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಮೂಲ ಸ್ವರೂಪದ ಪ್ರಕಾರ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಇಲ್ಲದೇ ಹೋದರೂ ಹೆಣ್ಣು ಮಕ್ಕಳು ಹಿಂದೂ ಅವಿಭಕ್ತ ಕುಟುಂಬದಲ್ಲಿ ತಮ್ಮ ಜೀವನೋಪಾಯಕ್ಕೆ ಕೇಳಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತಿದ್ದುಪಡಿ ಕಾನೂನಿನ ಪರಿಣಾಮ ಸಮಪಾಲು ಪಡೆಯುವ ಅವಕಾಶವಿದೆ.
ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡಬೇಕೆಂಬ ಪ್ರಸ್ತಾಪಗಳು ಬಂದಾಗ ಸಮಾಜದಲ್ಲಿ ವಿರೋಧ ವ್ಯಕ್ತವಾಗಿತ್ತು. ಹೆಣ್ಣು ಮಕ್ಕಳ ಮದುವೆ ಖರ್ಚನ್ನು ಗಂಡು ಮಕ್ಕಳೇ ಮಾಡಿರುತ್ತಾರೆ. ವಿವಾಹಕ್ಕಾಗಿ ಸಾಲ ಮಾಡಿಕೊಂಡಿರುತ್ತಾರೆ. ವರದಕ್ಷಿಣೆ ಇತ್ಯಾದಿಗಳಿಗಾಗಿ ಖರ್ಚು ಮಾಡಲಾಗಿರುತ್ತದೆ. ಇಷ್ಟೆಲ್ಲಾ ಆದರೂ ಮತ್ತೆ ಆಸ್ತಿಯಲ್ಲಿ ಪಾಲು ಕೇಳಿದರೆ ಮತ್ತಷ್ಟು ಸಾಲಗಾರರಾಗಿ ಕೈಬರಿದಾಗುತ್ತದೆ. ನಾವು ಮುಳುಗಿಯೇ ಹೋಗುತ್ತೇವೆ ಎಂಬ ಆತಂಕವೂ ಎದುರಾಗಿತ್ತು. ಸ್ವಲ್ಪ ಮಟ್ಟಿಗೆ ಇದು ನಿಜ ಎನ್ನಬಹುದಾದರೂ ಸಾರ್ವತ್ರಿಕವಾಗಿ ಈ ಕೂಗನ್ನು ಇಡೀ ಸಮಾಜ ಒಪ್ಪಿರಲಿಲ್ಲ.
ಸಮಾನತೆಯ ದೃಷ್ಟಿಯಿಂದ ಮಹಿಳೆಯೂ ಎಲ್ಲರಂತೆ ಜೀವಿಸಲು ಸಾಧ್ಯವಾಗಬೇಕು. ಸಂಕಷ್ಟ ಪರಿಸ್ಥಿತಿಯಲ್ಲಿ ಆಸ್ತಿಯ ಹಕ್ಕು ಆಕೆಯ ನೆರವಿಗೆ ಬರಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಆತ್ಮಹತ್ಯೆಯ ಮೊರೆ ಹೋಗಬಾರದು. ಬೀದಿಗೆ ಬಂದ ಮಹಿಳೆ ಸಾವಿನ ಮನೆಗೆ ಹೋಗಬಾರದು ಎಂಬ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಸ್ತಿಯ ಹಕ್ಕಿನ ಅವಕಾಶ ಕಲ್ಪಿಸಲಾಯಿತು. ಅಷ್ಟೇ ಅಲ್ಲ, ಸಮಾಜದಲ್ಲಿ ವ್ಯಾಪಕವಾಗಿದ್ದ ವರದಕ್ಷಿಣೆ ಪಿಡುಗಿನ ನಿರ್ಮೂಲನೆಯೂ ಇದರ ಹಿಂದೆ ಅಡಗಿತ್ತು.
ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ವರದಕ್ಷಿಣೆ ಪಿಡುಗಿನ ನಿವಾರಣೆಯಾಗುತ್ತಿದೆ ಎಂಬುದು ಸತ್ಯ. ಆದರೂ ಪರೋಕ್ಷವಾಗಿ ಹಣ ಖರ್ಚು ಮಾಡುವ ಪ್ರಮೇಯಗಳು ಮಾತ್ರ ನಿಂತಿಲ್ಲ. ಅದ್ಧೂರಿ ವಿವಾಹಗಳಿಗೆ ನಡೆಯುವ ಖರ್ಚು ವರದಕ್ಷಿಣೆಗಿಂತಲೂ ಅಧಿಕವಾಗಿರುತ್ತದೆ ಎಂಬುದು ತಿಳಿದಿದ್ದರೂ ಏನೂ ಗೊತ್ತಿಲ್ಲದಂತೆ ಇವೆಲ್ಲ ನಡೆದು ಹೋಗುತ್ತಿವೆ.
ತಿದ್ದುಪಡಿ ಕಾನೂನಿನ ಪ್ರಕಾರ ಹೆಣ್ಣು ಮಗಳು ಆಸ್ತಿಯ ಹಕ್ಕಿಗಷ್ಟೇ ವಾರಸುದಾರಳಲ್ಲ. ಕುಟುಂಬದ ಸಾಲಗಳಿಗೂ ಹೊಣೆಗಾರಳಾಗಬೇಕಾಗುತ್ತದೆ. ಆದರೆ ಅದರ ಸ್ಪಷ್ಟತೆಯನ್ನು ನಿರೂಪಿಸಬೇಕು. ವಿನಾಕಾರಣ ಸಾಲಗಳನ್ನು ತೋರಿಸಿ ಆಸ್ತಿಯಲ್ಲಿ ವಂಚಿಸಲು ಹೋಗುವವರಿಗೂ ಅವಕಾಶವಿಲ್ಲ. ಒಟ್ಟಾರೆ ಇದೊಂದು ಕ್ರಾಂತಿಕಾರಕ ತಿದ್ದುಪಡಿ ಕಾಯ್ದೆಯಾಗಿದ್ದು, ಸುಪ್ರಿಂಕೋರ್ಟ್ ಮಾತ್ರ ಕಾಯ್ದೆಯನ್ನು ವಿರೂಪಗೊಳಿಸಲು ಅವಕಾಶ ನೀಡದೆ ಹಕ್ಕು ಸಂರಕ್ಷಿಸಲು ಮಹತ್ವದ ಹೆಜ್ಜೆಯಿಟ್ಟಿದೆ.
ಮಹಿಳೆಯರು ಆರ್ಥಿಕವಾಗಿ ಸಬಲಳಾಗಬೇಕು, ವರದಕ್ಷಿಣೆಯ ಪಿಡುಗು ನಿರ್ಮೂಲನೆಯಾಗಬೇಕು, ಲಿಂಗ ಅಸಮಾನತೆ ಅಳಿದು ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕು, ದಿನೇ ದಿನೇ ಕಡಿಮೆಯಾಗುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯನ್ನು ಸಂರಕ್ಷಿಸಬೇಕು ಎಂಬೆಲ್ಲಾ ಮಹತ್ವದ ಅಂಶಗಳು ಕಾನೂನಿನ ತಿದ್ದುಪಡಿ ಹಾಗೂ ಸುಪ್ರಿಂಕೋರ್ಟ್ ವ್ಯಾಖ್ಯಾನಗಳ ಹಿಂದೆ ಅಡಗಿದೆ ಎಂಬುದನ್ನು ಮರೆಯಬಾರದು.
ವಿಶೇಷ ಲೇಖನ:- ಸಾ.ಚಿ.ರಾಜಕುಮಾರ್
ಪ್ರಜಾ ಪ್ರಗತಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








