ಮುಚ್ಚಿದ ಹಾಪ್‍ಕಾಮ್ಸ್ ಮಳಿಗೆಗಳಿಂದ ರೈತರಿಗೆ ಅನನುಕೂಲ

ತುಮಕೂರು
     ಜಿಲ್ಲಾ ಹಾಪ್‍ಕಾಮ್ಸ್ ಎಂಬುದು ರೈತರನ್ನೊಳಗೊಂಡ ಸರ್ಕಾರದ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆಯಾಗಿದ್ದು, ರೈತರು ಬೆಳೆದಿರುವ ತರಕಾರಿ ಹಾಗೂ ಹಣ್ಣುಗಳನ್ನು ನೇರವಾಗಿ ರೈತರಿಂದ ಖರೀದಿಸಿ ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭ ಮಾಡಲಾಗಿದೆ. ಆದರೆ ಇದೀಗ ಹಾಪ್ ಕಾಮ್ಸ್‍ನ ಸುಮಾರು ಮಳಿಗೆಗಳು ಮುಚ್ಚಲಾಗಿ, ರೈತರಿಗೆ ಅನನುಕೂಲವಾಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೂ ಒಂದು ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
    ಜಿಲ್ಲಾ ತೋಟಗಾರಿಕೆ ಉತ್ಪನ್ನ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ( ಜಿಲ್ಲಾ ಹಾಪ್‍ಕಾಮ್ಸ್)ವನ್ನು 1984-85ರಲ್ಲಿ ಪ್ರಾರಂಭ ಮಾಡಿದ್ದು, ಆರಂಭದಲ್ಲಿ ರೈತರಿಂದ ನೇರವಾಗಿ ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸಲಾಗುತ್ತಿತ್ತು. ಬರುಬರುತ್ತಾ ರಸ್ತೆ ಅಭಿವೃದ್ಧಿ, ಅಗಲೀಕರಣ ಮಾಡುವ ನಿಟ್ಟಿನಲ್ಲಿ ಇದ್ದ ಹಾಪ್‍ಕಾಮ್ಸ್ ಮಳಿಗೆಗಳನ್ನು ಮುಚ್ಚಲಾಯಿತು. ಅಂದಿನಿಂದ ಇಂದಿನವರಗೆ ಹೊಸದಾಗಿ ಎಲ್ಲಿಯೂ ಹಾಪ್‍ಕಾಮ್ಸ್ ಮಳಿಗೆಗಳನ್ನು ತೆರೆಯಲೆ ಇಲ್ಲ. ಕೆಲ ಮಳಿಗೆಗಳನ್ನು ಮಾತ್ರ ಜ್ಯೂಸ್ ಸೆಂಟರ್‍ಗಳಾಗಿ ಮಾರ್ಪಾಟು ಮಾಡಲಾಗಿದೆ. 
    ಹಾಪ್‍ಕಾಮ್ಸ್‍ನಲ್ಲಿ ತಾಲ್ಲೂಕಿಗೊಬ್ಬರಂತೆ ಸೇರಿ ಒಟ್ಟು 15 ಜನ ನಿರ್ದೇಶಕರುಗಳಿರುತ್ತಾರೆ. ಅದರಲ್ಲಿ ಒಬ್ಬರು ಅಧ್ಯಕ್ಷರಾಗಿರುತ್ತಾರೆ. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ನೋಂದಣಾಧಿಕಾರಿ, ಒಬ್ಬರು ನಾಮಿನಿ ನಿರ್ದೇಶಕರು ಸೇರಿರುತ್ತಾರೆ. ಈ ಸಂಘಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅಧಿಕಾರ ನೀಡಲಾಗಿರುತ್ತದೆ. ಇವರು ಹಾಪ್‍ಕಾಮ್ಸ್ ಮಳಿಗೆಗಳನ್ನು ಅಭಿವೃದ್ಧಿ ಪಡಿಸಲು  ಯೋಜಿಸಬೇಕಿದೆ. ಆದರೆ ಇವರು ಈ ಬಗ್ಗೆ ಗಮನವೆ ಹರಿಸಿಲ್ಲ ಎಂಬಂತೆ ಕಂಡು ಬರುತ್ತಿದೆ.  ಹಾಪ್‍ಕಾಮ್ಸ್ ಮಳಿಗೆಗಳು ಮುಚ್ಚಿಹೋಗಲು ಇವರ ಇಚ್ಛಾಶಕ್ತಿಯೂ ಕಾರಣವೆಂಬತೆ ಕಾಣುತ್ತಿದೆ. 
     ಹಾಪ್‍ಕಾಮ್ಸ್‍ನ ಕೆಲ ನಿರ್ದೇಶಕರು ಆರೋಪಿಸುವಂತೆ ಜಿಲ್ಲಾ ಹಾಪ್‍ಕಾಮ್ಸ್‍ನ ಎಂಡಿ ಯಾದವರು ಈ ಬಗ್ಗೆ ಗಮನ ಹರಿಸಬೇಕು. ಆದರೆ ಅದ್ಯಾವುದಕ್ಕೂ ಗಮನ ಹರಿಸುತ್ತಿಲ್ಲ ಎಂಬಿತ್ಯಾದಿ ಆರೋಪಗಳು ಕೇಳಿ ಬಂದಿವೆ. ಆರಂಭದಲ್ಲಿ ತುಮಕೂರು ನಗರದ ಅನೇಕ ಬಡಾವಣೆಗಳಲ್ಲಿ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ತೆರೆಯಲಾಯಿತಾದರೂ ಕ್ರಮೇಣ ಅವುಗಳನ್ನು ಮುಚ್ಚುತ್ತಾ ಬರಲಾಯಿತು.
 
     ಸದ್ಯದ ಸ್ಥಿತಿಯಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ ಮುಂಭಾಗ, ತೋಟಗಾರಿಕೆ ಇಲಾಖೆ ಪಕ್ಕದಲ್ಲಿ, ಎಪಿಎಂಸಿ ಆವರಣ, ಜಿಲ್ಲಾಸ್ಪತ್ರೆ ಆವರಣ, ಹನುಮಂತಪುರದಲ್ಲಿ ತಲಾ ಒಂದು ಮಳಿಗೆಗಳು ಹೊರತುಪಡಿಸಿದರೆ ಶಿರಾ, ಮಧುಗಿರಿ, ಕೊರಟಗೆರೆಯಲ್ಲಿ ತಲಾ ಎರಡು ಮಳಿಗೆಗಳು   ಮಾತ್ರ ಚಾಲ್ತಿಯಲ್ಲಿವೆ. ಅವುಗಳಲ್ಲಿ ಕೆಲವು ಕೇವಲ ಹಣ್ಣಿನ ಜ್ಯೂಸ್ ಸೆಂಟರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಸೂಕ್ತ ಸ್ಥಳಾವಕಾಶ ಇಲ್ಲದೆ ಮಳಿಗೆಗಳನ್ನು ನಡೆಸಲು ಆಗದ ಸ್ಥಿತಿಯಲ್ಲಿ ರೈತರಿಂದ ಖರೀದಿ ಮಾಡಿದರೆ ಸ್ವಂತ ಕಟ್ಟಡವಿಲ್ಲದೆ, ಸಂಸ್ಕರಣಾ ಘಟಕ ಮಾಡಲಾಗದೆ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲದಂತಾಗಿದೆ. 
ಸ್ಥಳಕ್ಕಾಗಿ ಪಾಲಿಕೆಗೆ ಮನವಿ
        2018 ರ ಡಿಸೆಂಬರ್ 29 ರಂದು ತುಮಕೂರು ಮಹಾನಗರ ಪಾಲಿಕೆ ಪೌರಾಯುಕ್ತರಿಗೆ ಮಹಾನಗರ ಪಾಲಿಕೆ ಅಧೀನದಲ್ಲಿರುವ 35 ವಾರ್ಡ್‍ಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ಇಡಲು 15*20 ಅಳತೆಯ ಸ್ಥಳವಕಾಶ ನೀಡುವಂತೆ ಕೋರಿ ಮನವಿ ಸಲ್ಲಿಸಲಾಗಿತ್ತು. ಈ ಮನವಿ ಪತ್ರದಲ್ಲಿ ತುಮಕೂರು ನಗರ ಅತಿ ವೇಗವಾಗಿ ಬೆಳೆಯುತ್ತಿರುವುದರಿಂದ ನಾಗರಿಕರಿಗೆ ಅನುಕೂಲವಾಗಲು ತುಮಕೂರು ಮಹಾನಗರ ಪಾಲಿಕೆ ಪ್ರತಿ ವಾರ್ಡ್‍ಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ತೆರೆಯಲು ಉದ್ದೇಶಿಸಿರುತ್ತದೆ. ಪಾಲಿಕೆ ವತಿಯಿಂದ ಸ್ಥಳಾವಕಾಶ ನೀಡಿದರೆ ಅದರ ನೆಲ ಬಾಡಿಗೆಯನ್ನು ಪ್ರತಿ ತಿಂಗಳು ಪಾಲಿಕೆಗೆ ಹಾಪ್‍ಕಾಮ್ಸ್ ವತಿಯಿಂದಲೆ ನೀಡುತ್ತೇವೆ ಎಂದು ಮನವಿ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ಎಲ್ಲಿಯೂ ನಿರ್ದಿಷ್ಟ ಜಾಗವನ್ನು ನೀಡಿಲ್ಲ. ಈ ಬಗ್ಗೆ ಪಾಲಿಕೆ ಆಯುಕ್ತರಿಂದ ಯಾವುದೆ ಉತ್ತರವೂ ದೊರೆತಿಲ್ಲ. 
  
ಇಲಾಖಾ ಆವರಣದಲ್ಲಿ ಜಾಗ ನೀಡಲು ಶಾಸಕರ ಪತ್ರ
     ಜಿಲ್ಲಾ ಹಾಪ್‍ಕಾಮ್ಸ್‍ಗೆ ಸಂಸ್ಕರಣಾ ಘಟಕಕ್ಕೆ ನಿರ್ದಿಷ್ಟ ಕಟ್ಟಡ ಇಲ್ಲದಿರುವುದಕ್ಕೆ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಜಿಲ್ಲಾ ಹಾಪ್‍ಕಾಮ್ಸ್‍ನಿಂದ ವಿವಿಧ ಜನೋಪಯೋಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸ್ವಂತ ಕಟ್ಟಡವಿಲ್ಲದ ಕಾರಣ ಬಿಎಚ್ ರಸ್ತೆಗೆ ಹೊಂದಿಕೊಂಡಂತೆ ಇಲಾಖಾ ಆವರಣದ ಈಶಾನ್ಯ ಭಾಗದಲ್ಲಿ 200*150 ಅಡಿ ಜಾಗವನ್ನು ನೀಡಿ ಅನುಕೂಲ ಮಾಡಿಕೊಡಿ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ 2019 ರ ಆಗಸ್ಟ್ 19 ರಂದು ಪತ್ರ ಕಳುಹಿಸಿದ್ದರು. ಈ ಪತ್ರವನ್ನು ಲಗತ್ತಿಸಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತೋಟಗಾರಿಕಾ ನಿರ್ದೇಶಕರು ಬೆಂಗಳೂರು ಇವರಿಗೆ ಜಾಗ ನೀಡುವಂತೆ 2019 ರ ಸೆಪ್ಟ್ಟೆಂಬರ್ 27 ರಂದು ಮನವಿ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಅಗತ್ಯ ಆದೇಶ ಅವಶ್ಯಕವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link