ರಾಜ್ಯಪಾಲರಾಗಲಿದ್ದಾರೆ ಜಗದೀಶ್ ಶೆಟ್ಟರ್

ಬೆಂಗಳೂರು

     ಮುಂಬರುವ ರಾಜ್ಯ ಬಜೆಟ್ ಅಧಿವೇಶನದ ನಂತರ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ರಾಜ್ಯಪಾಲರಾಗಿ ನೇಮಕ ಗೊಳ್ಳಲಿದ್ದಾರೆ.ಪಕ್ಷದ ಹೈಕಮಾಂಡ್ ವರಿಷ್ಟರು ಈ ಕುರಿತು ರಾಜ್ಯದ ನಾಯಕರಿಗೆ ಸಿಗ್ನಲ್ ನೀಡಿದ್ದು ಬಜೆಟ್ ಅಧಿವೇಶನದ ನಂತರ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ಅವರ ಸಂಪುಟದಿಂದ ಬಿಡುಗಡೆ ಮಾಡಿ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುವುದು ಎಂದಿದ್ದಾರೆ.

  ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಜಗದೀಶ್ ಶೆಟ್ಟರ್ ಅವರು ಹಾಲಿ ಸಿಎಂ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವುದು ಸ್ವತ: ಬಿಜೆಪಿ ಹೈಕಮಾಂಡ್‍ಗೇ ಮುಜುಗರವುಂಟು ಮಾಡಿದೆ.ಮುಖ್ಯಮಂತ್ರಿಯಾದವರು ಮರಳಿ ಮಂತ್ರಿಗಳಾಗುವುದು ಸರಿಯಲ್ಲ.ಒಂದೋ ಅವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ.ಇಲ್ಲವೇ ದೇಶದ ಯಾವುದಾದರೂ ರಾಜ್ಯದ ಗವರ್ನರ್ ಅನ್ನಾಗಿ ನೇಮಕ ಮಾಡಿ ಎಂದು ಪಕ್ಷದ ಹಿರಿಯ ನಾಯಕರು ನೀಡಿದ ಸಲಹೆಯನ್ನು ಹೈಕಮಾಂಡ್ ಗಂಭಿರವಾಗಿ ಪರಿಗಣಿಸಿದೆ.

   ಜಗದೀಶ್ ಶೆಟ್ಟರ್ ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರು.ಹಾಗೆಂದು ಮುಖ್ಯಮಂತ್ರಿಯಾದವರನ್ನು ಮಂತ್ರಿ ಮಾಡುವುದು ಸರಿಯಲ್ಲ.ಅದು ಶಿಷ್ಟಾಚಾರವೂ ಅಲ್ಲ ಎಂಬ ಸಲಹೆ ದಿಲ್ಲಿಯ ಹಲವು ನಾಯಕರಿಂದ ಮೋದಿ ಹಾಗೂ ಅಮಿತ್ ಷಾ ಅವರಿಗೆ ತಲುಪಿತ್ತು.
ಮುಖ್ಯಮಂತ್ರಿಗಳಾದವರು ಮಂತ್ರಿಗಳಾಗುವುದು ದೇಶದ ಇತಿಹಾಸದಲ್ಲಿ ನಡೆದಿದೆಯಾದರೂ ಕರ್ನಾಟಕದಲ್ಲಿ ಕಳೆದ ಕೆಲ ದಶಕಗಳಿಂದ ಇಂತಹ ಬೆಳವಣಿಗೆ ನಡೆದೇ ಇಲ್ಲ.ಹೀಗಾಗಿ ಯಡಿಯೂರಪ್ಪ ಅವರ ಸಚಿವ ಸಂಪುಟದ ಪ್ರಸ್ತಾಪವಾದರೆ ಸಾಕು,ಜಗದೀಶ್ ಶೆಟ್ಟರ್ ಅವರು ಮಂತ್ರಿಯಾಗಿರುವ ವಿಪರ್ಯಾಸದ ಕುರಿತು ಹಲವರು ಮಾತನಾಡುತ್ತಿದ್ದಾರೆ.

   ಈ ಹಿನ್ನೆಲೆಯಲ್ಲಿ ಸದರಿ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಯಡಿಯೂರಪ್ಪ ಅವರ ಸಚಿವ ಸಂಪುಟದಿಂದ ಜಗದೀಶ್ ಶೆಟ್ಟರ್ ಅವರನ್ನು ಬಿಡುಗಡೆ ಮಾಡಿ ದೇಶದ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಬೇಕು ಎಂಬ ಹಿರಿಯರ ಮಾತು ನರೇಂದ್ರಮೋದಿ ಹಾಗೂ ಅಮಿತ್ ಷಾ ಅವರಿಗೂ ಒಪ್ಪಿಗೆಯಾಗಿದೆ.

   ಹೀಗೆ ಜಗದೀಶ್ ಶೆಟ್ಟರ್ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದರೆ ಅವರಿಗೂ ಗೌರವ ನೀಡಿದಂತಾಗುತ್ತದೆ .ಹಾಗೆಯೇ ಯಡಿಯೂರಪ್ಪ ಅವರು ಕೂಡಾ ತಮ್ಮಿಚ್ಚೆಯಂತೆ ಮಂತ್ರಿ ಮಂಡಲ ಪುನರ್ರಚಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಅನ್ನುವುದು ಕೂಡಾ ಮೋದಿ-ಷಾ ಜೋಡಿಗೆ ಒಪ್ಪಿಗೆಯಾಗಿದೆ.

    ಅಂದ ಹಾಗೆ ಕರ್ನಾಟಕದಿಂದ ಈ ಹಿಂದೆ ಹಿರಿಯ ನಾಯಕ ಡಿ.ಹೆಚ್.ಶಂಕರಮೂರ್ತಿ ಅವರನ್ನು ನೇಮಕ ಮಾಡುವ ಚಿಂತನೆ ನಡೆದಿತ್ತಾದರೂ ಕಾರಣಾಂತರಗಳಿಂದ ಈ ನೇಮಕಾತಿ ನಡೆದಿರಲಿಲ್ಲ.ಈಗ ಜಗದೀಶ್ ಶೆಟ್ಟರ್ ಅವರ ಹೆಸರು ರಾಜ್ಯಪಾಲ ಹುದ್ದೆಗೆ ಕೇಳಿ ಬಂದಿದ್ದು ಈ ನೇಮಕಾತಿ ನಡೆದರೆ ಬಿ.ರಾಚಯ್ಯ,ರಾಮಾಜೋಯಿಸ್ ,ಎಸ್.ಎಂ. ಕೃಷ್ಣ, ಮಾರ್ಗರೇಟ್ ಆಳ್ವ ಅವರ ಸಾಲಿಗೆ ಅವರ ಹೆಸರೂ ಸೇರ್ಪಡೆಯಾದಂತಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link