ದಾವಣಗೆರೆ :
ವರ್ತಕರು ಯಾವುದೇ ಕಾರಣಕ್ಕೂ ಸರ್ಕಾರದಿಂದ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಕೃಷಿ ಉತ್ಪನ್ನ (ಧಾನ್ಯ)ಗಳನ್ನು ಖರೀದಿಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಕೃಷಿ ಉತ್ಪನ್ನಗಳ ಧಾರಣೆ ಸ್ಥಿರತೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ರೈತರು, ವರ್ತಕರು ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳ ಧಾರಣೆಗಳು ಯಾವಾಗಲು ಸ್ಥಿರವಾಗಿರಲಿ ಇದರಿಂದ ಬೆಳೆ ಬೆಳೆದ ರೈತರು ಹಾಗೂ ವರ್ತಕರಿಗೂ ಅನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ವರ್ತಕರು ಧಾನ್ಯಗಳನ್ನು ಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಯಾವುದೇ ಕೃಷಿ ಉತ್ಪನ್ನ ಕೊಳ್ಳಲು ರೈತರಿಗೆ ನೀಡಿರುವ ‘ಪ್ರೂಟ್ಸ್’ ತಂತ್ರಾಂಶದಲ್ಲಿ ನೀಡಲಾಗುವ ದಾಖಲಾತಿ ಇದ್ದರೆ ಸಾಕು. ಅದನ್ನು ಕೃಷಿ ಇಲಾಖೆ ಆ ಹಂಗಾಮಿಗೆ ದೃಢೀಕರಣ ನೀಡಿರುತ್ತದೆ. ಮತ್ತೆ ಬೇರೆ ದಾಖಲೆಗಳ ಅಗತ್ಯವಿರುವುದಿಲ್ಲ. ರೈತರು ಕೂಡ ಯೋಗ್ಯ ಉತ್ಪನ್ನಗಳನ್ನು ವರ್ತಕರಿಗೆ ನೀಡಬೇಕು ಎಂದರು.
ವರ್ತಕರ ಸಂಘದ ಪ್ರತಿನಿದಿ ಮಾತನಾಡಿ, ಸುಗ್ಗಿ ಕಾಲದಲ್ಲಿ ಧಾನ್ಯಗಳಲ್ಲಿ 25 ರಿಂದ 26 ರಷ್ಟು ತೇವಾಂಶವಿರುತ್ತದೆ. ಹಾಗಾಗಿ ಅಂತಹ ದಿನಗಳಲ್ಲಿ ಮಾರುಕಟ್ಟೆ ಬೆಲೆಗೆ ಕೊಂಡರೆ ಅದು ಒಣಗುವಷ್ಟರಲ್ಲಿ ಮಾಲೀಕರಿಗೆ ಹಾನಿಯಾಗುತ್ತದೆ. ಹಾಗಾಗಿ ಕೊನೆ ಪಕ್ಷ 15 ರಿಂದ 16 ರಷ್ಟು ತೇವಾಂಶ ಇದ್ದರೆ ಪರವಾಗಿಲ್ಲ ಎಂದರು. ಅದಕ್ಕೆ ಜಿಲ್ಲಾಧಿಕಾರಿಗಳು ಹೌದು ರೈತರು ಕೂಡ ತಮ್ಮ ಉತ್ಪನನಗಳನ್ನು ಚೆನ್ನಾಗಿ ಒಣಗಿಸಿ ನೀಡಬೇಕು. ರಾಗಿ ಕನಿಷ್ಠ 12 ರಷ್ಟು ತೇವಾಂಶಕ್ಕಿಂತ ಹೆಚ್ಚಿರಬಾರದು ಎಂದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಈಗಾಗಲೇ ಎಲ್ಲರೂ ಕೃಷಿ ಉತ್ಪನ್ನಗಳನ್ನು ಒಣಗಿಸಲು ಡ್ರೈಯರ್‍ಗಳನ್ನು ಅಳವಡಿಸಿಕೊಂಡಿದ್ದಾರೆ. ಅವುಗಳ ಮೂಲಕ ಧಾನ್ಯಗಳನ್ನು ಒಣಗಿಸುತ್ತಾರೆ. ಹಾಗಾಗಿ ಅಷ್ಟೊಂದು ತೇವಾಂಶವಿರುವುದಿಲ್ಲ. ಕೃಷಿ ಬೆಲೆ ಆಯೋಗವು ಭತ್ತ ಬೆಳೆದ ರೈತರಿಗೆ ಕ್ವಿಂಟಾಲ್ 1 ಕ್ಕೆ 2250/- ರೂ ಖರ್ಚು ಬರಲಿದೆ ಎಂದು ತಿಳಿಸಿದೆ. ಆದರೆ ಮಾರುಕಟ್ಟೆಯಲ್ಲಿ ಆ ಸಮಯದಲ್ಲಿ 1800 ರಿಂದ 1900 ರೂ ಗಳಷ್ಟು ಬೆಲೆ ಇರುತ್ತದೆ. ಹಾಗಿದ್ದಾಗ ಈ ಬೆಲೆಗಿಂತ ಕಡಿಮೆ ಬೆಲೆಗೆ ಮಾರಿದರೆ ರೈತರಿಗೆ ನಷ್ಟವಾಗುತ್ತದೆ ಎಂದರು.
ಮತ್ತೋರ್ವ ರೈತ ಮುಖಂಡರು ಮಾತನಾಡಿ, ರೈತರ ಹೊಲಗಳಿಗೆ ಬಂದು ಬೆಳೆ ಖರೀದಿಸುವುದಕ್ಕಿಂತ ಎಪಿಎಂಸಿ ಆವರಣದಲ್ಲಿ ಟೆಂಡರ್ ಮುಖಾಂತರ ಖರೀದಿಸುವುದು ಒಳ್ಳೆಯದು ಹಾಗೂ ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ ಎಂದರು.ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಕೇವಲ ಸ್ಯಾಂಪಲ್ ಅಷ್ಟೇ ಎಪಿಎಂಸಿ ಗಳಿಗೆ ತರುವ ಬದಲು ಸಂಪೂರ್ಣ ಬೆಳೆದ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಗೆ ತಂದರೆ ಹರಾಜು ಪ್ರಕ್ರಿಯೆ ಮಾಡಬಹುದು ಎಂದು ತಿಳಿಸಿದರು. ಹಾಗೂ ಸರ್ಕಾರ ಬೆಳೆಗಳಿಗೆ ಏನು ಬೆಲೆ ನಿಗದಿ ಮಾಡಿದೆಯೋ ಅದಕ್ಕಿಂತ 1 ರೂ ಆದರೂ ಹೆಚ್ಚಿಗೆ ಸಿಗಬೇಕು ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಎಪಿಎಂಸಿ ಸಹಾಯಕ ನಿರ್ದೇಶಕ ಸೋಮಶೇಖರ್, ಕಾರ್ಯದರ್ಶಿ ಪ್ರಭು, ರೈತ ಮುಖಂಡರುಗಳಾದ ಕೆಂಗೋ ಹನುಮಂತಪ್ಪ, ಬಸವರಾಜಪ್ಪ, ಪಾಮೇನಹಳ್ಳಿ ಲಿಂಗರಾಜು, ದಿಳ್ಯಪ್ಪ ಮುಂತಾದವರಿದ್ದರು.