ಹುಳಿಯಾರು:
ಕನ್ನಡ ಸಾಹಿತ್ಯದ ಅತ್ಯಂತ ಮೇರು ವ್ಯಕ್ತಿ ಕುವೆಂಪು ಅವರ ಸಾಹಿತ್ಯಕ್ಕೆ ಸಮಾಜವನ್ನು ಬದಲಾಯಿಸುವ ಸಾಮಥ್ರ್ಯ ಇದೆ ಎಂದು ಸಮಾಜಶಾಸ್ತ್ರ ಉಪನ್ಯಾಸಕ ಟಿ.ಎಂ.ಶಿವಣ್ಣ ಅಭಿಪ್ರಾಯಪಟ್ಟರು.
ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಮಾನವ ಸಂದೇಶ ಸಾರಿದ ಯುಗದ ಕವಿ, ಜಗದ ಕವಿ, ರಸಋಷಿ, ರಾಷ್ಟ್ರ ಕವಿ ಕುವೆಂಪು ಅವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದಲ್ಲಿ ಬೇರೂರಿದ್ದ ಮೌಢ್ಯ, ಕಂದಾಚಾರ, ಅನಿಷ್ಟ ಪದ್ಧತಿಗಳನ್ನು ತೀವ್ರವಾಗಿ ಟೀಕಿಸುತ್ತಿದ್ದ ಕುವೆಂಪು ಜನರಿಗೆ ಮನದಟ್ಟು ಮಾಡುವ ಸಲುವಾಗಿ ವಿಪುಲವಾದ ವೈಚಾರಿಕ ಸಾಹಿತ್ಯವನ್ನು
ರಚನೆ ಮಾಡಿದ್ದು ಅವರ ಬರಹಗಳನ್ನು ಯುವ ಜನತೆ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ಪ್ರಾಚಾರ್ಯರಾದ ಬಿ.ಡಿ.ಸುಜಾತಾ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜ್ಞಾನ ವಿಕಾಸಕ್ಕಾಗಿ ಪಠ್ಯದ ಜೊತೆ ಕಥೆ, ಕವನ, ಕಾದಂಬರಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕಿದೆ. ಮೊಬೈಲ್, ಟಿ.ವಿ ವ್ಯಾಮೋಹದಿಂದ ಹೊರಬಂದು ಕುವೆಂಪು ಅವರಂತಹ ವೈಚಾರಿಕ ಬರಹಗಾರರ ಸಾಹಿತ್ಯವನ್ನು ಓದಬೇಕು ಎಂದು ಸಲಹೆ ನೀಡಿದರು.ಉಪನ್ಯಾಸಕರುಗಳಾದ ಎಚ್.ಎಸ್.ನಾರಾಯಣ್, ಚಿದಾನಂದಪ್ಪ, ವನಿತ, ಸೂರ್ಯನಾರಾಯಣ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
