ತುಮಕೂರು
ಪುಡ್ಪಾರ್ಕ್ ಮತ್ತು ಹೆಚ್.ಎ.ಎಲ್ ಹೆಸರಿನಲ್ಲಿ ಜಿಲ್ಲೆಯ ಯುವಜನರಲ್ಲಿ ಉದ್ಯೋಗದ ಆಶಾಭಾವನೆ ಮೂಡಿಸಿದ್ದ ಪ್ರಧಾನಿ ಮೋದಿ ಜನವರಿ 02 ರಂದು ತುಮಕೂರು ನಗರಕ್ಕೆ ಆಗಮಿಸುತ್ತಿದ್ದು, ಫುಡ್ಪಾರ್ಕ್ ಮತ್ತುಎಚ್ಎಎಲ್ನಿಂದ ಯುವಜನರಿಗೆ ಎಷ್ಟರ ಮಟ್ಟಿಗೆ ಪ್ರಯೋಜನ ಆಗುತ್ತಿದೆ. ಎಷ್ಟು ಉದ್ಯೋಗಗಳು ಸೃಷ್ಠಿ ಆಗಿವೆ ಎಂಬುದನ್ನು ಪ್ರಧಾನಿಯವರು ರಾಜ್ಯದ ಜನತೆಗೆ ಉತ್ತರ ನೀಡಲಿ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಒತ್ತಾಯಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2014ರಲ್ಲಿ ಅಂದಿನ ಸಂಸದರು ಹಾಗೂ ಜನಪ್ರತಿನಿಧಿಗಳು ಪುಡ್ಪಾರ್ಕು ಭಾರತ ಸರಕಾರದ ಒಂದು ಅಂಗ ಸಂಸ್ಥೆ ಎಂಬಂತೆ ಬಿಂಬಿಸಿ ಜನತೆಗೆ ಮೋಸ ಮಾಡಿದರು. ಫುಡ್ಪಾರ್ಕ್ನಿಂದ ರಾಜ್ಯದ 12 ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಈ ಜಿಲ್ಲೆಯ ಯುವಪೀಳಿಗೆಗೆ ಉದ್ಯೋಗ ದೊರೆಯಲಿದೆ ಎಂದು ಭಾಷಣ ಮಾಡಿದ್ದರು.
ಆದರೆ ಪುಡ್ಪಾರ್ಕಿನಿಂದ ಸ್ಥಳೀಯ ರೈತರಿಗೆ ಯಾವುದೇ ಉಪಯೋಗವಾಗಿಲ್ಲ. ಕೆಲವೇ ಕೆಲವು ನಿರುದ್ಯೋಗಿಗಳಿಗೆ ತರಕಾರಿ ಹಚ್ಚುವುದು, ಪ್ಯಾಕಿಂಗ್ ಮಾಡುವಂತಹ ಉದ್ಯೋಗ ಸಿಕ್ಕಿರುವುದನ್ನು ಬಿಟ್ಟರೆ, ನಿರುದ್ಯೋಗಿಗಳ ಪಾಲಿಗೆ ಪುಡ್ಪಾರ್ಕ್ ದೂರದ ಬೆಟ್ಟವಾಗಿದೆ ಎಂದು ದೂರಿದರು.
ಪುಡ್ಪಾರ್ಕ್ ನಿರ್ಮಾಣಕ್ಕಾಗಿ ಸರಕಾರ 110 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಿದಲ್ಲದೆ, 50 ಕೋಟಿ ರೂಗಳ ಸಬ್ಸಿಡಿಯನ್ನು ಸಹ ನೀಡಿತ್ತು. ಆದರೆ ಇಂದು ಇಡೀ ಯೋಜನೆ ಹಳ್ಳ ಹಿಡಿದಿದ್ದು, ಕೆಲವು ಕಂಪನಿಗಳಿಗೆ ಉಪಗುತ್ತಿಗೆ (ಸಬ್ ಕಾಂಟ್ರಾಕ್ಟ್) ನೀಡುವ ಮೂಲಕ ಪ್ಯಾಕಿಂಗ್ ಯೂನಿಟ್ ಆಗಿ ಬಳಕೆ ಮಾಡಲಾಗುತ್ತಿದೆ. ಇದರ ಅರಿವಿಲ್ಲದ ಪ್ರಧಾನಿಗಳ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಪುಡ್ಪಾರ್ಕ್ ಬಗ್ಗೆ ಇನ್ನಿಲ್ಲದ ಸಾಧನೆಯನ್ನು ಹೇಳಿಕೊಂಡು ಜನತೆಗೆ ಮೋಸ ಮಾಡುತ್ತಿದ್ದಾರೆ. ಅತ್ಯಾಧುನಿಕ ಯಂತ್ರೋಪಕರಣಗಳು ಸಹ ಉಪಯೋಗವಿಲ್ಲದೆ ಮೂಲೆ ಸೇರಿವೆ. ಇವುಗಳ ಬಗ್ಗೆ ಪ್ರಧಾನಿಗಳು ಜನತೆಯ ಮುಂದೆ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ ಮಾತನಾಡಿ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಹಳ್ಳ ಕಾವಲ್ನಲ್ಲಿ ಸುಮಾರು 600 ಎಕರೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಎಚ್.ಎ.ಎಲ್ ಬಹು ಉಪಯೋಗಿ ಲಘು ಹೆಲಿಕ್ಯಾಕ್ಟರ್ ನಿರ್ಮಾಣ ಕೇಂದ್ರದಿಂದ 2018ರ ಅಂತ್ಯಕ್ಕೆ ಹೆಲಿಕ್ಯಾಪ್ಟರ್ ಆರಂಭವಾಗಲಿದೆ ಎಂಬ ಭರವಸೆಯನ್ನು ಮೋದಿ ನೀಡಿದ್ದರು. ಆದರೆ ಇದುವರೆಗೂ ಘಟಕದಲ್ಲಿ ಒಂದು ಹೆಲಿಕ್ಯಾಪ್ಟರ್ ರೆಕ್ಕೆಯನ್ನು ಸಹ ತಯಾರಿಸಿಲ್ಲ. ಸೇನೆಗೆ ಅಗತ್ಯ ಹೆಲಿಕ್ಯಾಪ್ಟರ್ ಒದಗಿಸಬೇಕಿದ್ದ ಎಚ್.ಎ,ಎಲ್ ಗೆ ಬದಲಾಗಿ ರಿಲಾಯೆನ್ಸ್ ಕಂಪನಿಗೆ ಗುತ್ತಿಗೆ ನೀಡುವ ಮೂಲಕ ಭಾರತದ ನವರತ್ನ ಕಂಪನಿಯೊಂದು ತನ್ನ ಅಸ್ಥಿತ್ವ ಕಳೆದುಕೊಳ್ಳುವಂತಹ ಸ್ಥಿತಿಯನ್ನು ಸ್ವತಃ ಪ್ರಧಾನಿಯವರೇ ಮಾಡಿದ್ದು, ಇದರ ಬಗ್ಗೆ ಸಹ ಜಿಲ್ಲೆಯ ಜನರ ಪ್ರಶ್ನೆಗಳಿಗೆ ಮೋದಿ ಉತ್ತರಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡು ಉದ್ದಿಮೆದಾರರ ಪರ ನಿಲುವಿನಿಂದ ಕರ್ನಾಟಕದಲ್ಲಿಯೇ 1.90ಲಕ್ಷ ಜನರು ತಾವು ಮಾಡುತಿದ್ದ ಉದ್ಯೋಗದಿಂದ ವಂಚಿತರಾಗಿದ್ದಾರೆ. ಹತ್ತಾರು ಕಂಪನಿಗಳು ಮುಚ್ಚಿವೆ. ರೈತರ ಆತ್ಮಹತ್ಯೆಗಳು ಹೆಚ್ಚಿವೆ. ಆದರೆ ಉದ್ದಿಮೆದಾರರ 1.30 ಲಕ್ಷ ಕೋಟಿ ರೂಗಳ ತೆರಿಗೆಯನ್ನು ಮನ್ನಾ ಮಾಡುವ ಮೂಲಕ ಕಾರ್ಪೋರೇಟ್ ಪರ ನಿಲುವು ಹೊಂದಿರುವ ಮೋದುಯವರು ರೈತರ ಸಾಲ ಮನ್ನಾ ಮಾಡಬೇಕಾದರೆ ಹಲವು ಷರತ್ತುಗಳನ್ನು ಹೇಳುತ್ತಾರೆ. ಮೋದಿಯವರ ಈ ನಿಲುವು ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕಾಂತರಾಜು, ಸಿಪಿಐ ರಾಜ್ಯ ಮಂಡಳಿ ಸದಸ್ಯ ಕಂಬೇಗೌಡ, ರಾಂಗಮುದ್ದಯ್ಯ, ಸತ್ಯನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.