ಗುಬ್ಬಿ
ಬಗರ್ಹುಕುಂ ಜಮೀನು ಮಂಜೂರಾತಿಗೂ ಮುನ್ನಾ ಜಮೀನಿನ ಒಡೆತನಕ್ಕೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಗುಡಿಸಲು ನಿರ್ಮಿಸಿಕೊಂಡು ವಾಸ್ತವ್ಯ ಹೂಡಲು ಮುಂದಾದ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಇಡೀ ರಾತ್ರಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಕಾರೇಹಳ್ಳಿ ಎಸ್ಕೇಪ್ ಬಳಿ ನಡೆದಿದೆ.
ಬಿದರೆಹಳ್ಳಿ ಕಾವಲ್ ಗ್ರಾಮಕ್ಕೆ ಸೇರಿದ ಸರ್ವೆ ನಂ.59ರಲ್ಲಿರುವ 3.17 ಎಕರೆ ಪ್ರದೇಶ ಸರಕಾರಿ ಫಡ ಎಂದು ಇಂದಿಗೂ ದಾಖಲೆ ಇದೆ. ಆದರೆ ಈ ಸ್ಥಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಬೀಳು ಜಾಗವಾಗಿದೆ. ಇಲ್ಲಿ ನಿವೇಶನ ವಿಂಗಡಿಸಿ ನಿರ್ಗತಿಕರಿಗೆ ನೀಡಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ 131 ಮಂದಿ ಈ ಸ್ಥಳದಲ್ಲೇ ನಿವೇಶನ ನೀಡುವುದು ಸೂಕ್ತ ಎಂದು ದೇವರಾಜು ಮತ್ತು ಲಕ್ಷ್ಮೀಪತಿ ನೇತೃತ್ವದ ಒಂದು ಗುಂಪು ಅರ್ಜಿ ಮೂಲಕ ಕೋರಿಕೊಂಡಿದೆ.
ನಾರಾಯಣಪ್ಪ ನೇತೃತ್ವದ ಮತ್ತೊಂದು ಗುಂಪು ಈಗಾಗಲೇ 1998 ರಿಂದ ಈವರೆಗೆ ನಾಲ್ಕು ಬಾರಿ ನಮೂನೆ 57ರ ಅರ್ಜಿ ಸಲ್ಲಿಸಿದ್ದೇವೆ, ಅನುಭವದಲ್ಲಿದ್ದೇವೆ. ಈ ಜಮೀನು ನಮಗೆ ಸೇರಿದ್ದು ಎಂದು ಮಾತಿನ ಚಕಮಕಿ ಹಲವು ದಿನಗಳಿಂದ ನಡೆದಿತ್ತು.
ಬಿದರೆಹಳ್ಳ ಕಾವಲ್ನಲ್ಲಿನ ಸರ್ಕಾರಿ ಸ್ಥಳಗಳು ಎಚ್ಎಎಲ್ ಘಟಕಕ್ಕೆ ನೀಡಲಾಗಿದೆ. ಉಳಿದ ಸುಮಾರು 12 ಎಕರೆ ಪ್ರದೇಶದಲ್ಲಿ 3.17 ಎಕರೆ ಪ್ರದೇಶ ನಿರ್ಗತಿಕರ ನಿವೇಶನಕ್ಕೆ ಸೂಕ್ತವಾಗಿದೆ. ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ ಈ ಸ್ಥಳದಲ್ಲಿ ಒಂದೇ ಕುಟುಂಬದ ಸದಸ್ಯರು ಗುಡಿಸಲು ನಿರ್ಮಿಸಿಕೊಂಡು ಈ ಸ್ಥಳ ನಮ್ಮದು ಎನ್ನುತ್ತಿದೆ. ಹೆದ್ದಾರಿ ಬದಿಯ ಈ ಸ್ಥಳ ತುಂಬಾ ಬೆಲೆ ಬಾಳುವ ಹಿನ್ನೆಲೆಯಲ್ಲಿ ಕೂಲಿ ಜನರಿಗೆ ದಕ್ಕದಂತೆ ಮಾಡಲು ಒಂದೇ ಕುಟುಂಬದ ಸಹೋದರರು ಮುಂದಾಗಿದ್ದಾರೆ ಎಂದು ಆರೋಪಿಸಿ ರಾತ್ರಿ ಇದೇ ಸ್ಥಳದಲ್ಲಿ 7 ಗುಡಿಸಲು ನಿರ್ಮಿಸಿಕೊಂಡು ಅಂಬೇಡ್ಕರ್ ಭಾವಚಿತ್ರದೊಂದಿಗೆ ಧರಣಿ ನಡೆಸಿದರು. ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ಶಾಂತಗೊಳಿಸಲಾಯಿತು.
ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಂ.ಮಮತಾ ಪರಿಶೀಲನೆ ನಡೆಸಿ ಸರ್ಕಾರಿ ಸ್ಥಳ ಯಾರಿಗೂ ಮಂಜೂರು ಮಾಡಿಲ್ಲ. ಆದರೆ ಈ ಸ್ಥಳಕ್ಕೆ ಘರ್ಷಣೆ ಮಾಡಿಕೊಳ್ಳುವುದು ಸೂಕ್ತವಲ್ಲ. ಇಲ್ಲಿ ರಾಗಿ ಬೆಳೆದುಕೊಂಡು ಬಣವೆ ಹಾಕಿಕೊಂಡಿದ್ದ ಒಂದು ಗುಂಪು ರಾಗಿ ಬಣವೆ ಸ್ಥಳದಿಂದ ತೆಗೆಯಲು ಆದೇಶಿಸಿ ದಿಢೀರ್ ನಿರ್ಮಾಣವಾಗಿದ್ದ ಎರಡೂ ಗುಂಪುಗಳಿಗೆ ಸೇರಿದ ಎಂಟು ಗುಡಿಸಲುಗಳನ್ನು ತೆರವುಗೊಳಿಸಿ ಬಗರ್ಹುಕುಂ ಸಮಿತಿ ಮುಂದೆ ನಿರ್ಧಾರವಾಗುವವರೆಗೆ ಈ ಸ್ಥಳದ ಬಗ್ಗೆ ಯಾರು ಚರ್ಚೆ ಮಾಡದಂತೆ ತಾಕೀತು ಮಾಡಿ ಎಲ್ಲಾ ದಾಖಲೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಎರಡೂ ಗುಂಪುಗಳನ್ನು ಪೊಲೀಸರು ಚದುರಿಸಿದರು. ರಾಗಿ ಬಣವೆ ಆ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲಾಯಿತು.
ಇದೇ ಸಂದರ್ಭದಲ್ಲಿ ಸಾಗರನಹಳ್ಳಿ ಗ್ರಾಮದ ಬಳಿ ತಂತಿ ಬೇಲಿ ಹಾಕಿಕೊಳ್ಳುವ ವಿಚಾರದಲ್ಲಿ ಬಲಾಢ್ಯರು ಮುಗ್ದ ರೈತನ ಜಮೀನು ಕಬಳಿಸುತ್ತಿದ್ದಾರೆ ಎಂದು ತ್ಯಾಗಟೂರು ಗ್ರಾಮಸ್ಥರ ದೂರು ಆಧಾರಿಸಿ ಸ್ಥಳ ಪರಿಶೀಲನೆ ನಡೆಸಿದ ತಹಸೀಲ್ದಾರ್ ಮಮತಾ ಅವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು. ಬಗರ್ಹುಕುಂ ಮೂಲಕ ಪಾರ್ವತಮ್ಮ ಎಂಬ ರೈತ ಮಹಿಳೆಗೆ ಮಂಜೂರಾದ ಸರ್ವೆ ನಂ 57 ಮತ್ತು 58 ರಲ್ಲಿ 1.37 ಎಕರೆ ಪ್ರದೇಶ ಮಂಜೂರಾಗಿದೆ. ಆದರೆ ಈ ಜಮೀನಿನಲ್ಲಿ ಚಂದ್ರಶೇಖರ್ ಎಂಬ ರೈತ ಕುಟುಂಬ ಅನುಭವದಲ್ಲಿದೆ ಎಂದು ಗೊಂದಲ ಏರ್ಪಟ್ಟಿತ್ತು. ತಂತಿ ಬೇಲಿ ಹಾಕುವ ವಿಚಾರದಲ್ಲೂ ಮಾತಿನ ಚಕಮಕಿ ನಡೆದು ದೂರು ನೀಡಲಾಗಿತ್ತು. ಇಲ್ಲೂ ಬಗರ್ಹುಕುಂ ಜಮೀನಿನ ವಿವಾದ ತಾರಕ್ಕೇರಿ ತಾಲ್ಲೂಕು ಅಡಳಿತ ಮತ್ತು ಪೊಲೀಸರು ಮಧ್ಯೆ ಪ್ರವೇಶಿಸುವಂತಾಗಿತ್ತು.
ಮುಂದಿನ ಐದು ದಿನಗಳ ಬಳಿಕ ಈ ಜಮೀನಿನ ಎಲ್ಲಾ ದಾಖಲಾತಿ ಪರಿಶೀಲಿಸಿ ಸೂಕ್ತ ಸೂಚನೆ ನೀಡಲಾಗುವುದು. ಅಲ್ಲಿಯವರೆಗೆ ಇಬ್ಬರೂ ರೈತರು ಚರ್ಚೆ ಮಾಡದಂತೆ ತಿಳಿಸಿ, ತಾತ್ಕಾಲಿಕ ಶೆಡ್ ನಿರ್ಮಾಣ ಹಾಗೂ ತಂತಿಬೇಲಿ ನಿರ್ಮಾಣ ಮಾಡದಂತೆ ಎರಡೂ ಗುಂಪುಗಳಿಗೆ ತಿಳಿಸಿದರು. ಘರ್ಷಣೆಗೆ ಮೂಲವಾಗದಂತೆ ಪೊಲೀಸರು ಎರಡೂ ಗುಂಪುಗಳನ್ನು ಚದರಿಸಿ ಪರಿಸ್ಥಿತಿ ತಿಳಿಗೊಳಿಸಿದರು.