ಬೆಂಗಳೂರು
ವಿದೇಶಗಳಿಂದ ಅಂಚೆ ಮೂಲಕ ಆಮದು ಮಾಡಿಕೊಂಡ ಮಾದಕ ವಸ್ತುಗಳ ಪೋಸ್ಟ್ ಹಾಗೂ ಪಾರ್ಸಲ್‌ಗಳನ್ನು ಕಳವು ಮಾಡಿ ಡ್ರಗ್ಸ್, ಪೆಡ್ಲರ್ ಗಳೊಂದಿಗೆ ಶಾಮೀಲಾಗಿ ಮಾರಾಟ ಮಾಡುತ್ತಿದ್ದ ನಾಲ್ವರು ಭಾರತೀಯ ಅಂಚೆ ಇಲಾಖೆಯ ನೌಕರರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸ್ಟಿಟೆಂಟ್ ಆಗಿದ್ದ ದೇವರ ಚಿಕ್ಕನಹಳ್ಳಿಯ ರಮೇಶ್ ಕುಮಾರ್ (47) ಹಾಗೂ ಎಂಟಿಎಸ್ ಸಿಬ್ಬಂದಿಗಳಾಗಿದ್ದ ಶ್ರೀರಾಮ ಪುರದ ಎಚ್. ಸುಬ್ಬ (34) ಆರ್ ಟಿನಗರದ ಸೈಯದ್ ಮಾಜೀದ್ ಅಹಮ್ಮದ್ (54) ನಾಗವಾರದ ವಿಜಯ ರಾಜನ್ (58) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತರಿಂದ 20 ಲಕ್ಷ ಮೌಲ್ಯದ 339 ಎಕ್ಸಟೇನ್ಸಿ (ಎಂಡಿಎಂಎ) ಮಾತ್ರೆಗಳು 10 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೇಲ್, 30 ಗ್ರಾಂ ಬ್ರೌನ್ ಶುಗರ್ ಹಾಗೂ ವಿದೇಶಗಳಿಂದ ಬಂದಿದ್ದ ಪೋಸ್ಟ್ ಕವರ್ ಗಳನ್ನು ವಶಪಡಿಸಿಕೊಂಡು ಮೊಬೈಲ್‌ನಲ್ಲಿದ್ದ ಸಂಪರ್ಕವನ್ನು ಪರಿಶೀಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ವಿದೇಶಿ ಅಂಚೆಯಲ್ಲಿ ಕೆಲಸ
ರಾಜಭವನ ರಸ್ತೆಯಲ್ಲಿನ ಜಿಪಿಒ ಕಚೇರಿಯಿಂದ ಒಂದು ತಿಂಗಳಯಿಂದಷ್ಟೇ ಚಾಮರಾಜಪೇಟೆಗೆ ವರ್ಗಾವಣೆ ಗೊಂಡಿದ್ದ ವಿದೇಶಿ ಅಂಚೆ ವಿಭಾಗ(ಫಾರಿನರ್ಸ್ ಪೋಸ್ಟ್) ವಿಭಾಗದ ನೌಕರರಾಗಿದ್ದ ಬಂಧಿತ ಆರೋಪಿಗಳು ಡ್ರಗ್ಸ್ ಪೆಡ್ಲರ್ ಗಳೊಂದಿಗೆ ಶಾಮೀಲಾಗಿ ನಕಲಿ ವಿಳಾಸಗಳನ್ನು ನಮೂದಿಸಿಕೊಂಡು ಮಾದಕ ವಸ್ತುಗಳಿಂದ ವಿದೇಶಗಳಿಂದ ಆಮದು ಮಾಡಿಕೊಂಡಿದ್ದ ಕವರ್ ಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡದೆ ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸಿರುವುದನ್ನು ಬಾಯ್ಬಿಟ್ಟಿದ್ದಾರೆ.
ಇತ್ತೀಚೆಗಷ್ಟೇ ನೆದರ್ ಲ್ಯಾಂಡ್ ನಿಂದ ಮಾದಕ ವಸ್ತುಗಳನ್ನು ಬಿಟ್ ಕಾಯಿನ್ ಮೂಲಕ ಆಮದು ಮಾಡಿಕೊಳ್ಳುತ್ತಿದ್ದ ಆರೋಪಿಗಳನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಅಂಚೆ ಇಲಾಖೆಯ ನೌಕರರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದರು.
ಪ್ರಾಧಿಕಾರಕ್ಕೆ ವಂಚನೆ
ಬಿಟ್ ಕಾಯಿನ್ ಮೂಲಕ ನೆದರ್ ಲ್ಯಾಂಡ್ ಡೆನ್ಮಾರ್ಕ್ ಅಮೇರಿಕಾ ಸೇರಿದಂತೆ ವಿದೇಶಗಳಿಂದ ದುಷ್ಕರ್ಮಿಗಳು ತರಿಸಿಕೊಳ್ಳುತ್ತಿದ್ದ ಮಾದಕ ವಸ್ತುಗಳ ಪೋಸ್ಟ್ ಗಳನ್ನು ಹಾಗೂ ಪಾರ್ಸಲ್ ಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿಗಳು ಅವುಗಳಲ್ಲಿ ಮಾದಕ ವಸ್ತುಗಳು ಇರುವುದನ್ನು ಖಚಿತಪಡಿಸಿಕೊಂಡು ವಿಳಾಸಕ್ಕೆ ತಲುಪಿಸದೇ ಅಲ್ಲದೇ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡದೆ ಡ್ರಗ್ಸ್ ಪೆಡ್ಲರ್ ಗಳಿಗೆ ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಹಂಚಿಕೊಳ್ಳುತ್ತಿದ್ದರು ಎಂದು ಹೇಳಿದರು.
ಆರೋಪಿಗಳಿಗೆ ಪೋಸ್ಟಲ್ ಅಸ್ಟಿಟೆಂಟ್ ರಮೇಶ್ ಕುಮಾರ್ ನಾಯಕನಾಗಿದ್ದು ಆತನ ಅಣತಿಯಂತೆ ಮೂವರು ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಯಾರಿಗೆ ಮಾರಾಟ ಮಾಡುತ್ತಿದ್ದರೂ ಯಾವ ವಿಳಾಸಕ್ಕೆ ಮಾದಕ ವಸ್ತುಗಳು ಬರುತ್ತಿದ್ದವು ಎನ್ನುವುದರ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಪಾರ್ಸಲ್ ನೋಡಿ ಕೃತ್ಯ
ಆರೋಪಿಗಳಲ್ಲಿ ಮೂವರು ರಮೇಶ್ ಕುಮಾರ್ ಹೇಳಿದಂತೆ ನಾವು ಅವುಗಳನ್ನು ಮಾರಾಟ ಮಾಡುತ್ತಿದ್ದು ಹೆಚ್ಚಿನ ಮಾಹಿತಿ ನಮಗೆ ಗೊತ್ತಿಲ್ಲ, ಹಣದ ಆಸೆಗೆ ಈ ಕೃತ್ಯ ನಡೆಸುವುದಾಗಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ವಿದೇಶಗಳಿಂದ ಬರುವ ಪೋಸ್ಟ್ ಹಾಗೂ ಪಾರ್ಸಲ್‌ಗಳಲ್ಲಿ ಮಾದಕ ವಸ್ತುಗಳಿರುವುದನ್ನು ಕಳುಹಿಸುವವರ ಹಾಗೂ ಸ್ವೀಕರಿಸುವವರ ವಿಳಾಸ, ಇನ್ನಿತರ ಮಾಹಿತಿಯ ಮೂಲಕ ಖಚಿತಪಡಿಸಿಕೊಂಡು ಅವುಗಳನ್ನು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರದಂತೆ ವಿಲೇವಾರಿ ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದರು.
ಬಿಟ್ ಕಾಯಿನ್ ಪತ್ತೆ
ಆರೋಪಿಗಳು ವಿಚಾರಣೆಯಲ್ಲಿ ತರಿಸಿಕೊಳ್ಳುವವರ ಹಾಗೂ ಡ್ರಗ್ಸ್ ಪೆಂಡ್ಲರ್ ಗಳ ಮಾಹಿತಿ ಪಡೆದು ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು. ಮಾದಕ ವಸ್ತುಗಳನ್ನು ತರಿಸಿಕೊಳ್ಳುವ ಆರೋಪಿಗಳಿಗೆ ಬಿಟ್ ಕಾಯಿನ್ ಹೇಗೆ ದೊರೆಯುತ್ತಿದ್ದವು ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಹೇಳಿದರು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಅಧಿಕಾರಿಗಳ ತಂಡಕ್ಕೆ 50 ಸಾವಿರ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್, ರವಿಕುಮಾರ್, ಅವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








