ಬೆಂಗಳೂರು
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಮೂರು ತಿಂಗಳು ಕಳೆದಿದ್ದು, ಅವರಿಗೆ ಇನ್ನೂ ಪ್ರತಿಪಕ್ಷ ನಾಯಕ ಸ್ಥಾನದ ಸವಲತ್ತು ದೊರೆತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಪೂರ್ಣಗೊಂಡಿದ್ದು, ಆರನೇ ತಿಂಗಳು ನಡೆಯುತ್ತಿದೆ. ಜತೆಗೆ ಮೂವರು ಉಪ ಮುಖ್ಯಮಂತ್ರಿಗಳು, ಸಂಪುಟದ ಸದಸ್ಯರು ಸರ್ಕಾರಿ ಸವಲತ್ತು ಬಳಸಿಕೊಳ್ಳುತ್ತಿದ್ದಾರೆ.
ಆದರೆ ಸಿದ್ದರಾಮಯ್ಯ ಅವರಿಗೆ ಮಾತ್ರ ಪ್ರತಿಪಕ್ಷ ನಾಯಕ ಸ್ಥಾನದ ಸವಲತ್ತು ಲಭಿಸಲ್ಲ. ವಿಪಕ್ಷ ನಾಯಕರಾದವರಿಗೆ ವಿಧಾನಸಭೆ ಸಚಿವಾಲಯದಿಂದ ವಾಹನ ಹಾಗೂ ಆಪ್ತ ಸಹಾಯಕರ ನಿಯೋಜನೆ ಮಾಡಲಾಗುತ್ತದೆ.ಹಾಗೆಯೇ ಪ್ರತಿ ತಿಂಗಳು ಪ್ರತ್ಯೇಕ ವೇತನ, ಭತ್ಯೆ ನೀಡಬೇಕು.ಆದರೆ ಇದ್ಯಾವುದೂ ಸಿದ್ದರಾಮಯ್ಯ ಅವರಿಗೆ ದೊರಕಿಲ್ಲ.
ಸಿದ್ಧರಾಮಯ್ಯ ಅವರು ತಮಗೆ ಆಪ್ತ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದು, ಅದಕ್ಕೆ ಇನ್ನೂ ಉತ್ತರ ದೊರೆತಿಲ್ಲ. ವಿಪಕ್ಷ ನಾಯಕರಿಗೆ ಹೊಸ ಕಾರು ಖರೀದಿಸಲು ಅನುಮತಿ ನೀಡುವುದು ಸಂಪ್ರದಾಯ. ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಅವರು ಔಪಚಾರಿಕವಾಗಿ ಪತ್ರ ಮುಖೇನ ಸವಲತ್ತುಗಳಿಗೆ ಮನವಿ ಮಾಡಿದ್ದರು. ಆದರೆ ಸಿದ್ಧರಾಮಯ್ಯ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಅಪ್ತ ಸಿಬ್ಬಂದಿ ನೇಮಕಕ್ಕೂ ಅವಕಾಶ ನೀಡಿಲ್ಲ ಎಂದು ಸಚಿವಾಲಯದ ಮೂಲಗಳು ಹೇಳಿವೆ.