ತುಮಕೂರು
ಪ್ರಧಾನಿ ನರೇಂದ್ರ ಮೋದಿಯವರು ಜನವರಿ 2 ರಂದು ತುಮಕೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ನಗರಕ್ಕೆ ಆಗಮಿಸಿ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದರು.
ಸಿದ್ಧಗಂಗಾ ಮಠ, ವಿವಿ ಆವರಣದಲ್ಲಿ ನಿರ್ಮಾಣವಾಗಿರುವ ಹೆಲಿಪ್ಯಾಡ್, ರೈತ ಸಮಾವೇಶ ನಡೆಯುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಭೇಟಿ ನೀಡಿ, ಅಲ್ಲಿನ ಅಂತಿಮ ಸಿದ್ಧತೆ ಪರಿಶೀಲನೆ ಮಾಡಿದರು. ನಂತರ ಪ್ರವಾಸಿಮಂದಿರದಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿ, ಪ್ರಧಾನಿಯವರ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವ ಕುರಿತು ಚರ್ಚೆ ನಡೆಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಜನವರಿ 2 ರಂದು ಮಧ್ಯಾಹ್ನ 2.15ಕ್ಕೆ ಮೋದಿಯವರು ಬೆಂಗಳೂರಿನಿಂದ ತುಮಕೂರಿಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿ, ಅಲ್ಲಿಂದ ಸಿದ್ಧಗಂಗಾ ಮಠಕ್ಕೆ ತೆರಳಿ, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸುವರು. ಈ ವೇಳೆ ಶ್ರೀಮಠದ ಅಧ್ಯಕ್ಷರಾದ ಸಿದ್ಧಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆಯುವರು.
ಈ ಸಂದರ್ಭದಲ್ಲಿ ಮಠದಲ್ಲಿ ಡಾ. ಶಿವಕುಮಾರಸ್ವಾಮೀಜಿಗಳ ವಸ್ತು ಸಂಗ್ರಹಾಲಯಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸುವರು. ನಂತರ ಮಠದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು ಎಂದು ಯಡಿಯೂರಪ್ಪ ಹೇಳಿದರು.ಅದು ಮುಗಿಸಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ ಪಾಲ್ಗೊಂಡು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯ ನಾಲ್ಕನೆ ಕಂತು ಬಿಡುಗಡೆಗೊಳಿಸುವರು.
ಈ ವೇಳೆ 21 ರಾಜ್ಯಗಳ 28 ಪ್ರಗತಿಪರ ರೈತರಿಗೆ ಕೇಂದ್ರ ಕೃಷಿ ಇಲಾಖೆ ನೀಡುವ ಕೃಷಿ ಕರ್ಮಣ ಪ್ರಶಸ್ತಿ ವಿತರಿಸುವರು. ಮಣಿಪುರ, ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು, ಉತ್ತರಖಂಡದ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಜನ ಭಾಗವಹಿಸುವ ನೀರೀಕ್ಷೆ ಇದೆ. ವಿಶಾಲ ಸಭಾಂಗಣ ಸಿದ್ಧವಾಗುತ್ತಿದೆ. ಹೆಚ್ಚಿನ ಜನ ಕಾಯಕ್ರಮ ವೀಕ್ಷಿಸಲು ಕಾಲೇಜು ಮೈದಾನದ ಸಮೀಪದ ರಸ್ತೆಗಳಲ್ಲಿ ಎಲ್ಇಡಿ ಪರದೆಗಳನ್ನು ಅಳವಡಿಸಿ, ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸಚಿವ ವಿ. ಸೋಮಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಮ್, ಮಾಜಿ ಶಾಸಕರಾದ ಡಾ.ಹುಲಿನಾಯ್ಕರ್, ಸುರೇಶ್ ಗೌಡ ಮತ್ತಿತರ ಮುಖಂಡರು ಹಾಜರಿದ್ದರು.