ಮೋದಿ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿಯಲ್ಲಿ ತಾಲ್ಲೂಕು ಆಡಳಿತ

ತುರುವೇಕೆರೆ:

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ತುಮಕೂರಿನಲ್ಲಿ ನಡೆಯಲಿರುವ ರೈತ ಸಮ್ಮಾನ್ ಕಾರ್ಯಕ್ರಮಕ್ಕೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕ ಮಸಾಲಾ ಜಯರಾಮ್ ತಿಳಿಸಿದ್ದಾರೆ.

   ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರನ್ನು ಬಹಳ ಗೌರವ ಭಾವನೆಯಿಂದ ಕಾಣುತ್ತಿದ್ದಾರೆ. ರೈತರು ಸ್ವಾವಲಂಭಿ ಜೀವನ ನಡೆಸಲು ಬೇಕಾದ ಮೂಲಭೂತ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದಾರೆ.

    ಪ್ರಧಾನಿಗಳ ಆಶಯದಂತೆ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ರೈತ ಸಮ್ಮಾನ್ ಕಾರ್ಯಕ್ರಮದಲ್ಲಿ ಮೋದಿಯವರು ರೈತರೊಂದಿಗೆ ನೇರ ಸಂವಾದ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಹಲವಾರು ರೈತ ಪರ ಯೋಜನೆಗಳ ಕುರಿತು ಕಾರ್ಯಕ್ರಮದಲ್ಲಿ ಸಂವಾದ ನಡೆಯಲಿದೆ. ಅಲ್ಲದೇ ರೈತರ ಅಗತ್ಯತೆ ಬಗ್ಗೆ ರೈತರಿಂದಲೇ ಮಾಹಿತಿ ಪಡೆಯುವ ವಿನೂತನ ಕಾರ್ಯಕ್ರಮ ಇದಾಗಿದೆ. ಸಾಮಾನ್ಯ ರೈತರೊಂದಿಗೆ ಮೋದಿಯವರು ಚರ್ಚಿಸಿ ರೈತರಿಂದ ಬರುವ ಉತ್ತಮ ಸಲಹೆಗಳನ್ನು ಸ್ವೀಕರಿಸಿ ಮುಂಬರುವ ದಿನಗಳಲ್ಲಿ ಜಾರಿಗೆ ತರುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

ರೈತರಿಗೆ ಸನ್ಮಾನ

    ರಾಷ್ಟ್ರದಲ್ಲಿ 40 ಮಂದಿ ರೈತರನ್ನು ಮೋದಿಯವರು ಸನ್ಮಾನಿಸುವ ಯೋಜನೆ ಇದೆ. ಲಕ್ಷಾಂತರ ರೈತರು ಈ ಸನ್ಮಾನಕ್ಕೆ ಭಾಜನರಾಗಲು ಬಯಸಿ ಆನ್ ಲೈನ್ ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. 40 ಮಂದಿಯನ್ನು ಆಯ್ಕೆ ಮಾಡುವ ಸಲುವಾಗಿ ನಡೆದ ಲಕ್ಕಿ ಡ್ರಾ ನಲ್ಲಿ ತಾಲೂಕಿನ ವೆಂಕಟಾಪುರದ ರೈತ ಮಹಲಿಂಗಣ್ಣ ಆಯ್ಕೆಯಾಗುವ ಮೂಲಕ ಪ್ರಧಾನಿ ಮೋದಿಯವರಿಂದ ಸನ್ಮಾನ ಸ್ವೀಕರಿಸುವ ತಾಲೂಕಿನ ಏಕೈಕ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

125 ವಾಹನ

    ಜನವರಿ 2 ರಂದು ನಡೆಯಲಿರುವ ರೈತ ಸಮ್ಮಾನ್ ಕಾರ್ಯಕ್ರಮಕ್ಕೆ ರೈತರನ್ನು ಕರೆತರುವ ಸಲುವಾಗಿ ತಾಲ್ಲೂಕಿನ ಒಟ್ಟು 125 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ಬೆಳಗ್ಗೆ 7.30 ಕ್ಕೆ ವಾಹನಗಳು ಸಿದ್ದವಿರುವುದು. ಅಧಿಕಾರಿಗಳೊಂದಿಗೆ ಕೈಜೋಡಿಸಲಿರುವ ಬಿಜೆಪಿಯ ಕಾರ್ಯಕರ್ತರು ರೈತರನ್ನು ತುಮಕೂರಿಗೆ ಕರೆತರುವ ಕಾರ್ಯ ಮಾಡಲಿದ್ದಾರೆ. ರೈತ ಸಮ್ಮಾನ್ ಕಾರ್ಯಕ್ರಮಕ್ಕೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದಲೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ.

    ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು ಅಧಿಕಾರಿಗಳು ಬಹಳ ಮುತುವರ್ಜಿಯಿಂದ ರೈತರನ್ನು ಕರೆತಂದು ಅವರನ್ನು ಸುರಕ್ಷಿತವಾಗಿ ಮನೆಗೆ ಕಳಿಸುವ ಜವಾಬ್ದಾರಿಯನ್ನು ಮಾಡಬೇಕು. ಮಧ್ಯಾಹ್ನ ಉಪಹಾರದ ವ್ಯವಸ್ಥೆಯನ್ನು ಆಯಾ ಬಸ್ ನಲ್ಲೇ ವ್ಯವಸ್ಥೆ ಮಾಡಲಾಗಿದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿರುವುದರಿಂದ ಸಾರ್ವಜನಿಕರು ರೈತಾಪಿಗಳು ಮತ್ತು ಪಕ್ಷದ ಕಾರ್ಯಕರ್ತರು ರೈತ ಸಮ್ಮಾನ್ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶಾಸಕರು ವಿನಂತಿಸಿಕೊಂಡಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ನಯೀಮ್ ಉನ್ನಿಸ್ಸಾ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಯಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap