ಬೆಂಗಳೂರು
ಚಂದ್ರಯಾನ 2 ಯೋಜನೆಯ ವೈಫಲ್ಯದಿಂದ ಸಂಸ್ಥೆಯ ಯಾವುದೇ ಇತರ ಬಾಹ್ಯಾಕಾಶ ಯೋಜನೆಗಳಲ್ಲಿ ಹಿನ್ನೆಡೆಯಾಗಿಲ್ಲ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 2019ರಲ್ಲಿ ನಿರೀಕ್ಷಿಸಿದಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಲಾಗಲಿಲ್ಲ. ಇದಕ್ಕೆ ಚಂದ್ರಯಾನ 2 ಯೋಜನೆ ಕಾರಣವಲ್ಲ. ಕೆಲ ಯೋಜನೆಗಳ ಹಾರ್ಡ್ ವೇರ್ ಮತ್ತಿತರರ ಉಪಕರಣಗಳು ಸಿದ್ಧವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳು ಉಡಾವಣೆ ವಿಳಂಬವಾಯಿತು. 2020ರ ಮಾರ್ಚ್ ಒಳಗೆ ಕಳೆದ ವರ್ಷದ ಎಲ್ಲಾ ಯೋಜಿತ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.
ವೇಗ ನಿಯಂತ್ರಿಸಲಾಗದ್ದಕ್ಕೆ ವೈಫಲ್ಯ;
ಚಂದ್ರಯಾನ 2 ನ ಲ್ಯಾಂಡರ್ ಮತ್ತು ರೋವರ್ ನಾಲ್ಕು ಹಂತಗಳಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಿತ್ತು. ಮೊದಲ ಹಂತವಾದ ರಾಕ್ ಬ್ರೇಕಿಂಗ್ ಯಶಸ್ವಿಯಾಗಿತ್ತು. ಎರಡನೆಯ ಕ್ಯಾಮೆರಾ ಪೋಸ್ಟಿಂಗ್ ಹಂತದಲ್ಲಿ ಅದರ ವೇಗ ನಿರೀಕ್ಷೆಯಷ್ಟು ಇಳಿಮುಖವಾಗಲಿಲ್ಲ. ಇದರಿಂದ ನಂತರ ಹಂತಗಳು ಆ ವೇಗವನ್ನು ತಡೆದುಕೊಳ್ಳಲಿಲ್ಲ. ಇದಕ್ಕೆ ಉಪಗ್ರಹದೊಳಗಿನ ಆಂತರಿಕ ಸಮಸ್ಯೆಯೇ ಕಾರಣ. ಅದು ಅಲ್ಲಿನ ವಾತಾವರಣದೊಂದಿಗೆ ಹೊಂದಿಕೊಳ್ಳಲಿಲ್ಲ. ಯೋಜನೆ ವೈಫಲ್ಯದ ಕುರಿತು ಪರಿಶೀಲಿಸಲು ರಚಿಸಿದ್ದ ಇಸ್ರೋ ಮಾಜಿ ಅಧ್ಯಕ್ಷ ನೇತೃತ್ವ ಸಮಿತಿ ಕೂಡ ಇದೇ ಆಭಿಪ್ರಾಯ ವ್ಯಕ್ತಪಡಿಸಿದೆ. ಈ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಜೊತೆಗೆ, ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಕೆಳಗಿಳಿದ ಸ್ಥಳವನ್ನು ಪತ್ತೆ ಹಚ್ಚಿದ ಐಟಿ ಉದ್ಯೋಗಿಯ ಪ್ರಯತ್ನವನ್ನು ಶ್ಲಾಘಿಸಿದ ಸಿವನ್, ಈಗ ನಮಗೆ ಲ್ಯಾಂಡರ್ ಎಲ್ಲಿ ಪತನಗೊಂಡಿದೆ, ಯಾವ ಸ್ಥಳದಲ್ಲಿದೆ ಎಂದು ತಿಳಿದಿದೆ. ಆದರೆ, ಸಂಸ್ಥೆಯ ತಂತ್ರಗಾರಿಕೆಯ ಹಿನ್ನೆಲೆಯಲ್ಲಿ ನಾವು ಅದನ್ನು ಬಿಡುಗಡೆಗೊಳಿಸುತ್ತಿಲ್ಲ ಎಂದರು. ಈ ವೈಫಲ್ಯದಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಅದರಿಂದಲೇ ಹೊಸ ಯೋಜನೆಯೊಂದಿಗೆ ಮುಂದುವರಿಯುತ್ತೇವೆ. ಈ ಸಂಬಂಧ ಯಾವುದೇ ಇತರ ರಾಷ್ಟ್ರಗಳ ನೆರವು ಪಡೆಯುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








