ಚಿಕ್ಕನಾಯಕನಹಳ್ಳಿ
ಈ ವರ್ಷದ ಮಾರ್ಚಿ 31ರೊಳಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಹತ್ತು ಸಾವಿರ ಕೊಳವೆ ಬಾವಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್. ಶಾಲಾ ಮೈದಾನದಲ್ಲಿ ಒಂದು ನೂರು ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 240 ಕೋಟಿ ರೂಗಳ ಅಂದಾಜಿನಲ್ಲಿ 1500 ಎಕರೆ ಜಮೀನು ಅಭಿವೃದ್ಧಿಪಡಿಸಿ ಮಾರ್ಚಿ 31ರೊಳಗೆ ನಿವೇಶನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ನಾನೂ ಸಹ ಹೊಸ ವರ್ಷ ಆಚರಣೆ ಮಾಡುವುದಿಲ್ಲ. ಹಾಗಾಗಿ ಮಾಧುಸ್ವಾಮಿಯವರ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಜೊತೆಗೆ ಮೇಲನಹಳ್ಳಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಕಾಂಪೌಂಡ್ ಹಾಗೂ ಕ್ವಾಟ್ರಸ್ಗಾಗಿ 2ನೇ ಹಂತವಾಗಿ ಇನ್ನೂ 11ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು.
ದೀನದಲಿತರಿಗೆ, ಬಡವರಿಗೆ ಅನುಕೂಲವಾಗಲೆಂದು ಸಮಾಜ ಕಲ್ಯಾಣ ಇಲಾಖೆಯಿಂದ ಸಾಕಷ್ಟು ಯೋಜನೆಗಳನ್ನು ತರಲಾಗುತ್ತಿದೆ. ಬಿಜೆಪಿ ರಾಜ್ಯ ಸರ್ಕಾರ ರಚಿತವಾದ ನಂತರ ನಿವೇಶನಗಳಿರದ ಬಡವರಿಗೆ ನಿವೇಶನಗಳನ್ನು ಕೊಡಿಸಲು ಜೆ.ಸಿ.ಮಾಧುಸ್ವಾಮಿಯವರು ಸಂಪುಟದಲ್ಲಿ ಒತ್ತಡ ತಂದು ಕೊಡಿಸಿದ್ದಾರೆ. ಅವರ ಆಲೋಚನೆ ನಮ್ಮ ಆಲೋಚನೆಗಳೆರಡೂ ಒಂದೇ ರೀತಿ ಇರುವುದರಿಂದ ಯಾವುದೇ ಕ್ಷೇತ್ರದಲ್ಲಿ ವಸತಿ ಶಾಲೆ ಆರಂಭವಾದರೆ ಅಲ್ಲಿನ ಸ್ಥಳೀಯರಿಗೆ ಶೇ.25ರಷ್ಟು ಮೀಸಲಾತಿ ನೀಡಬೇಕೆಂದು ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದರು.
ರಾಜ್ಯದಲ್ಲಿ ಮಂಜೂರು ಮಾಡಿರುವ 8 ವಸತಿ ಶಾಲೆಗಳ ಕಟ್ಟಡಗಳ ಪೈಕಿ ಮೂರು ವಸತಿ ಶಾಲೆಗಳನ್ನು ಈ ತಾಲ್ಲೂಕಿಗೆ ನೀಡಲಾಗಿದೆ. ಈಗ ಶಂಕುಸ್ಥಾಪನೆಯಾಗಿರುವ ಕಾಮಗಾರಿಗಳಿಗೆ ಮುಂದಿನ ವರ್ಷ ನಾನೇ ಬಂದು ಉದ್ಘಾಟನೆ ನೆರವೇರಿಸುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏನೇನು ಯೋಜನೆಗಳನ್ನು ಮಂಜೂರು ಮಾಡುತ್ತಾರೆ ಅವುಗಳನ್ನೆಲ್ಲಾ ತಾಲ್ಲೂಕಿಗೆ ತರಲಾಗುತ್ತಿದೆ. ಇಲ್ಲಿ ಇಂತಹ ಸಮಸ್ಯೆಯಿದೆ ಎಂದು ಯಾರೂ ಸಹ ಅರ್ಜಿ ಕೊಡಬೇಕಿಲ್ಲ. ತಾಲ್ಲೂಕಿಗೆ ಇಷ್ಟು ಅನುದಾನ ಯೋಜನೆಗಳನ್ನು ತರಲು 3-4 ವರ್ಷ ಬೇಕಾಗುತ್ತಿತ್ತು, ಆದರೆ ಸರ್ಕಾರ ರಚನೆಯಾದ ಕೆಲವೆ ತಿಂಗಳುಗಳಲ್ಲಿ ಅನುದಾನ ತರಲಾಗುತ್ತಿದೆ. ಇವೆಲ್ಲಾ ಸಾಧ್ಯವಾಗಿದ್ದು ನಿಮ್ಮಗಳ ಶಕ್ತಿಯಿಂದ ಎಂದ ಅವರು, ಈ ತಾಲ್ಲೂಕಿನ ಪ್ರಮುಖವಾದ ಕೆಲಸ ಎಂದರೆ ಹೇಮಾವತಿ ನಾಲೆಯನ್ನು ತಾಲ್ಲೂಕಿಗೆ ಹರಿಸುವುದು, ಕಳೆದ ಡಿಸೆಂಬರ್ನಲ್ಲೇ ನೀರು ತರಬೇಕಾಗಿತ್ತು. ಆದರೆ ಮಳೆ ಬಂದು ತೊಂದರೆಯಾದ್ದರಿಂದ ತಡವಾಗಿದೆ ಎಂದರು.
ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗಾಗಿ 68 ಕೋಟಿ ರೂಗಳನ್ನು ಮಂಜೂರು ಮಾಡಿಸಲಾಗಿದೆ ಎಂದರಲ್ಲದೆ, ತಾಲ್ಲೂಕಿನಲ್ಲಿ 400 ಫಲಾನುಭವಿಗಳನ್ನು ಕೊಳವೆ ಬಾವಿ ಕೊರೆಯುವ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದರು.ಗೋವಿಂದ ಕಾರಜೋಳರವರು ಸಮಾಜಕಲ್ಯಾಣ ಇಲಾಖೆಯಿಂದ ಬರುವ 100 ಕೊಳವೆ ಬಾವಿಗಳನ್ನು ನಮ್ಮ ಕ್ಷೇತ್ರಕ್ಕೆ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಬರುವ 100 ಕೊಳವೆ ಬಾವಿಗಳನ್ನು ಅವರ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ವಿತರಣೆ ಮಾಡಲು ನಾವಿಬ್ಬರೂ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.
ತಾಲ್ಲೂಕಿನ ಕಾತ್ರಿಕೆಹಾಳ್, ಹಂದನಕೆರೆ, ಮೇಲನಹಳ್ಳಿ, ಸಾಸಲು, ಚಿ.ನಾ.ಹಳ್ಳಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ತುರುವೇಕೆರೆ ಶಾಸಕ ಮಸಲೆ ಜಯರಾಂ, ಜಿ.ಪಂ.ಉಪಾಧ್ಯಕ್ಷೆ ಶಾರದನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಜಿ.ಪಂ. ಸಿಇಓ ಶುಭಾಕಲ್ಯಾಣ, ಜಿ.ಪಂ.ಸದಸ್ಯೆ ಮಂಜುಳಮ್ಮ, ವೈ.ಹೆಚ್.ಹುಚ್ಚಯ್ಯ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಸಿಂಗದಹಳ್ಳಿರಾಜ್ಕುಮಾರ್, ಹೆಚ್.ಆರ್.ಶಶಿಧರ್, ಶೈಲಾಶಶಿಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ