ತಿಪಟೂರು
ಡಾ ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯಿದೆ ಜಾರಿಗೆ ಒತ್ತಾಯಿಸಿ ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರಿಗೆ 1.5 ಟಿಎಂಸಿ ನೀರು ಹಂಚಿಕೆಗೆ ಆಗ್ರಹಿಸಿ ಜನವರಿ 8 ಅಖಿಲ ಭಾರತ ಮುಷ್ಕರ ಹಾಗೂ ಗ್ರಾಮೀಣ ಭಾರತ ಬಂದ್‍ಗೆ ಕರೆ ನೀಡಲಾಗಿದೆ.
ಈ ವೇಳೆ ಮಾತನಾಡಿದ ಟೂಡಾ ಮಾಜಿ ಅಧ್ಯಕ್ಷ ಹಾಗೂ ಜನಸ್ಪಂದನ ಟ್ರಸ್ಟ್ನ ಅಧ್ಯಕ್ಷ ಸಿ ಬಿ ಶಶಿಧರ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಮೇಲೆ ಸರ್ಜಿಕಲ್ ದಾಳಿ ನಡೆಸುತ್ತಿರುವುದು ಖಂಡನೀಯ. ಒಂದು ಕಡೆ ಭೂಸ್ವಾಧೀನದಿಂದ ಭೂಮಿಯನ್ನು ಕಸಿದುಕೊಂಡರೆ ಮತ್ತೊಂದು ಕಡೆ ರೈತರಿಗೆ ನೆಪಮಾತ್ರಕ್ಕೆ ಸನ್ಮಾನ ಮಾಡುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಆ ಮೂಲಕ ರೈತರ ಸಂತೈಸಲು ಪ್ರಯತ್ನ ಪಡುತ್ತಿದೆ.
ಆದರೆ ಯಾವುದೇ ಕಾರಣಕ್ಕೂ ರೈತರನ್ನು ಅವರ ಕಷ್ಟಗಳನ್ನು ಹೋಗಲಾಡಿಸುವ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲದಿರುವುದು ಶೋಚನೀಯ. ಬೆಲೆ ಹೆಚ್ಚಳದಲ್ಲಿ ರೈತರನ್ನು ಮುಳುಗಿಸಲಾಗುತ್ತದೆ. ತನ್ನ ಭೂಮಿಯಲ್ಲಿ ಬೆಳೆ ತೆಗೆಯಲು ಅಗತ್ಯವಾಗಿ ಬೇಕಾದ ನೀರಾವರಿ ವ್ಯವಸ್ಥೆಗಾಗಿ ರೈತರು ಹಗಲಿರುಳು ಒದ್ದಾಡುತ್ತಿದ್ದಾರೆ ಎಂದು ಇದೇ ವೇಳೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಆರ್.ಕೆ.ಎಸ್‍ನ ಸಂಚಾಲಕ ಸ್ವಾಮಿ, ಡಾ ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಜಾರಿಗೆ ಒತ್ತಾಯಿಸಿ, ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರಿಗೆ 1.5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಇದೇ ಬುಧವಾರ ಜನವರಿ ಎಂಟರಂದು ತಿಪಟೂರಿನಲ್ಲಿ ಭಾರತ್ ಬಂದ್ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನಾ ಮೆರವಣಿಗೆಯು ಬೆಳಗ್ಗೆ ಹತ್ತು ಮೂವತ್ತಕ್ಕೆ ಕೆರೆ ಕೋಡಿ ಸರ್ಕಲ್ನಿಂದ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಜನ ರೈತರು ಪಾಲ್ಗೊಂಡು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಈ ಹಿನ್ನೆಲೆಯಲ್ಲಿ ಜನವರಿ ಎಂಟರಂದು ರಾಜ್ಯದ ರೈತರು ತಾವು ಬೆಳೆಯುವ ತರಕಾರಿಗಳು ಇನ್ನಿತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಾರದು.
ಅದೇ ರೀತಿಯಲ್ಲಿ ನಗರ ಪಟ್ಟಣಗಳಲ್ಲಿರುವ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದೆಂದು ಎಐಕೆಎಸ್ ಸಿಸಿ ಕರೆ ನೀಡುತ್ತದೆ. ಈ ಹೋರಾಟಕ್ಕೆ ನಗರವಾಸಿಗಳ ಸೌಹಾರ್ದ ಬೆಂಬಲವನ್ನು ಕೋರಿ ಅಂದು ನಡೆಯುವ ಮುಷ್ಕರಕ್ಕೆ ತಾಲ್ಲೂಕಿನ ಎಲ್ಲ ವರ್ಗದ ಜನತೆ ಭಾಗವಹಿಸಬೇಕು ಎಂದು ಅವರು ವಿನಂತಿಸಿಕೊಂಡರು.
ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ರೈತ ಕೃಷಿ ಕಾರ್ಮಿಕ ಸಂಘ, ಬೆಲೆ ಕಾವಲು ಸಮಿತಿ, ಸೌಹಾರ್ದ ತಿಪಟೂರು, ಜನಸ್ಪಂದನ ಟ್ರಸ್ಟ್, ಸಿಐಟಿಯು, ಕರ್ನಾಟಕ ಪ್ರಾಂತ್ಯ ರೈತ ಸಂಘ, ದಕ್ಷಿಣ ಒಳನಾಡು ನೀರಾವರಿ ಸಮಿತಿ, ಜಯ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ, ಕಲ್ಪತರು ರೈತ ಬಂಧು ವೇದಿಕೆ, ದಲಿತ ಸಂಘರ್ಷ ಸಮಿತಿ, ನವ ಕರ್ನಾಟಕ ಯುವಶಕ್ತಿ, ಡಾಕ್ಟರ್ ಅಂಬೇಡ್ಕರ್ ಧಮ್ಮ , ಮುಸ್ಲಿಂ ಮುಖಂಡರು ಜನಜಾಗೃತಿ ಸಂಸ್ಥೆ ಹಾಗೂ ತಾಲ್ಲೂಕಿನ ವಿವಿಧ ಸಂಘಟನೆಗಳು ಕೂಡ ಬಂದ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
