ನಗರದಲ್ಲಿ ಆಶಾ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ಚಿತ್ರದುರ್ಗ;

     ಕನಿಷ್ಟ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಅಗ್ರಹಿಸಿ ಆಶಾ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸಂಯೋಜನೆ (ಆಲ್ ಇಂಡಿಯಾ ಯು.ಟಿ.ಯು.ಸಿ) ನೇತೃತ್ವದಲ್ಲಿ ನೂರಾರು ಮಂದಿ ಆಶಾ ಕಾರ್ಯಕರ್ತರು ತಮ್ಮ ಕೆಲಸ ಸ್ಥಗಿತಗೊಳಿಸಿ ಮೆರವಣಿಗೆಯ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

     ಆಲ್ ಇಂಡಿಯಾ ಯು.ಟಿ.ಯು.ಸಿ ಜಿಲ್ಲಾ ಘಟಕದ ಸಂಚಾಲಕ ರವಿಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಆಶಾ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಶಿಸ್ತು ಕ್ರಮದ ಬೆದರಿಕೆ ಒಡ್ಡುತ್ತಿದೆ. ಹೋರಾಟ ಮಾಡುವುದು ಕಾರ್ಮಿಕರ ಹಕ್ಕು. ಹಾಗೆÀಯೇ ಸೇವಾ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ. ಸರ್ಕಾರ ತನ್ನ ಕರ್ತವ್ಯದಿಂದ ನುಣಿಚಿಕೊಳ್ಳುವುದನ್ನು ಬಿಟ್ಟು ನ್ಯಾಯಯುತವಾಗಿ ದುಡಿದ 15 ತಿಂಗಳ ಬಾಕಿ ಉಳಿಸಿಕೊಂಡಿರುವ ಎಂ.ಸಿ.ಟಿ.ಎಸ್ ಪ್ರೋತ್ಸಾಹಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

    ಇದೇ ಸಂದರ್ಭದಲ್ಲಿ ಹೋರಾಟ ಬೆಂಬಲಿಸಿ ಮಾತನಾಡಿದÀ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಜೆ.ಯಾದವರೆಡ್ಡಿ ,“ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಮಾಸಿಕ ವೇತನವೇ ರೂ.18,000/- ಇದೆ. ಆದರೆ ಆಶಾ ಕಾರ್ಯಕರ್ತರು ಕೇಳುತ್ತಿರುವ ವೇತನ ಕೇವಲ 12,000/-ರೂ. ಅದನ್ನೂ ಕೊಡಲಾಗದ ಸರ್ಕಾರ ಹೋರಾಟ ನಿರತರ ಗೌರವಧನ ಕಟಾಯಿಸುವುದಾಗಿ ಹೇಳುತ್ತಿರುವುದು ತೀರಾ ಅಮಾನವೀಯವಾಗಿದೆ ಎಂದು ದೂರಿದರು

    ಸರ್ಕಾರವು ಆಶಾಗಳನ್ನು ಕೇವಲ ಮನುಷ್ಯರನ್ನಾಗಿ ಸಹ ನೋಡುತ್ತಿಲ್ಲ. ಇಂದು ಖಂಡನೀಯ. ಹೋರಾಟನಿರತರನ್ನು ಹೆದರಿಸುವುದು ಹೇಡಿಗಳ ಲಕ್ಷಣ. ಈ ಅನಾಗರಿಕ ಕ್ರಮವನ್ನು ಕೈಬಿಟ್ಟು ಸರ್ಕಾರ ಕನಿಷ್ಟ ನೈತಿಕತೆಯನ್ನು ಪ್ರದರ್ಶಿಸಿ ಆಶಾಗಳ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು” ಎಂದು ಒತ್ತಾಯಿಸಿದರು.

     ಆಶಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ಮಾತನಾಡಿ, “ಕೇವಲ ದಿನದಲ್ಲಿ 2 ಗಂಟೆ ದುಡುದರೂ ಸಾಕು ಎಂದು ಹೇಳಿ ನಮ್ಮನ್ನು ನೇಮಕ ಮಾಡಿಕೊಂಡ ಸರ್ಕಾರ ಇಂದು ನಮ್ಮಿಂದ ಹಗಲು-ಇರಳು ಎಂಬ ಪರಿವೆಯೇ ಇಲ್ಲದೇ ದುಡಿಸಿಕೊಳ್ಳುತ್ತಿದೆ. ಆದರೆ ಕೊಡಬೇಕಾದ ಕನಿಷ್ಠ ಗೌರವಧನವನ್ನೂ ಕೊಡದೇ ಇರುವುದು ನಾಚಿಕೆಗೇಡಿನ ವಿಷಯ. ತನ್ನ ಗೌರವವನ್ನು ಉಳಿಸಿಕೊಳ್ಳುವ ಕೆಲಸ ಮಾಡುವ ಬದಲು ಸರ್ಕಾರ ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಈ ಹೇಡಿತನದ ಬೆದರಿಕೆಗಳಿಗೆಲ್ಲ ನಾವೂ ಹಿಂಜರಿಯುವುದಿಲ್ಲ. ನಮ್ಮ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಮಾತ್ರವಲ್ಲ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತದೆ” ಎಂದು ಎಚ್ಚರಿಸಿದರು.

     ಶ್ರೀಮತಿ ಮಂಜುಳಾ ಅವರು ಮಾತನಾಡಿ, ಆಂದ್ರಪ್ರದೇಶದಲ್ಲಿ ಆಶಾಗಳಿಗೆ ಮಾಸಿಕ ಗೌರವಧನವನ್ನು ರೂ.10,000ಗಳಿಗೆ ಏರಿಕೆ ಮಾಡಿದ್ದಾರೆ. ಆದರೆ ನಮ್ಮಲ್ಲಿ ನ್ಯಾಯ ಕೇಳಿದರೆ, ನಮ್ಮ ಗೌರವಧನ ಮುರಿಯುವುದಾಗಿ ಹೆದರಿಸುತ್ತಿದ್ದಾರೆ. ಸರ್ಕಾರಕ್ಕೆ ನಾವು ಕೇಳುವುದಿಷ್ಟೆ, ಮುಂದಿನ ದಿನಗಳಲ್ಲಿ ನಡೆಯಲಿರುವ ಪೊಲಿಯೋ ಅಭಿಯಾನದಲ್ಲಿ ನಾವು ಪಾಲ್ಗೊಳ್ಳುವುದಿಲ್ಲವೆಂದು ನಿರ್ಧರಿಸಿದರೆ ಏನು ನೀವು ಮಾಡುತ್ತೀರಿ?! ಎಂದು ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap