ನವದೆಹಲಿ:
ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿವಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ ಯು ಉಪ ಕುಲಪತಿ ಎಂ.ಜಗದೀಶ್ ಕುಮಾರ್ ಅವರನ್ನು ವಜಾಗೊಳಿಸುವುದೊಂದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.
ಜೆಎನ್ ಯು ಒಳಗೆ ನಡೆದ ಹಿಂಸಾಚಾರ ಅಸಮಾಧಾನ ತಂದಿದೆ. ಅಲ್ಲದೇ ಎಂಎಚ್ ಆರ್ ಡಿ ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿದೆ ಎಂದು ಎಚ್ ಆರ್ ಡಿ ಕಾರ್ಯದರ್ಶಿ ಅಮಿತ್ ಖಾರೆ ತಿಳಿಸಿದ್ದಾರೆ.
ನಿಯೋಗದ ಜತೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಜೆಎನ್ ಯುನಲ್ಲಿ ನಡೆದ ಘಟನೆ ತುಂಬಾ ವಿಷಾದಕರ. ವಿದ್ಯಾರ್ಥಿಗಳು ಸಮಸ್ಯೆಯ ಪಟ್ಟಿಯನ್ನು ನೀಡಿದ್ದಾರೆ. ಉಪನ್ಯಾಸಕರು ಕೂಡಾ ಆಡಳಿತ ಮಂಡಳಿ ನಡುವೆ ಇರುವ ಸಮಸ್ಯೆ ಪಟ್ಟಿಯನ್ನು ನೀಡಿದ್ದಾರೆ. ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ಉಪಕುಲಪತಿ ಮತ್ತು ಉಪನ್ಯಾಸಕ ವರ್ಗದ ಸಭೆಯನ್ನು ಕರೆದಿರುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಲು ಅವರ ಜತೆಯೂ ಸಭೆ ನಡೆಸುವುದಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
