ತುಮಕೂರು
ದೇಶದಲ್ಲಿ “ಸ್ವಚ್ಛ ಸರ್ವೇಕ್ಷಣ್-2020” ಅಭಿಯಾನ ಆರಂಭವಾಗಿದ್ದು, ಈ ಸ್ಪರ್ಧೆಯಲ್ಲಿ ತುಮಕೂರು ನಗರವೂ ಭಾಗಿಯಾಗಿದೆ. ಈ ಸ್ಪರ್ಧೆಯಲ್ಲಿ ತುಮಕೂರು ನಗರವು ಪ್ರಥಮ ಸ್ಥಾನ ಪಡೆದು ‘ಸ್ವಚ್ಛ ತುಮಕೂರು’ ಎಂಬ ಖ್ಯಾತಿಗೆ ಬರಬೇಕಾದರೆ ಜನಾಭಿಪ್ರಾಯ ಅತಿಮುಖ್ಯ.
ಆದ್ದರಿಂದ ನಗರದ ನಾಗರಿಕರು ಈ ನಿಟ್ಟಿನಲ್ಲಿ ತಮ್ಮ ಅನಿಸಿಕೆಗಳನ್ನು ದಾಖಲಿಸಬೇಕು ಎಂದು ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ನಗರದ ಜನತೆಗೆ ಮನವಿ ಮಾಡಿಕೊಂಡರು.ಅವರು ಶುಕ್ರವಾರ ಮಧ್ಯಾಹ್ನ ನಗರದ ಬಿ.ಜಿ.ಎಸ್. (ಟೌನ್ ಹಾಲ್) ವೃತ್ತದಲ್ಲಿ ಪಾಲಿಕೆ ವತಿಯಿಂದ ಜನಜಾಗೃತಿ ಮೂಡಿಸಲು ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಸ್ವಚ್ಚ ಸರ್ವೇಕ್ಷಣ್‍ಗೆ ಸಂಬಂಧಿಸಿದ ವೆಬ್ ಸೈಟ್ ತೆರೆದು ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತುಮಕೂರಿಗೆ ನಂಬರ್ 1 ಸ್ಥಾನ ಸಿಗುವಂತೆ ಮಾಡಬೇಕು. ತುಮಕೂರು ನಂಬರ್ 1 ಆದರೆ ಅದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗುತ್ತದೆ ಎಂದು ಅವರು ಹೇಳಿದರು.
ಟೌನ್ ಹಾಲ್ ವೃತ್ತದಲ್ಲಿ ಪಾಲಿಕೆಯ ಆರೋಗ್ಯ ಶಾಖೆಯವರು ‘ಸ್ವಚ್ಛ ಸರ್ವೇಕ್ಷಣ್’ ಜನಜಾಗೃತಿಗಾಗಿ ನಿರುಪಯುಕ್ತ ಹಾಗೂ ಪುನರ್ ಬಳಕೆಯ ವಸ್ತುಗಳನ್ನು ಉಪಯೋಗಿಸಿಕೊಂಡು, ವಿನ್ಯಾಸವೊಂದನ್ನು ರೂಪಿಸಿದ್ದಾರೆ. ಲೋಗೋ ಒಂದನ್ನೂ ರೂಪಿಸಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್‍ಗಳಾದ ಮೃತ್ಯುಂಜಯ ಮತ್ತು ನಿಖಿತಾ, ಆರೋಗ್ಯ ನಿರೀಕ್ಷಕ ರುದ್ರೇಶ್ ಮೊದಲಾದವರು ಹಾಜರಿದ್ದರು.