ಬೆಂಗಳೂರು
ಗ್ರಾಮಪಂಚಾಯ್ತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಘಟಕ, ಇನ್ನಿತರ ಸಂಸ್ಥೆಗಳ ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಉಪಗ್ರಹ ಕೇಂದ್ರ ಉದ್ಘಾಟಿಸಿ ಮಾತನಾಡಿ ರಾಜ್ಯದ 6,621 ಗ್ರಾಮಪಂಚಾಯ್ತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಸೂಕ್ತ ಮಾರ್ಗದರ್ಶನವುಳ್ಳ ಸುತ್ತೋಲೆ ಬಿಡುಗಡೆ ಮಾಡಲಾಗುವುದು ಎಂದರು.
ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ ಪ್ರತಿ ಗ್ರಾಮಪಂಚಾಯ್ತಿಗೆ 20 ಲಕ್ಷ ಅನುದಾನ ನಿಗದಿಪಡಿಸಲಾಗಿದ್ದು, ಮೊದಲ ಹಂತದಲ್ಲಿ 10 ಲಕ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಎಂದ ಅವರು, ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು ಶುದ್ಧ ನೀರಿನ ಘಟಕಗಳ ಮಾಹಿತಿ, ಕಾರ್ಯನಿರ್ವಹಿಸುತ್ತಿರುವ ಘಟಕಗಳ ಮಾಹಿತಿ ಸೇರಿದಂತೆ ದುರಸ್ಥಿಯಲ್ಲಿರುವ ಘಟಕಗಳ ಮಾಹಿತಿಯನ್ನೊಳಗೊಂಡ ಫಲಕಗಳನ್ನು ಅಳವಡಿಸುವಂತೆ ಗ್ರಾಮಪಂಚಾಯ್ತಿ ಆಡಳಿತಕ್ಕೆ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಘನತ್ಯಾಜ್ಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು, ನೆರೆ ಪ್ರದೇಶಗಳಲ್ಲಿ ಹಾಳಾಗಿರುವ ಗ್ರಾಮೀಣ ಭಾಗದ ರಸ್ತೆ ದುರಸ್ಥಿಗಾಗಿ ರಾಜ್ಯಸರ್ಕಾರ 1500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ ಎಂದು ತಿಳಿಸಿದರು.
ಕೇಂದ್ರಕ್ಕೆ ಮಾಹಿತಿ
ದೇಶದ ಯಾವುದೇ ಸಂಘಟನೆಗಳಿಗೆ ದೇಶದ ಪರವಾಗಿ ಹಾಗೂ ದೇಶಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲು ಅವಕಾಶವಿದೆ. ದೇಶದ್ರೋಹಿ ಚಟುವಟಿಕೆಗಳಿಗೆ ಅವಕಾಶವಿಲ್ಲ, ಪೌರತ್ವ ತಿದ್ದುಪಡಿ ಕಾಯ್ದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಕಾಯ್ದೆ ಕುರಿತಂತೆ ಚರ್ಚೆ ನಡೆಸಲು ಅವಕಾಶವಿದೆ, ಆದರೆ, ಸಿಎಎ ಪರ ಪ್ರತಿಭಟನೆ ನಡೆಸುತ್ತಿದ್ದವರ ಹತ್ಯೆಗೆ ಪ್ರಯತ್ನಿಸಿರುವ ಸಂಘಟನೆ ನಿಷೇಧಕ್ಕೆ ರಾಜ್ಯಸರ್ಕಾರ ಚರ್ಚೆ ನಡೆಸಿ ಸಂಘಟನೆ ಚಟುವಟಿಕೆಗಳ ಕುರಿತು ಕೇಂದ್ರಕ್ಕೂ ಮಾಹಿತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಪಂಚಾಯತ್ರಾಜ್ ಪ್ರಧಾನ ಕಾರ್ಯದರ್ಶಿ ಉಮಾಮಹಾದೇವನ್, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತೀಫ್, ಪಂಚಾಯತ್ರಾಜ್ ಇಲಾಖೆ ನಿರ್ದೇಶಕಿ ಶೀಲಾನಾಗ್ ಅವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ